IND vs ENG: ಆಂಗ್ಲರ ಎಡೆಮುರಿ ಕಟ್ಟಿದ ಅಕ್ಸರ್-ಕುಲದೀಪ್ ಜೋಡಿ!
ಜೂನ್ 28 ಶುಕ್ರವಾರ, ಭಾರತ ತಂಡವು 2024ರ ಟಿ20 ವಿಶ್ವಕಪ್ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ 68 ರನ್ ಗಳಿಂದ ಸೋಲಿಸಿತ್ತು. ಇದೀಗ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಇಂಗ್ಲೆಂಡ್ ಎದುರು ಟೀಮ್ ಇಂಡಿಯಾದ ಈ ಗೆಲುವಿನಲ್ಲಿ ಭಾರತದ ಸ್ಪಿನ್ನರ್‌ಗಳ ಪ್ರದರ್ಶನ ಅಮೋಘವಾಗಿತ್ತು. ಭಾರತ ಪರ ಅಕ್ಸರ್ ಪಟೇಲ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಈ ಪಂದ್ಯದಲ್ಲಿ ಅಕ್ಸರ್ ಹೊರತಾಗಿ ಕುಲದೀಪ್ ಯಾದವ್ ಕೂಡ ತಮ್ಮ ಸ್ಪಿನ್ ಮೋಡಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಈ ಇಬ್ಬರು ಬೌಲರ್‌ಗಳು 6 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಟ್ಟಿ ಹಾಕಿ ಭಾರತದ ಗೆಲುವನ್ನು ಖಚಿತಪಡಿಸಿದರು.
ಅಕ್ಸರ್ ಪಟೇಲ್ ಬೆಂಕಿ ಬೌಲಿಂಗ್ ಪ್ರದರ್ಶನ
ಸೆಮಿಫೈನಲ್ ಪಂದ್ಯದಲ್ಲಿ ಅಕ್ಸರ್ ಪಟೇಲ್ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡಿ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಕಟ್ಟಿ ಹಾಕಿದರು. 4ನೇ ಓವರ್ ಬೌಲಿಂಗ್ ಮಾಡಲು ಬಂದ ಅಕ್ಸರ್ ತಮ್ಮ ಮೊದಲ ಎಸೆತದಲ್ಲಿ ಅಪಾಯಕಾರಿ ಬ್ಯಾಟರ್ ಜೋಸ್ ಬಟ್ಲರ್ (23) ವಿಕೆಟ್ ಪಡೆದರು. ಬಟ್ಲರ್ ಕ್ಯಾಚ್ ಹಿಡಿಯುವಲ್ಲಿ ರಿಷಬ್ ಪಂತ್ ಯಶಸ್ವಿಯಾದರು.

ಇದಾದ ಬಳಿಕ ಅಕ್ಸರ್ 5ನೇ ಓವರ್‌ನ ಮೊದಲ ಎಸೆತದಲ್ಲಿ ಜಾನಿ ಬೈರ್ ಸ್ಟೋವ್ (0) ಅವರನ್ನು ಔಟ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ಮತ್ತೆ ಅಕ್ಸರ್ ಅವರ 8ನೇ ಓವರ್‌ನಲ್ಲಿ ಮೊಯೀನ್ ಅಲಿ (8) ಅವರನ್ನು ರಿಷಬ್ ಪಂತ್ ಸ್ಟಂಪ್ ಔಟ್ ಮಾಡಿದರು.
ಈ ಮೂಲಕ ಅಕ್ಸರ್ ಪಟೇಲ್ ತಮ್ಮ 4 ಓವರ್‌ಗಳ ಕೋಟಾದಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಸರ್ ತಮ್ಮ ಬೆಂಕಿ ಬೌಲಿಂಗ್ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಆಂಗ್ಲರಿಗೆ ಕಾಟ ಕೊಟ್ಟ ಕುಲದೀಪ್
ಭಾರತ ಎದುರು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಬಲಿಯಾದರು. ಕುಲದೀಪ್ 4 ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.
ಕುಲದೀಪ್ ಮೊದಲು ಸ್ಯಾಮ್ ಕರ್ರನ್ (2) ಅವರನ್ನು ಎಲ್‌ಬಿಡಬ್ಲ್ಯೂ ಔಟ್ ಮಾಡಿದರು. ಇದಾದ ಬಳಿಕ ಕುಲದೀಪ್ ಹ್ಯಾರಿ ಬ್ರೂಕ್ (25) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್ ಹಾದಿ ತೋರಿಸಿದರು. ಕೊನೆಯಲ್ಲಿ ಕ್ರಿಸ್ ಜೋರ್ಡಾನ್ (1) ಅವರನ್ನು ಎಲ್‌ಬಿಡಬ್ಲ್ಯೂ ಔಟ್ ಮಾಡುವ ಮೂಲಕ ಕುಲದೀಪ್ 3 ವಿಕೆಟ್ ಪಡೆದು ಟೀಮ್ ಇಂಡಿಯಾ ಗೆಲುವಿಗೆ ಕಾರಣರಾದರು.
ಇಂಗ್ಲೆಂಡ್ ವಿರುದ್ಧದ ಟೀಮ್ ಇಂಡಿಯಾದ ಈ ಗೆಲುವಿನಲ್ಲಿ ಅಕ್ಸರ್ ಪಟೇಲ್ ಮತ್ತು ಕುಲದೀಪ್ ಯಾದವ್ ಒಟ್ಟು 6 ವಿಕೆಟ್ ಪಡೆದರು. ಇವರಿಬ್ಬರನ್ನು ಹೊರತುಪಡಿಸಿ ಜಸ್ಪ್ರೀತ್ ಬುಮ್ರಾ ಕೂಡ 2 ವಿಕೆಟ್ ಕಬಳಿಸಿದರೆ, ಇಂಗ್ಲೆಂಡ್‌ನ ಇಬ್ಬರು ಬ್ಯಾಟರ್‌ಗಳು ರನೌಟ್ ಆಗಿ ಪೆವಿಲಿಯನ್‌ಗೆ ಮರಳಿದರು.
ಈ ಕಾರಣದಿಂದಾಗಿ ಭಾರತ ನೀಡಿದ 172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 103 ರನ್‌ಗಳಿಗೆ ಕುಸಿದು 68 ರನ್‌ಗಳಿಂದ ಸೋತು ಫೈನಲ್‌ನಿಂದ ಹೊರಬಿದ್ದಿತ್ತು. ಜೂನ್ 29 ರಂದು ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ಸೆಣಸಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications