ಟಿ20 ವಿಶ್ವಕಪ್ 2022: ಭಾರತದ ಈ 3 ಕ್ರಿಕೆಟಿಗರಿಗೆ ಇದುವೇ ಅಂತಿಮ ಚುಟುಕು ವಿಶ್ವಕಪ್!

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ಚುಟುಕು ಕ್ರಿಕೆಟ್ ಮಾದರಿಯ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು ಈ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. 2007ರಲ್ಲಿ ಮೊದಲ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬಳಿಕ ಮತ್ತೊಮ್ಮೆ ಆ ಸಾಧನೆ ಮಾಡಲು ವಿಫಲವಾಗಿದೆ. ಹೀಗಾಗಿ ಈ ಬಾರಿ ಭಾರತ ತಂಡದ ಮೇಲೆ ಸಾಕಷ್ಟು ನಿರೀಕ್ಷೆಗಳಿದೆ.
ಈ ಬಾರಿಯ ಟಿ20 ವಿಶ್ವಕಪ್‌ಗೆ ಭಾರತ ತಂಡ ಅನುಭವಿ ಹಾಗೂ ಯುವ ಆಟಗಾರರ ಉತ್ತಮ ಸಂಯೋಜನೆಯೊಂದಿಗೆ ಕಣಕ್ಕಿಳಿಯುತ್ತಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡ ಈ ಬಾರಿಯ ವಿಶ್ವಕಪ್‌ಗೆ ಕಣಕ್ಕಿಳಿಯುತ್ತಿದೆ. ಭಾರತದ ಈ ತಂಡದಲ್ಲಿ ಕೆಲ ಹಿರಿಯ ಆಟಗಾರರು ಕೂಡ ಇದ್ದು ಅಂಥಾ ಆಟಗಾರರಿಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ವಿಶ್ವಕಪ್ ಅಂತಿಮ ಟಿ20 ವಿಶ್ವಕಪ್ ಅಂತಿಮ ಚುಟುಕು ಮಾದರಿಯ ವಿಶ್ವಕಪ್ ಆಗಿರುವ ಸಾಧ್ಯತೆಯಿದೆ.
ಹಾಗಾದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಭಾರತದ ಯಾವೆಲ್ಲಾ ಆಟಗಾರರಿಗೆ ಅಂತಿಮ ಟಿ20 ವಿಶ್ವಕಪ್ ಆಗಿರಬಹುದು? ಆ ಬಗ್ಗೆ ಮಾಹಿತಿ ಇಲ್ಲಿದೆ. ಮುಂದೆ ಓದಿ..

ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್
ಕಳೆದ ಮಾರ್ಷ್ ತಿಂಗಳವರೆಗೂ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾ ಟಿ20 ತಂಡದ ಭಾಗವಾಗಿರಲೇ ಇಲ್ಲ. 2019ರ ಏಕದಿನ ವಿಶ್ವಕಪ್‌ನ ಬಳಿಕ ಭಾರತ ತಂಡದಿಂದ ಹೊರಬಿದ್ದ ದಿನೇಶ್ ಕಾರ್ತಿಕ್ ಮತ್ತೆ ಕಮ್‌ಬ್ಯಾಕ್ ಮಾಡಬಹುದು ಎಂಬ ನಿರೀಕ್ಷೆಯನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮಾಡಿರಲಿಲ್ಲ. ಆದರೆ ಐಪಿಎಲ್‌ನಲ್ಲಿ ನೀಡಿದ ಅಮೋಘ ಪ್ರದರ್ಶನ ದಿನೇಶ್ ಕಾರ್ತಿಕ್ ಅವರನ್ನು ಮತ್ತೆ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವಂತೆ ಮಾಡಿತು. ಐಪಿಎಲ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು 183ರ ಸ್ಟ್ರೈಕ್‌ರೇಟ್‌ನಲ್ಲಿ 330 ರನ್‌ಗಳಿಸುವ ಮೂಲಕ ಭಾರತ ತಂಡಕ್ಕೆ ಬಲವಂತವಾಗಿ ಸೇರ್ಪಡೆಯಾಗುವಂತೆ ಮಾಡಿದ್ದರು. ಸ್ಪೆಶಲಿಸ್ಟ್ ಫಿನಿಷರ್ ಆಗಿ ಆಗಿ ಭಾರತ ತಂಡದ ಪರವಾಗಿಯೂ ಅದ್ಭುತ ಪ್ರದರ್ಶನ ನೀಡಿರುವ ಡಿಕೆ ವಿಶ್ವಕಪ್‌ನ ತಂಡದಲ್ಲಿಯೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ 37ರ ಹರೆಯದ ದಿನೇಶ್ ಕಾರ್ತಿಕ್ 2024ರ ಟಿ20 ವಿಶ್ವಕಪ್ ವೇಳೆಗೆ 39ಕ್ಕೆ ಕಾಲಿಡಲಿರುವ ಕಾರಣ ಈ ವಿಶ್ವಕಪ್ ದಿನೇಶ್ ಕಾರ್ತಿಕ್ ಅವರ ಅಂತಿಮ ವಿಶ್ವಕಪ್ ಆಗಿರುವ ಸಾಧ್ಯತೆಯಿದೆ.

ಅನುಭವಿ ಆಲ್‌ರೌಂಡರ್ ಆರ್ ಅಶ್ವಿನ್
ಕಳೆದ ವರ್ಷ ಯುಎಇನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಟಿ20 ತಂಡಕ್ಕೆ ಮರಳುವ ಮೂಲಕ ಆರ್ ಅಶ್ವಿನ್ ನಾಲ್ಕು ವರ್ಷಗಳ ಬಳಿಕ ಟಿ20 ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಅದಾದ ಬಳಿಕ ಅಶ್ವಿನ್ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದು ಆಡಿದ 10 ಪಂದ್ಯಗಳಲ್ಲಿ 14 ವಿಕೆಟ್ ಪಡೆದುಕೊಂಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ 6.1ರ ಎಕಾನಮಿಯಲ್ಲಿ ಬೌಲಿಂಗ್ ದಾಳಿ ನಡೆಸಿರುವುದು ಪ್ರಮುಖ ಅಂಶವಾಗಿದೆ. ಇನ್ನು ಬ್ಯಾಟಿಂಗ್‌ನಲ್ಲಿಯೂ ಕೊಡುಗೆ ನೀಡುವ ಸಾಮರ್ಥ್ಯವಿರುವ ಅಶ್ವಿನ್ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಟಿ20 ಕ್ರಿಕೆಟ್‌ನಲ್ಲಿ ಈ ವರ್ಷ 229 ರನ್ ಗಳಿಸಿದ್ದು 144ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ಈ ವರ್ಷದ ಟಿ20 ವಿಶ್ವಕಪ್‌ನ ಬಳಿಕ ಯುವ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಮೇಲೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಚಿತ್ತ ನೆಡುವ ಸಾಧ್ಯತೆಯಿದ್ದು ಮುಂದಿನ 2024ರ ಟಿ20 ವಿಶ್ವಕಪ್ ವೇಳೆಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಸುಲಭವಿಲ್ಲ.

ಟೀಮ್ ಇಂಡಿಯಾ ಹಾಲಿ ನಾಯಕ ರೋಹಿತ್ ಶರ್ಮಾ
ಕಳೆದ ವರ್ಷದ ಟಿ20 ವಿಶ್ವಕಪ್‌ನ ಬಳಿಕ ವಿರಾಟ್ ಕೊಹ್ಲಿ ಚುಟುಕು ಮಾದರಿಯ ನಾಯಕತ್ವ ತೊರೆದ ಬಳಿಕ ರೋಹಿತ್ ಶರ್ಮಾಗೆ ಟೀಮ್ ಇಂಡಿಯಾ ವಿಶ್ವಕಪ್ ತಂಡದ ಹೊಣೆಗಾರಿಕೆ ನೀಡಲಾಗಿದೆ. ಈಗಾಗಲೇ 35ರ ಹರೆಯದಲ್ಲಿರುವ ರೋಹಿತ್ ಶರ್ಮಾ ಸದ್ಯ ಮೂರು ಮಾದರಿಯಲ್ಲಿಯೂ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸಂದರ್ಭದಲ್ಲಿ ರೋಹಿತ್ ಶರ್ಮಾ 37ನೇ ವರ್ಷ ದಾಟಲಿದ್ದಾರೆ. ಆ ಸಂದರ್ಭದಲ್ಲಿ ರೋಹಿತ್ ಶರ್ಮಾ ಟಿ20 ನಾಯಕತ್ವವನ್ನು ತೊರೆಯುವ ಜೊತೆಗೆ ಟಿ20ಐ ಕ್ರಿಕೆಟ್‌ನಿಂದಲೂ ನಿವೃತ್ತಿಯಾಗುವ ಸಾಧ್ಯತೆಯಿದೆ. ಟೆಸ್ಟ ಕ್ರಿಕೆಟ್‌ನ ಮೇಲೆ ಗಮನಹರಿಸುವ ನಿರ್ಧಾರ ತೆಗೆದುಕೊಂಡರೆ ಈ ಬೆಳವಣಿಗೆಯನ್ನು ನಿರೀಕ್ಷಿಸಬಹುದು.

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications