Axar Patel: ಬೌಂಡರಿ ಬಳಿ ಅಚ್ಚರಿಯ ಕ್ಯಾಚ್ ಹಿಡಿದ ಅಕ್ಸರ್ ಪಟೇಲ್; ವಿಡಿಯೋ ಸಖತ್ ವೈರಲ್!
ಜೂನ್ 25 ಮಂಗಳವಾರ, ಸೇಂಟ್ ಲೂಸಿಯಾದ ಗ್ರೋಸ್ ಐಲೆಟ್‌ನ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಗೆದ್ದು ಬೀಗಿದೆ.
ಟಿ20 ವಿಶ್ವಕಪ್‌ನ ಸೂಪರ್-8ರಲ್ಲಿ ಉಭಯ ತಂಡಗಳ ಕೊನೆಯ ಪಂದ್ಯ ಇದಾಗಿದ್ದು, ರೋಚಕತೆಯಿಂದ ಕೂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್‌ಗಳ ಬೃಹತ್ ಟಾರ್ಗೆಟ್ ಕಲೆ ಹಾಕಿತ್ತು.

ಈ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (92 ರನ್) ಅವರ ಅದ್ಭುತ ಬ್ಯಾಟಿಂಗ್ ಮಾತ್ರವಲ್ಲದೆ ಅಕ್ಸರ್ ಪಟೇಲ್ ಹಿಡಿದ ಕ್ಯಾಚ್ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೌಂಡರಿ ಬಳಿ ಒಂದೇ ಕೈಯಿಂದ ಅಚ್ಚರಿಯ ಕ್ಯಾಚ್ ಹಿಡಿದ ಅಕ್ಸರ್ ಪಟೇಲ್ ಅವರು ಬ್ಯಾಟರ್ ನನ್ನು ಕೂಡ ದಂಗುಬಡಿಸಿದರು.
ಆಸ್ಟ್ರೇಲಿಯಾದ ಬ್ಯಾಟಿಂಗ್ ವೇಳೆ ರೋಹಿತ್ ಶರ್ಮಾ ಇನಿಂಗ್ಸ್ ನ 9ನೇ ಓವರ್ ಅನ್ನು ಕುಲದೀಪ್ ಯಾದವ್‌ಗೆ ನೀಡಿದರು. ಈ ಓವರ್‌ನ ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ ದೊಡ್ಡ ಹೊಡೆತಕ್ಕೆ ಯತ್ನಿಸಿದರು.
ಆದರೆ ಬೌಂಡರಿ ಬಳಿ ನಿಂತಿದ್ದ ಅಕ್ಷರ್ ಪಟೇಲ್ ಒಂದೇ ಬಾರಿಗೆ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಇತ್ತ ಮಾರ್ಷ್ ಅವರು ಔಟಾಗಿರುವುದನ್ನು ನಂಬಲು ಸಾಧ್ಯವಾಗಲಿಲ್ಲ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಮಾರ್ಷ್ 28 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು. ಕುಲದೀಪ್ ಯಾದವ್ ತಮಗೆ ಸಿಕ್ಕ ಅವಕಾಶದಲ್ಲಿ ಭಾರತಕ್ಕೆ ಅದ್ಭುತ ಯಶಸ್ಸನ್ನು ತಂದುಕೊಟ್ಟರು.
ಮತ್ತೊಂದೆಡೆ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 41 ಎಸೆತಗಳಲ್ಲಿ 92 ರನ್ ಗಳಿಸಿ ಬಿರುಸಿನ ಆಟವಾಡಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್ ಮತ್ತು 7 ಬೌಂಡರಿಗಳು ಸೇರಿದ್ದವು.
ಕಾಂಗೂರು ಪಡೆಯ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಒಂದು ಓವರ್‌ನಲ್ಲಿ ರೋಹಿತ್ 4 ಸಿಕ್ಸರ್ ಬಾರಿಸಿ ಒಟ್ಟು 28 ರನ್ ಗಳಿಸಿದರು. ರೋಹಿತ್ ಶತಕ ಪೂರೈಸುವ ಮುನ್ನವೇ ಔಟಾದರೂ, ಈ ವೇಳೆ ಹಲವು ದೊಡ್ಡ ದಾಖಲೆಗಳನ್ನು ಮುರಿದು ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಇದರಲ್ಲಿ ಕ್ರಿಸ್ ಗೇಲ್ ಮತ್ತು ಯುವರಾಜ್ ಸಿಂಗ್ ಅವರ ದಾಖಲೆಗಳೂ ಸೇರಿವೆ.
ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳು ಪೂರೈಕೆ
ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ. ಈ ದಾಖಲೆ ಮಾಡಿದ ವಿಶ್ವದ ಮೊದಲ ಮತ್ತು ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
92 ರನ್‌ಗಳು ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಕಂಡ ದೊಡ್ಡ ಇನ್ನಿಂಗ್ಸ್ ಆಗಿದೆ. ಇದಕ್ಕೂ ಮುನ್ನ 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 79 ರನ್ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications