IND Vs SA: ಹರಿಣಗಳನ್ನು ಎದುರಿಸಲು ಕಣಕ್ಕಿಳಿಯಲಿದೆ ಬಲಿಷ್ಠ ಟೀಂ ಇಂಡಿಯಾ, ಏನೆಲ್ಲಾ ಬದಲಾವಣೆ?

ಪಾಕಿಸ್ತಾನದ ವಿರುದ್ಧದ ಗೆಲುವಿನ ಉತ್ಸಾಹದಲ್ಲೇ ನೆದರ್ಲ್ಯಾಂಡ್ಸ್ ವಿರುದ್ಧ ಜಯ ಗಳಿಸಿದ ಟೀಂ ಇಂಡಿಯಾ ಭಾನುವಾರ ಮತ್ತೊಂದು ಪಂದ್ಯಕ್ಕೆ ಸಜ್ಜಾಗುತ್ತಿದೆ. ಭಾರತ ಈ ಬಾರಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಭಾರತದ ಸೆಮಿಫೈನಲ್ ಹಾದಿ ತುಂಬಾ ಸುಲಭವಾಗಲಿದೆ.
ಪರ್ತ್‌ನಲ್ಲಿ ಈ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಈಗಾಗಲೇ ಸಿಡ್ನಿಯಿಂದ ಪರ್ತ್‌ಗೆ ಪ್ರಯಾಣ ಬೆಳೆಸಿದೆ. ಶನಿವಾರ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸಲಿದ್ದು, ಭಾನುವಾರ ಹರಿಣಗಳ ವಿರುದ್ಧ ಸೆಣಸಲಿದೆ.
ಭಾರತ ಪಾಕಿಸ್ತಾನದ ವಿರುದ್ಧ ಆಡಿದ ತಂಡವನ್ನೇ ಎರಡನೇ ಪಂದ್ಯದಲ್ಲೂ ಉಳಿಸಿಕೊಂಡಿತ್ತು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದಲ್ಲಿ ಏನಾದರೂ ಬದಲಾವಣೆ ಆಗಬಹುದಾ ಎನ್ನುವ ಪ್ರಶ್ನೆ ಕಾಡುವುದು ಸಹಜ. ಆದರೆ, ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವಾಗ ನಾಯಕ ರೋಹಿತ್ ಶರ್ಮಾ ಯಾವುದೇ ಬದಲಾವಣೆ ಮಾಡಲು ಬಯಸುವುದಿಲ್ಲ ಎನ್ನಲಾಗಿದೆ. ಎಲ್ಲಾ ವಿಭಾಗಗಳಲ್ಲೂ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದ ತಂಡವೇ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ.

ಉತ್ತಮ ಲಯದಲ್ಲಿದೆ ಟೀಂ ಇಂಡಿಯಾ
ಮೊದಲನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದ ಅಕ್ಷರ್ ಪಟೇಲ್ ನೆದರ್ಲ್ಯಾಂಡ್ಸ್ ವಿರುದ್ಧ ಲಯಕ್ಕೆ ಮರಳಿದರು. ತಮ್ಮ ಮೊದಲನೇ ಓವರ್ ನಲ್ಲೇ ವಿಕೆಟ್ ಪಡೆದು ಫಾರ್ಮ್ ಕಂಡುಕೊಂಡರು. 4 ಓವರ್ ಗಳಲ್ಲಿ 18 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು.
ರವಿಚಂದ್ರನ್ ಅಶ್ವಿನ್ ಕೂಡ 4 ಓವರ್ ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಇಬ್ಬರೂ ಸ್ಪಿನ್ನರ್ ಗಳು ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ. ಆದರೆ, ಆರಂಭಿಕರಾದ ಕೆಎಲ್ ರಾಹುಲ್ ಲಯ ಕಂಡುಕೊಳ್ಳಬೇಕಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ರನ್ ಗಳಿಸಿದರೆ, ಭಾರತದ ಎಲ್ಲಾ ಚಿಂತೆ ದೂರವಾಗಲಿದೆ.
Ind Vs Ned: ಒಂದೇ ಪಂದ್ಯದಲ್ಲಿ ಮೂರು ದಾಖಲೆ ನಿರ್ಮಿಸಿದ ಟೀಂ ಇಂಡಿಯಾ ಆಟಗಾರರು

ಸೆಮಿಫೈನಲ್ ಹಾದಿಯಲ್ಲಿ ಟೀಂ ಇಂಡಿಯಾ
ಎರಡನೇ ಗುಂಪಿನಲ್ಲಿ ಟೀಂ ಇಂಡಿಯಾ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ತಂಡದಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಬಲಿಷ್ಠ ತಂಡಗಳಾಗಿದ್ದವು. ಭಾರತ ಈಗಾಗಲೇ ಪಾಕಿಸ್ತಾನವನ್ನು ಸೋಲಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಜಯಗಳಿಸಿದರೆ ಸೆಮಿಫೈನಲ್ ಹಾದಿ ಖಚಿತವಾಗಲಿದೆ.
ದಕ್ಷಿಣ ಆಫ್ರಿಕಾ ನಂತರ ಟೀಂ ಇಂಡಿಯಾ, ಬಾಂಗ್ಲಾದೇಶ, ಜಿಂಬಾಬ್ವೆ ತಂಡದ ವಿರುದ್ಧ ಆಡಬೇಕಾಗಿದೆ. ಈ ಎರಡೂ ಪಂದ್ಯಗಳಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಆಗಿದ್ದು, ದಕ್ಷಿಣ ಆಫ್ರಿಕಾ ಮಾತ್ರ ಭಾರತಕ್ಕೆ ಸವಾಲಾಗಲಿದೆ.

ಅಪಾಯಕಾರಿಯಾಗಿದೆ ಹರಿಣಗಳ ಪಡೆ
ಭಾರತದ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡದ ದಕ್ಷಿಣ ಆಫ್ರಿಕಾ, ಟಿ20 ವಿಶ್ವಕಪ್‌ನಲ್ಲಿ ಮಾತ್ರ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 99 ರನ್‌ಗಳಿಗೆ ಆಲೌಟ್ ಮಾಡಿತ್ತು. ಜಿಂಬಾಬ್ವೆ ವಿರುದ್ಧದ ಮೊದಲನೇ ಪಂದ್ಯದಲ್ಲಿ ಅದೃಷ್ಟ ಕೈಕೊಟ್ಟಿದ್ದರಿಂದ, ಮಳೆಯಾದ ಕಾರಣ ಗೆಲುವಿನಿಂದ ತಪ್ಪಿಸಿಕೊಂಡಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 104 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿತ್ತು.
ರಿಲೀ ರೊಸೊವ್, ಕ್ವಿಂಟನ್ ಡಿ ಕಾಕ್, ಐಡೆನ್ ಮಕರಮ್, ಡೇವಿಡ್ ಮಿಲ್ಲರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅದರಲ್ಲೂ ಡಿ ಕಾಕ್ ಮತ್ತು ರೊಸೊವ್ ಸ್ಫೋಟಕ ಆಟಗಾರರಾಗಿದ್ದು ಭಾರತಕ್ಕೆ ಅಪಾಯಕಾರಿಯಾಗಬಲ್ಲರು. ಆನ್ರಿಚ್ ನಾರ್ಟ್ಜೆ, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ ತಮ್ಮ ವೇಗದ ಬೌಲಿಂಗ್‌ನಿಂದ ಭಾರತದ ಬ್ಯಾಟಿಂಗ್ ಪಡೆಗೆ ಸವಾಲಾಕಲಿದ್ದಾರೆ. ಸ್ಪಿನ್ನರ್ ಗಳಾದ ಶಂಸಿ, ಕೇಶವ್ ಮಹಾರಾಜ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು, ಭಾರತ ಬ್ಯಾಟರ್ ಗಳು ಎಚ್ಚರಿಕೆಯಿಂದ ಆಡಬೇಕಾಗಿದೆ.

ಟೀಂ ಇಂಡಿಯಾ ಸಂಭವನೀಯ ಪ್ಲೇಯಿಂಗ್ XI
ರವಿಚಂದ್ರನ್ ಅಶ್ವಿನ್ ಕೂಡ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕು, ಅವರ ಸೇರ್ಪಡೆಯಿಂದ ಬ್ಯಾಟಿಂಗ್ ಕೂಡ ಬಲಗೊಂಡಿದೆ. ಅನುಭವಿ ಆಫ್-ಸ್ಪಿನ್ನರ್ ಎಡಗೈ ಆಟಗಾರರ ವಿರುದ್ಧ ಅನುಕೂಲಕರವಾದ ದಾಖಲೆಯನ್ನು ಹೊಂದಿದ್ದಾರೆ, ದಕ್ಷಿಣ ಆಫ್ರಿಕಾವು ಕ್ವಿಂಟನ್ ಡಿ ಕಾಕ್, ರಿಲೀ ರೊಸ್ಸೌ ಮತ್ತು ಡೇವಿಡ್ ಮಿಲ್ಲರ್ ಅವರ ಶ್ರೇಣಿಯನ್ನು ಹೊಂದಿದೆ. ಕೆಎಲ್ ರಾಹುಲ್ ಕೂಡ ತಮ್ಮ ಲಯವನ್ನು ಕಂಡುಕೊಂಡರೆ ಭಾರತದ ಗೆಲುವಿನ ಹಾದಿ ಸುಲಭವಾಗಲಿದೆ.
ಭಾರತ ಸಂಭಾವ್ಯ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಶಮಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications