ಜೂನ್ 12 ಬುಧವಾರ, ವೆಸ್ಟ್ ಇಂಡೀಸ್‌ನ ಆಂಟಿಗುವಾ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್‌ನ ಬಿ ಗುಂಪು ಹಂತದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ನಮೀಬಿಯಾ ತಂಡ ಮಕಾಡೆ ಮಲಗಿದೆ.
ನಮೀಬಿಯಾ ನೀಡಿದ 73 ರನ್‌ಗಳ ಸುಲಭ ಗುರಿ ಬೆನ್ನಟ್ಟಿ ಕಾಂಗೂರು ಪಡೆ 5.4 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಭರ್ಜರಿ ಜಯ ಸಾಧಿಸಿದೆ. ಸತತ ಎರಡನೇ ಗೆಲುವು ಕಂಡು ಬಿ ಗುಂಪಿನ ಅಂಕಪಟ್ಟಿ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ ಸೂಪರ್-8 ಗೆ ಆರ್ಹತೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಆಹ್ವಾನದ ಮೇರೆಗೆ ನಮೀಬಿಯಾ ಮೊದಲು ಬ್ಯಾಟಿಂಗ್ ಆರಂಭಿಸಿತು. ಅಂದುಕೊಂಡಂತೆ ಕಾಂಗೂರು ಪಡೆ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ಮುಂದಾಯಿತು. ದಾಳಿಗೆ ಸಿಲುಕಿದ ನಮೀಬಿಯಾ ತತ್ತರಿಸಿತು.
ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಅವರು 36 ರನ್ ಗಳಿಸಿ ತಂಡದ ಪರ ಅತಿ ಹೆಚ್ಚು ಸ್ಕೋರರ್ ಆದರು. ಇನ್ನುಳಿದಂತೆ ಯಾವುದೇ ನಮೀಬಿಯಾ ಬ್ಯಾಟರ್‌ಗಳು ಕಾಂಗೂರು ಪಡೆಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ 17 ಓವರ್‌ಗಳಲ್ಲಿ 72 ರನ್‌ಗೆ ನಮೀಬಿಯಾ ಆಲೌಟ್ ಆಯಿತು.
ಆಸ್ಟ್ರೇಲಿಯಾ ಪರ ಆಡಮ್ ಝಂಪಾ 4 ವಿಕೆಟ್‌ಗಳನ್ನು ಉರುಳಿಸಿ ಮಿಂಚಿದರೆ, ಮಾರ್ಕಸ್ ಸ್ಟೊಯಿನಿಸ್, ಜೋಶ್ ಹ್ಯಾಜಲ್‌ವುಡ್ 2 ಹಾಗು ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್ ತಲಾ ಒಂದೊಂದು ವಿಕೆಟ್ ಪಡೆದರು.
ಸುಲಭ ಟಾರ್ಗೆಟ್ ಚೇಸಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಇಬ್ಬರು ಎಡಗೈ ಆರಂಭಿಕರಾಗಿ ಕಣಕ್ಕೀಳಿದರು. ವಾರ್ನರ್ ಕೇವಲ 8 ಎಸೆತಗಳಲ್ಲಿ 3 ಬೌಂಡರಿ ಹಾಗು 1 ಸಿಕ್ಸರ್ ಮೂಲಕ 20 ರನ್ ಗಳಿಸಿ ಔಟ್ ಆದರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ಮಿಚೆಲ್ ಮಾರ್ಷ್ ಜೊತೆಗೂಡಿದ ಟ್ರಾವಿಸ್ ಹೆಡ್ ಪಂದ್ಯವನ್ನು ವೇಗವಾಗಿ ಮುಗಿಸಿದರು. ಹೆಡ್ ಅಜೇಯ 34 ರನ್ ಗಳಿಸದರೆ, ಮಾರ್ಷ್ 14 ರನ್ ಬಾರಿಸಿದರು.
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿ.ಕೀ), ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ನಮೀಬಿಯಾ: ನಿಕೋಲಾಸ್ ಡೇವಿನ್, ಮೈಕೆಲ್ ವ್ಯಾನ್ ಲಿಂಗೆನ್, ಜಾನ್ ಫ್ರೈಲಿಂಕ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜೆಜೆ ಸ್ಮಿಟ್, ಜೇನ್ ಗ್ರೀನ್ (ವಿ.ಕೀ), ಡೇವಿಡ್ ವೈಸ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್, ಜ್ಯಾಕ್ ಬ್ರಾಸ್ಸೆಲ್, ಬೆನ್ ಶಿಕೊಂಗೊ