ಟಿ20 ವಿಶ್ವಕಪ್ ಆರಂಭಿಕ ಪಂದ್ಯಕ್ಕೂ ಮುನ್ನ ಶ್ರೀಲಂಕಾಗೆ ಆಘಾತ: ಪ್ರಮುಖ ಆಟಗಾರ ಟೂರ್ನಿಯಿಂದ ಔಟ್!

ಟಿ20 ವಿಶ್ವಕಪ್‌ನ ಪಂದ್ಯಗಳು ಭಾನುವಾರದಿಂದ ಆರಂಭವಾಗಿದೆ. ಶ್ರೀಲಂಕಾ ಹಾಗೂ ನಮೀಬಿಯಾ ತಂಡಗಳ ನಡುವಿನ ಸೆಣೆಸಾಟದೊಂದಿಗೆ ಟೂರ್ನಿಗೆ ಚಾಲನೆ ದೊರೆತಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಆಘಾತವೊಂದು ಉಂಟಾಗಿದ್ದು ತಂಡದ ಪ್ರಮುಖ ಆಟಗಾರ ಗಾಯದಿಂದಾಗಿ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಶ್ರೀಲಂಕಾ ತಂಡದ ಯುವ ವೇಗದ ಬೌಲರ್ ದಿಲ್ಶನ್ ಮಧುಶಂಕ ಟೂರ್ನಿಯ ಆರಂಭಕ್ಕೂ ಮುನ್ನ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಸಂಪೂರ್ಣ ವಿಶ್ವಕಪ್ ಟೂರ್ನಿಯಿಂದಲೇ ಮಧುಶಂಕ ಹೊರಬಿದ್ದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ನಮೀಬಿಯಾ ವಿರುದ್ಧದ ಪಂದ್ಯದ ಟಾಸ್ ಸಂದರ್ಭದಲ್ಲಿ ಶ್ರೀಲಂಕಾ ನಾಯಕ ದಸುನ್ ಶನಕಾ ಗಾಯದ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಇದೀಗ ಮಧುಶಂಕ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

ಬದಲಿ ಆಟಗಾರ ಶೀಘ್ರ ಘೋಷಣೆ ಸಾಧ್ಯತೆ
ನಮೀಬಿಯಾ ವಿರುದ್ಧದ ಅರ್ಹತಾ ಸುತ್ತಿನ ಪಂದ್ಯಕ್ಕಾಗಿ ಶನಿವಾರ ಮಧುಶಂಕಾ ಅಭ್ಯಾಸದಲ್ಲಿ ನಿರತವಾಗಿದ್ದರು. ಈ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದು ಅವರನ್ನು ಎಂಆರ್‌ಐ ಸ್ಕ್ಯಾನಿಂಗ್‌ಗೆ ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ಗಾಯದ ತೀವ್ರವಾಗಿರುವುದು ಕಂಡುಬಂದಿದ್ದು ಟೂರ್ನಿಯಿಂದ ಹೊರಗುಳಿಯುವುದು ಖಚಿತವಾಗಿದೆ. ಈ ವೇಗಿಗೆ ಬದಲಿ ಆಟಗಾರನನ್ನು ಶ್ರೀಲಂಕಾ ಮ್ಯಾನೇಜ್‌ಮೆಂಟ್ ಶೀಘ್ರದಲ್ಲಿಯೇ ಘೋಷಣೆ ಮಾಡುವ ಸಾಧ್ಯತೆಯಿದೆ.

ಏಷ್ಯಾಕಪ್‌ನಲ್ಲಿ ಮಿಂಚಿದ್ದ ಮಧುಶಂಕ
ಮಧುಶಂಕ ಗಾಯಗೊಂಡಿರುವುದು ಶ್ರೀಲಂಕಾ ಪಾಲಿಗೆ ದೊಡ್ಡ ಆಘಾತ ಎಂಬುದರಲ್ಲಿ ಅನುಮಾನವಿಲ್ಲ. ಕಳೆದ ಏಷ್ಯಾ ಕಪ್ ಟೂರ್ನಿಯಲ್ಲಿಯೂ ಶ್ರೀಲಂಕಾ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದ ಈ ಯುವ ವೇಗಿ ಶ್ರೀಲಂಕಾ ತಂಡ ಏಷ್ಯಾಕಪ್‌ನ ಚಾಂಪಿಯನ್ ಪಟ್ಟಕ್ಕೇರುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ವಿಶ್ವಕಪ್‌ನಲ್ಲಿಯೂ ಶ್ರೀಲಂಕಾ ತಂಡದ ಪರವಾಗಿ ಮಿಂಚುವ ವಿಶ್ವಾಸ ಮೂಡಿಸಿದ್ದರು. ಅದರಲ್ಲೂ ಆಸ್ಟ್ರೇಲಿಯಾ ನೆಲದಲ್ಲಿ ವೇಗಿಗಳಿಗೆ ದೊರೆಯುವ ನೆರವನ್ನು ಉತ್ತಮವಾಗಿ ಬಳಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು ಮಧುಶಂಕ. ಆದರೆ ಗಾಯದ ಕಾರಣದಿಂದಾಗಿ ಈ ಆಟಗಾರ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿಯುವಂತಾಗಿದೆ.

ಯಾರಾಗಲಿದ್ದಾರೆ ಬದಲಿ ಆಟಗಾರ?
ಶ್ರೀಲಂಕಾ ತಂಡ ಈ ವಿಶ್ವಕಪ್ ಟೂರ್ನಿಗೆ ಮೀಸಲು ಆಟಗಾರರೊಂದಿಗೆ ಪ್ರವಾಸ ಕೈಗೊಂಡಿದ್ದು ಈ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಮೀಸಲು ಆಟಗಾರರ ಪೈಕಿ ಬಿನೂರ ಫೆರ್ನಾಂಡೊ ಒಬ್ಬ ವೇಗಿಯಾಗಿದ್ದು ಅವರೇ ಅಂತಿಮ 15 ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಲಹಿರು ಕುಮಾರ ಮತ್ತು ಪ್ರಮೋದ್ ಮಧುಶನ್ ಈಗಾಗಲೇ ತಂಡದಲ್ಲಿದ್ದಾರೆ.
ಅರ್ಹತಾ ಸುತ್ತಿನ ಪಂದ್ಯಗಳು ಇಂದಿನಿಂದ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ನಮೀಬಿಯಾ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ನಮೀಬಿಯಾ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ. ಈ ಪಂದ್ಯ ಗೀಲಾಂಗ್‌ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಆಯೋಜನೆಯಾಗುತ್ತಿದೆ.
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ, ಮಹೇಶ್ ತೀಕ್ಷಣ
ಬೆಂಚ್: ಪ್ರಮೋದ್ ಮದುಶನ್, ಜೆಫ್ರಿ ವಾಂಡರ್ಸೆ, ಲಹಿರು ಕುಮಾರ, ಚರಿತ್ ಅಸಲಂಕಾ
ನಮೀಬಿಯಾ ಆಡುವ ಬಳಗ: ಸ್ಟೀಫನ್ ಬಾರ್ಡ್, ಡೇವಿಡ್ ವೈಸ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜಾನ್ ನಿಕೋಲ್ ಲಾಫ್ಟಿ-ಈಟನ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ಝೇನ್ ಗ್ರೀನ್ (ವಿಕೆಟ್ ಕೀಪರ್), ದಿವಾನ್ ಲಾ ಕಾಕ್, ಮೈಕೆಲ್ ವ್ಯಾನ್ ಲಿಂಗೆನ್, ಬರ್ನಾರ್ಡ್ ಸ್ಕೋಲ್ಟ್ಜ್, ಬೆನ್ ಶಿಕೊಂಗೊ
ಬೆಂಚ್: ಪಿಕ್ಕಿ ಯಾ ಫ್ರಾನ್ಸ್, ರೂಬೆನ್ ಟ್ರಂಪೆಲ್ಮನ್, ತಂಗೇನಿ ಲುಂಗಮೆನಿ, ಲೋಹಾಂಡ್ರೆ ಲೌರೆನ್ಸ್, ಕಾರ್ಲ್ ಬಿರ್ಕೆನ್‌ಸ್ಟಾಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications