ಬುಧವಾರ, ಜೂನ್ 12ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಎ ಗುಂಪಿನ ಪಂದ್ಯದಲ್ಲಿ ಆತಿಥೇಯ ಯುಎಸ್ಎ (ಅಮೆರಿಕ) ತಂಡದ ವಿರುದ್ಧ ಭಾರತ ತಂಡ 7 ವಿಕೆಟ್‌ಗಳ ಪ್ರಯಾಸದಾಯಕ ಗೆಲುವು ಸಾಧಿಸಿತು.
ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಪ್ರಸಕ್ತ ಟಿ20 ವಿಶ್ವಕಪ್‌ನ ಸೂಪರ್ 8ರ ಹಂತಕ್ಕೆ ಪ್ರವೇಶಿಸಿತು. ಹೀಗಾಗಿ ಯುಎಸ್ಎ ತಂಡದ ಸೂಪರ್ 8ರ ಅರ್ಹತೆಗೆ ಇನ್ನೂ ಒಂದು ಪಂದ್ಯದ ಅವಕಾಶವಿರುವುದರಿಂದ ಕಾಯಬೇಕಿದೆ.

ಯುಎಸ್ಎ ವಿರುದ್ಧ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಭಾರತ ತಂಡ ಗೆಲುವಿನೊಂದಿಗೆ ಖಾತೆ ಆರಂಭಿಸಿತು. ಇದೇ ವೇಳೆ ಯುಎಸ್ಎ ವಿರುದ್ಧ ಭಾರತ ತಂಡದ ಗೆಲುವು ಪಾಕಿಸ್ತಾನ ತಂಡಕ್ಕೆ ನಿಟ್ಟುಸಿರು ಬಿಡುವಂತೆ ಮಾಡಿದ್ದು, ಸೂಪರ್ 8ರ ಹಂತದ ಕನಸು ಜೀವಂತವಾಗಿರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ ತಂಡ ಸ್ಟೀವನ್ ಟೇಲರ್ ಅವರ 24 ರನ್ ಮತ್ತು ನಿತೀಶ್ ಕುಮಾರ್ ಅವರ 27 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು.

111 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡ ಯುಎಸ್ಎ ವಿರುದ್ಧ ಹೋರಾಟ ನಡೆಸಬೇಕಾಯಿತು. ಕಡಿಮೆ ಸ್ಕೋರ್‌ನ ಪಂದ್ಯವಾಗಿದ್ದರೂ, ಚೇಸಿಂಗ್‌ನಲ್ಲಿ ಭಾರತ ತಂಡ ಯುಎಸ್ಎ ಬೌಲರ್‌ಗಳಿಂದ ಪ್ರತಿರೋಧ ಎದುರಿಸಿದರು.
ಅಂತಿಮವಾಗಿ ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಅರ್ಧಶತಕ ಮತ್ತು ಶಿವಂ ದುಬೆ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 18.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
ಈ ಪಂದ್ಯಾವಳಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮೂರನ್ನೂ ಗೆಲ್ಲುವ ಮೂಲಕ 6 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರೆ, ಯುಎಸ್ಎ ತಂಡ ಎರಡನೇ ಸ್ಥಾನದಲ್ಲೇ ಉಳಿದಿದೆ.
ಇನ್ನು ಭಾರತ ತಂಡದ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತೊಮ್ಮೆ ಉತ್ತಮ ಆರಂಭ ನೀಡಲು ವಿಫಲರಾದರು. ವಿರಾಟ್ ಕೊಹ್ಲಿ ಡಕ್‌ಗೆ ಔಟಾದರೆ, ನಾಯಕ ರೋಹಿತ್ ಶರ್ಮಾ ಕೇವಲ 3 ರನ್‌ಗಳಿಗೆ ಔಟಾದರು. ನಂತರ ಬಂದ ರಿಷಭ್ ಪಂತ್ 20 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 18 ರನ್ ಗಳಿಸಿ ಬೌಲ್ಡ್ ಆದರು.

ಆಗ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 72 ರನ್‌ಗಳ ಜೊತೆಯಾಟ ನಿರ್ಮಿಸಿತು ಮತ್ತು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಗೆಲುವಿನ ಕಡೆಗೆ ಮುನ್ನಡೆಸಿದರು.
ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಮೇತ ಅಜೇಯ 50 ರನ್ ಬಾರಿಸಿದರೆ, ಶಿವಂ ದುಬೆ 35 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 31 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಯುಎಸ್ಎ ತಂಡದ ಪರ ಸೌರಭ್ ನೇತ್ರವಾಳ್ಕರ್ 4 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಅಲಿ ಖಾನ್ 3.2 ಓವರ್‌ಗಳಲ್ಲಿ 21 ರನ್ ನೀಡಿ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಯುಎಸ್ಎ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಶಯಾನ್ ಜಹಾಂಗೀರ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಅರ್ಶ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆದರೆ, ನಂತರ ಬಂದ ಆಂಡ್ರೀಸ್ ಗೌಸ್ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಬಂದ ಹಂಗಾಮಿ ನಾಯಕ ಆರೋನ್ ಜೋನ್ಸ್ 22 ಎಸೆತಗಳಲ್ಲಿ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆ ಬಳಿಕ ಆರಂಭಿಕ ಬ್ಯಾಟರ್ ಸ್ಟೀವನ್ ಟೇಲರ್ 30 ಎಸೆತಗಳಲ್ಲಿ 2 ಸಿಕ್ಸರ್‌ಗಳ ಮೂಲಕ 24 ರನ್ ಗಳಿಸಿ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ಕುಮಾರ್ 23 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 27 ರನ್ ಬಾರಿಸಿದರೆ, ಕೋರಿ ಆಂಡರ್ಸನ್ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಹರ್ಮೀತ್ ಸಿಂಗ್ 10 ಎಸೆತಗಳಲ್ಲಿ 10 ರನ್ ಗಳಿಸಿದರು.
ಕೊನೆಯಲ್ಲಿ ಶಾಡ್ಲಿ ವ್ಯಾನ್ ಶಾಲ್ಕ್ವಿಕ್ 10 ರನ್, ಜಸ್‌ದೀಪ್ ಸಿಂಗ್ 2 ರನ್ ಗಳಿಸಿ ಯುಎಸ್ಎ ತಂಡದ ಮೊತ್ತವನ್ನು 110ರ ಗಡಿ ಮುಟ್ಟಿಸಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಅರ್ಶ್‌ದೀಪ್ ಸಿಂಗ್ 4 ಓವರ್‌ಗಳಲ್ಲಿ 9 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಹಾರ್ದಿಕ್ ಪಾಂಡ್ಯ 4 ಓವರ್‌ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಅಕ್ಷರ್ ಪಟೇಲ್ 3 ಓವರ್‌ಗಳಲ್ಲಿ 24 ರನ್ ನೀಡಿ 1 ವಿಕೆಟ್ ತಮ್ಮದಾಗಿಸಿಕೊಂಡರು.