ಟಿ20 ವಿಶ್ವಕಪ್: ಭಾರತಕ್ಕೆ ಸೋಲುಣಿಸಿದ ಕಿವೀಸ್ ಪಡೆ; ವಿಶ್ವಕಪ್ ಕನಸು ಬಹುತೇಕ ಭಗ್ನ

ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಆಘಾತಕಾರಿ ಸೋಲುಂಡಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಲ್ಲಿಯೂ ಗೆಲುವು ಭಾರತ ತಂಡಕ್ಕೆ ಮರೀಚಿಕೆಯಾಗಿದೆ. ಗೆಲ್ಲಬೇಕಾಗಿದ್ದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಭಾರತ ತಂಡ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರುವ ಕನಸನ್ನು ಬಹುತೇಕ ಭಗ್ನಗೊಳಿಸಿದಂತಾಗಿದೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ನ್ಯೂಜಿಲೆಂಡ್‌ಗೆ ಕೇವಲ 111 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಕೇವಲ 14.3 ಓವರ್‌ಗಳಲ್ಲಿ ನ್ಯೂಜಿಲೆಂಡ್ ತಂಡ 2 ವಿಕೆಟ್ ಕಳೆದುಕೊಂಡು ಗೆದ್ದು ಬೀಗಿದೆ. ಈ ಮೂಲಕ ಕಿವೀಸ್ ಪಡೆ ಸೆಮಿಫೈನಲ್ ರೇಸ್‌ನಲ್ಲಿ ಮುನ್ನುಗ್ಗಿದೆ.

ಮತ್ತೊಮ್ಮೆ ಟಾಸ್ ಸೋತ ಕೊಹ್ಲಿ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ಟಾಸ್ ಸೋತಿದ್ದರು. ಹೀಗಾಗಿ ಎದುರಾಳಿ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೀಮ್ ಇಂಡಿಯಾವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆದರೆ ಭಾರತ ಬ್ಯಾಟಿಂಗ್‌ನಲ್ಲಿ ಮತ್ತೊಂದು ಆಘಾತಕಾರಿ ಪ್ರದರ್ಶನ ನೀಡಿತು. ಭಾರತದ ಬ್ಯಾಟಿಂಗ್ ಪಡೆಯ ವಿರುದ್ಧ ನ್ಯೂಜಿಲೆಂಡ್ ತಂಡದ ಬೌಲಿಂಗ್ ವಿಭಾಗ ಸಂಪೂರ್ಣ ಮೇಲುಗೈ ಸಾಧಿಸಿತು. ಹೀಗಾಗಿ ವಿರಾಟ್ ಕೊಹ್ಲಿ ಪಡೆ ಸುಲಭ ಗುರಿಯನ್ನು ಕಿವೀಸ್ ಪಡೆಯ ಮುಂದಿಟ್ಟಿತು.

ಅಗ್ರ ಕ್ರಮಾಂಕದಿಂದ ನೀರಸ ಪ್ರದರ್ಶನ
ಟೀಮ್ ಇಂಡಿಯಾ ಪರವಾಗಿ ಯಾವ ಜೋಡಿಯಿಂದಲೂ ಉತ್ತಮ ಜೊತೆಯಾಟ ನೀಡಲು ಸಾಧ್ಯವಾಗಲೇ ಇಲ್ಲ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ರಾಹುಲ್ ಜೋಡಿ ಕೇವಲ 11 ರನ್‌ಗಳ ಜೊತೆಯಾಟ ನೀಡಿದರು. 8 ಎಸೆತ ಎದುರಿಸಿ ಕೇವಲ 4 ರನ್‌ಗಳಿಸಿದ ಇಶಾನ್ ಕಿಶನ್ ನಿರಾಸೆ ಮೂಡಿಸಿದರು ಟ್ರೆಂಟ್ ಬೋಲ್ಟ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ರೋಹಿತ್ ಶರ್ಮಾ 14 ರನ್‌ಗಳಿಸಿ ಇಶ್ ಸೋಧಿ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ನಂತರ ನಾಯಕ ವಿರಾಟ್ ಕೊಹ್ಲಿ ಕೂಡ 9 ರನ್‌ಗಳಿಸಿ ಇಶ್ ಸೋಧಿ ಎಸೆತದಕ್ಕೆ ಔಟಾಗಿ ಫೆವಿಲಿಯನ್ ಸೇರಿದರು.

ಮಧ್ಯಮ, ಕೆಳ ಕ್ರಮಾಂಕವೂ ವಿಫಲ
ನಂತರ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿಯಿಂದಲೂ ಉತ್ತಮ ಜೊತೆಯಾಟ ಬರಲಿಲ್ಲ. 19 ಎಸೆತ ಎದುರಿಸಿ 12 ರನ್‌ಗಳಿಸಿದ ಪಂತ್ ಮಿಲ್ನೆ ಎಸೆತದಲ್ಲಿ ಔಟಾದರು. ಬಳಿಕ ಹಾರ್ದಿಕ್ ಪಾಂಡ್ಯ ಟ್ರೆಂಟ್ ಬೋಲ್ಟ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಔಟಾಗುವ ವೇಳೆಗೆ ಪಾಂಡ್ತ ಖಾತೆಯಲ್ಲಿದ್ದಿದ್ದು 23 ರನ್. ಶಾರ್ದೂಲ್ ಠಾಕೂರ್ ಮೂರನೇ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿ ಫೆವಿಲಿಯನ್ ಸೇರಿದರು. ಆಲ್‌ರೌಂಡರ್ ರವೀಂದ್ರ ಜಡೇಜಾ 19 ಎಸೆತಗಳಲ್ಲಿ 26 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 110 ರನ್‌ಗಳಿಸಿದೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಕಿವೀಸ್ ಪಡೆಯ ಪ್ರಧಾನ ಬೌಲಿಂಗ್ ಅಸ್ತ್ರವಾದ ಟ್ರೆಂಟ್ ಬೋಲ್ಟ್ ಮೂರು ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಆಘಾತ ನೀಡಿದರು. ಸ್ಪಿನ್ನರ್ ಇಶ್ ಸೋಧಿ ಎರಡು ವಿಕೆಟ್ ಕಬಳಿಸಿದರು. ಇನ್ನು ಟಿಮ್ ಸೌಥಿ ಹಾಗೂ ಆಡಂ ಮಿಲ್ನೆ ಈ ತಲಾ 1 ವಿಕೆಟ್ ಪಡೆದುಕೊಂಡರು.

ರನ್ ಬೆನ್ನಟ್ಟಿದ ಕೇನ್ ಪಡೆ
ಇನ್ನು ಭಾರತ ತಂಡ ನೀಡಿದ 111 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕಿವೀಸ್ ಪಡೆಗೆ ಸಾಧಾರಣ ಆರಂಭ ದೊರೆಯಿತು. ಸ್ಪೋಟಕ ಪ್ರದರ್ಶನ ನಿಡುವ ಸೂಚನೆ ನೀಡಿದ ಮಾರ್ಟಿನ್ ಗಪ್ಟಿಲ್ ತಂಡದ ಮೊತ್ತ 24 ರನ್‌ಗಳಾಗಿದ್ದಾರ 20 ರನ್‌ಗಳನ್ನು ಗಳಿಸಿ ಔಟಾದರು. ನಂತರ ಡೇರಲ್ ಮಿಚೆಲ್‌ಗೆ ಜೊತೆಯಾದ ನಾಯಕ ಕೇನ್ ವಿಲಿಯಮ್ಸನ್ ಅದ್ಭುತ ಆಟವನ್ನು ಪ್ರದರ್ಶಿಸಿದರು. ಈ ಜೋಡಿ ಭರ್ಜರಿ 72 ರನ್‌ಗಳ ಜೊತೆಯಾಟವನ್ನು ನೀಡಿದರು. ಎಚ್ಚರಿಕೆಯ ಆಟವನ್ನು ಪ್ರದರ್ಶಿಸುತ್ತಾ ಸಾಗಿದ ಈ ಜೋಡಿ ಭಾರತದ ಗೆಲುವಿಗೆ ಸಣ್ಣ ಅವಕಾಶವನ್ನು ಕೂಡ ನೀಡಲಿಲ್ಲ. 49 ರನ್‌ಗಳಿಸಿದ್ದ ಮಿಚೆಲ್ ಬೂಮ್ರಾಗೆ ವಿಕೆಟ್ ಒಪ್ಪಿಸಿದರಾದರೂ ಇದು ಭಾರತಕ್ಕೆ ಯಾವುದೇ ಲಾಭ ನೀಡಲಿಲ್ಲ. ಅದಾಗಲೇ ಗೆಲುವಿನ ಸನಿಹಕ್ಕೆ ತಲುಪಿದ್ದು ಕೇನ್ ಬಳಗ. ನಂತರ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೆವೋನ್ ಕಾನ್ವೆ ಸೇರಿಕೊಂಡು ಗೆಲುವಿನ ಪ್ರಕ್ರಿಯೆ ಪೂರ್ಣಗೊಳಿಸಿದರು.

ಬೌಲಿಂಗ್‌ನಲ್ಲಿಯೂ ನೀರಸ ಪ್ರದರ್ಶನ
ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ಜಸ್ಪ್ರಿತ್ ಬೂಮ್ರಾ 2 ವಿಕೆಟ್ ಪಡೆದು ಮಿಂಚಿದರು. ವರುಣ್ ಚಕ್ರವರ್ತಿ 2ನೇ ಓವರ್‌ನಲ್ಲಿ ಗಪ್ಟಿಲ್ ಅಬ್ಬರಿಸಿದ ಹೊರತಾಗಿಯೂ ರನ್ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರು. ಆದರೆ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಹಾಗೂ ಶಾರ್ದೂಲ್ ಠಾಕೂರ್ ಸಿಕ್ಕ ಅವಕಾಶದಲ್ಲಿ ಭಾರೀ ರನ್ ನೀಡಿದರು. ಇನ್ನು ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 2 ಓವರ್ ಬೌಲಿಂಗ್ ನಡೆಸಿ 17 ರನ್ ನೀಡಿದರು.

ಸೆಮಿಫೈನಲ್ ಕನಸು ಬಹುತೇಕ ಭಗ್ನ
ಈ ಸೋಲಿನೊಂದಿಗೆ ಟೀಮ್ ಇಂಡಿಯಾ ಎರಡು ಪಂದ್ಯಗಳ ನಂತರವೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಕಂಡಿದ್ದ ಭಾರತ ಇದೀಗ ನ್ಯೂಜಿಲೆಂಡ್ ವಿರುದ್ಧವೂ ಸೋಲು ಕಂಡು ಅಂಕಪಟ್ಟಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಅಲ್ಲದೆ ಐದನೇ ಸ್ಥಾನಕ್ಕೆ ಜಾರಿದೆ. ಪಾಕಿಸ್ತಾನ ಮೊದಲ ಸ್ಥಾನದಲ್ಲಿದ್ದರೆ ಮೂರು ಒಮದ್ಯಗಳ ಪೂಕಿ ಎರಡು ಗೆಲುವು ಸಾಧಿಸಿರುವ ಅಫ್ಘಾನಿಸ್ತಾನ 2ನೇ ಸ್ಥಾನ ಪಡೆದುಕೊಂಡಿದೆ. ನ್ಯೂಜಿಲೆಂಡ್ ತಂಡ ಮೊದಲ ಗೆಲುವು ಸಂಪಾದಿಸಿ ಮೂರನೇ ಸ್ಥಾನದಲ್ಲಿದೆ. ನಮೀಬಿಯಾ ನಾಲ್ಕನೇ ಸ್ಥಾನದಲ್ಲಿದ್ದು ನಂತರದ ಸ್ಥಾನದಲ್ಲಿ ಭಾರತ ಇದೆ. ಸ್ಕಾಟ್ಲೆಂಡ್ ತಂಡ ಕೊನೆಯ ಸ್ಥಾನದಲ್ಲಿದೆ. ಈ ಮೂಲಕ ಭಾರತ ಸೆಮಿಫೈನಲ್‌ಗೆರುವ ಅವಕಾಶ ಬಹುತೇಕ ಅಂತ್ಯವಾದಂತಾಗಿದೆ. ರನ್‌ರೇಟ್ ಕೂಡ ಕಳಪೆಯಾಗಿರುವ ಕಾರಣದಿಂದಾಗಿ ಭಾರತದ ಅಭಿಮಾನಿಗಳು ಪವಾಡವನ್ನು ನಿರೀಕ್ಷಿಸಬೇಕಿದೆ.
ಭಾರತ ಪ್ಲೇಯಿಂಗ್ XI: ಇಶಾನ್ ಕಿಶನ್, ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ(ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ
ಬೆಂಚ್: ರವಿಚಂದ್ರನ್ ಅಶ್ವಿನ್, ರಾಹುಲ್ ಚಹಾರ್, ಸೂರ್ಯಕುಮಾರ್ ಯಾದವ್, ಭುವನೇಶ್ವರ್ ಕುಮಾರ್
ನ್ಯೂಜಿಲೆಂಡ್ ಪ್ಲೇಯಿಂಗ್ XI : ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಜೇಮ್ಸ್ ನೀಶಮ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಆಡಮ್ ಮಿಲ್ನೆ, ಟ್ರೆಂಟ್ ಬೌಲ್ಟ್
ಬೆಂಚ್: ಕೈಲ್ ಜೇಮಿಸನ್, ಟಾಡ್ ಆಸ್ಟಲ್, ಮಾರ್ಕ್ ಚಾಪ್ಮನ್, ಟಿಮ್ ಸೀಫರ್ಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications