ಯಾವಾಗಲೂ ಗೆಲ್ಲುತ್ತಾ ಇರಲು ಸಾಧ್ಯವಿಲ್ಲ: ಟೀಮ್ ಇಂಡಿಯಾ ಆಟಗಾರರ ಬೆನ್ನಿಗೆ ನಿಂತ ಯುವರಾಜ್ ಸಿಂಗ್

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ತಂಡದ ವಿರುದ್ಧ ಆಘಾತಕಾರಿ ರೀತಿಯಲ್ಲಿ ಸೋತು ನಿರ್ಗಮಿಸಿದೆ. ಈ ಬಾರಿ ಚುಟುಕು ವಿಶ್ವಕಪ್‌ನಲ್ಲಿ ಗೆಲ್ಲುವ ವಿಶ್ವಾಸ ಮೂಡಿಸಿದ್ದ ರೋಹಿತ್ ಶರ್ಮಾ ಪಡೆ ಸೆಮಿಫೈನಲ್ ಹಂತದಲ್ಲಿ ಅನುಭವಿಸಿದ ಸೋಲನ್ನು ಅರಗಿಸಿಕೊಳ್ಳುವುದು ಅಭಿಮಾನಿಗಳಿಗೆ ಹಾಗೂ ಆಟಗಾರರಿಗೆ ಕಷ್ಟ. ಆದರೆ ಆಟದಲ್ಲಿ ಇದೆಲ್ಲಾ ಸಾಮಾನ್ಯ ಎಂದು ಸಚಿನ್ ತೆಂಡೂಲ್ಕರ್ ಸಹಿತ ಕೆಲ ಕ್ರಿಕೆಟಿಗರು ಟೀಮ್ ಇಂಡಿಯಾ ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಭಾರತೀಯ ತಂಡದ ಬೆಂಬಲಕ್ಕೆ ನಿಂತಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ 10 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿದೆ. ಇಂಗ್ಲೆಂಡ್ ತಂಡದ ಆರಂಭಿಕರಾದ ಅಲೆಕ್ಸ್ ಹೇಲ್ಸ್ ಹಾಗೂ ಜೋಸ್ ಬಟ್ಲರ್ ಅವರನ್ನು ಔಟ್ ಮಾಡುವಲ್ಲಿ ಭಾರತೀಯ ತಂಡ ವಿಫಲವಾಯಿತು. ಈ ಮೂಲಕ ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯವಾಡಿ ಚಾಂಪಿಯನ್ ಪಟ್ಟಕ್ಕೇರುವ ಕನಸು ಭಗ್ನವಾಗಿದೆ. ಈ ಸೋಲಿನ ಬಳಿಕ ಯುವರಾಜ್ ಸಿಂಗ್ ಟೀಮ್ ಇಂಡಿಯಾ ಆಟಗಾರರಿಗೆ ಬೆಂಬಲ ಸೂಚಿಸಿದ್ದಾರೆ.

ಪ್ರತಿ ಬಾರಿಯೂ ಗೆಲ್ಲುವುದನ್ನೇ ಬಯಸುತ್ತೇವೆ
ಯುವರಾಜ್ ಸಿಂಗ್ ಟ್ವೀಟ್ ಮೂಲಕ ಟೀಮ್ ಇಂಡಿಯಾ ಆಟಗಾರಿಗೆ ಧೈರ್ಯ ತುಂಬಿದ್ದಾರೆ. "ಪ್ರತಿ ಬಾರಿ ನಮ್ಮ ತಂಡ ಅಂಗಳಕ್ಕಿಳಿದಾಗಲೂ ನಾವು ತಂಡದ ಗೆಲುವನ್ನೇ ಬಯಸುತ್ತೇವೆ. ಆದರೆ ಕೆಲ ದಿನಗಳು ನಮ್ಮ ಪರವಾಗಿ ಇರುವುದಿಲ್ಲ. ಈ ಟೂರ್ನಮೆಂಟ್‌ನುದ್ದಕ್ಕೂ ನಮ್ಮ ಆಟಗಾರರು ತಂಡವಾಗಿ ನೀಡಿದ ಪ್ರದರ್ಶನಕ್ಕೆ ಹೆಮ್ಮೆಯೆನಿಸುತ್ತದೆ. ಈಗ ಹೇಗೆ ಮತ್ತಷ್ಟು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಮಯ" ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಭಾರತದ ಪರ ಮಿಂಚಿದ ಕೊಹ್ಲಿ, ಪಾಂಡ್ಯ
ಇಂಗ್ಲೆಂಡ್ ವಿರುದ್ಧ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಮಿಂಚಿದ ಆಟಗಾರರೆಂದರೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ. ಈ ಜೋಡಿ ತಲಾ ಅರ್ಧ ಶತಕ ಸಿಡಿಸಿ ತಂಡ ಸವಾಲಿನ ಮೊತ್ತ ಪೇರಿಸಲು ಕಾರಣವಾದರು. ಮಹತ್ತರ ಘಟ್ಟಗಳಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಳ್ಳುವ ಕೆಟ್ಟ ಅಭ್ಯಾಸವನ್ನುಆರಂಭಿಕರಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಮುಂದುವರಿಸಿದ ಕಾರಣ ತಂಡ ಆರಂಭದಲ್ಲಿಯೇ ಒತ್ತಡಕ್ಕೆ ಸಿಲುಕಿತ್ತು. ಆದರೆ ಕೊಹ್ಲಿ ಹಾಗೂ ಪಾಂಡ್ಯ ಪ್ರದರ್ಶನ ತಂಡವನ್ನು ಬ್ಯಾಟಿಂಗ್ ವಿಭಾಗದಲ್ಲಿ ಮುಖಭಂಗ ಅನುಭವಿಸದಂತೆ ಮಾಡಿದರು. 40 ಎಸೆತಗಳನ್ನು ಎದುರಿಸಿದ ಕೊಹ್ಲಿ 50 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಮತ್ತೊಂದು ತುದಿಯಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರದ ಪ್ರದರ್ಶನ ಮುಂದುವರಿದಿತ್ತು. ಕೇವಲ 33 ಎಸೆತಗಳಲ್ಲಿ 63 ರನ್ ಬಾರಿಸಿದ ಹಾರ್ದಿಕ್ ಪಾಂಡ್ಯ 190.91ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು.

ಮುಖಭಂಗ ಅನುಭವಿಸಿದ ಭಾರತ
ಇನ್ನು ಭಾರತ ತಂಡ ನೀಡಿದ 169 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ಭಾರತದ ಬೌಲಿಂಗ್ ವಿಭಾಗದ ಮೇಲೆ ಮುಗಿ ಬೀಳುತ್ತಾ ಸಾಗಿತು. ಇಂಗ್ಲೆಂಡ್ ತಂಡದ ಆರಂಭಿಕ ಜೋಡಿಯಾದ ಅಲೆಕ್ಸ್ ಹೇಲ್ಸ್ ಹಾಗೂ ಜೋಸ್ ಬಟ್ಲರ್ ಮೊದಲ ಓವರ್‌ನಿಂದಲೇ ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಅಂತಿಮ ಹಂತದವರೆಗೂ ಇಂಗ್ಲೆಂಡ್‌ನ ಈ ಜೋಡಿಯನ್ನು ಬೇರ್ಪಡಿಸಲು ಭಾರತದ ಬೌಲಿಂಗ್ ವಿಭಾಗ ಸಂಪೂರ್ಣವಾಗಿ ವಿಫಲವಾಯಿತು. ಅಂತಿಮವಾಗಿ ಇನ್ನೂ ನಾಲ್ಕು ಓವರ್‌ಗಳು ಬಾಕಿಯಿರುವಂತೆಯೇ ಇಂಗ್ಲೆಂಡ್ ತಂಡ ಪಂದ್ಯದಲ್ಲಿ ಗೆಲುವು ಸಾಧಿಸಿತು. ಜೋಸ್ ಬಟ್ಲರ್ 49 ಎಸೆತಗಳಲ್ಲಿ 80 ರನ್ ಬಾರಿಸಿದರೆ ಅಲೆಕ್ಸ್ ಹೇಲ್ಸ್ 86 ರನ್‌ಗಳನ್ನು ಗಳಿಸಿದರು. ಹೀಗೆ ನಿರ್ಣಾಯಕ ಹಂತದಲ್ಲಿ ಭಾರತ ಹೀನಾಯ ಸೋಲು ಅನುಭವಿಸಿ ನಿರ್ಗಮಿಸಿದೆ.

ಬೌಲರ್‌ಗಳನ್ನು ಹೊಣೆ ಮಾಡಿದ ನಾಯಕ
ಇನ್ನು ಈ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ತಂಡದ ಸೋಲಿಗೆ ಬೌಲಿಂಗ್ ವಿಭಾಗದ ಕಳಪೆ ಪ್ರದರ್ಶನ ಕಾರಣ ಎಂದು ದೂರಿದ್ದಾರೆ. "ಬೌಲಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದು 16 ಓವರ್‌ಗಳಲ್ಲಿಯೇ ನಾವು ನೀಡಿದ್ದ ಗುರಿಯನ್ನು ಬೆನ್ನಟ್ಟಬಹುದಾಗಿದ್ದ ಪಿಚ್ ಆಗಿರಲಿಲ್ಲ. ಬೌಲಿಂಗ್‌ನಲ್ಲಿ ನಾವು ಅಂದುಕೊಂಡಂತೆ ಮಾಡಲು ಸಾಧ್ಯವಾಗಲಿಲ್ಲ" ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications