T20 World Cup 2024: ಮಿಂಚಿದ ಶಕಿಬ್ ಅಲ್ ಹಸನ್; ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾದೇಶ ತಂಡಕ್ಕೆ ಗೆಲುವು
ಗುರುವಾರ, ಜೂನ್ 13ರಂದು ಕಿಂಗ್‌ಸ್ಟೌನ್‌ನ ಸೇಂಟ್ ವಿನ್ಸೆಂಟ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಡಿ ಗುಂಪಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಬಾಂಗ್ಲಾದೇಶ ತಂಡ 25 ರನ್‌ಗಳ ಅಮೋಘ ಗೆಲುವು ದಾಖಲಿಸಿತು.
ಈ ಗೆಲುವಿನ ಮೂಲಕ ನಜ್ಮುಲ್ ಹೊಸೈನ್ ಶಾಂಟೋ ನಾಯಕತ್ವದ ಬಾಂಗ್ಲಾದೇಶ ತಂಡ ಪ್ರಸಕ್ತ ಟಿ20 ವಿಶ್ವಕಪ್‌ನ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ. ಇದೇ ವೇಳೆ ಸ್ಕಾಟ್ ಎಡ್ವರ್ಡ್ಸ್ ನಾಯಕತ್ವದ ನೆದರ್ಲ್ಯಾಂಡ್ಸ್ ತಂಡ ಈ ಪಂದ್ಯ ಸೋತ ನಂತರ, ತನ್ನ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯುವ ಅವಕಾಶವನ್ನು ಕ್ಷೀಣವಾಗಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಶಕಿಬ್ ಅಲ್ ಹಸನ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು.
160 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ ಮಧ್ಯಮ ಕ್ರಮಾಂಕ ಉತ್ತಮ ಪ್ರದರ್ಶನದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್ ಮಾತ್ರ ಗಳಿಸಿ 25 ರನ್‌ಗಳು ಸೋಲನುಭವಿಸಿತು.

ನೆದರ್ಲ್ಯಾಂಡ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಮೈಕೆಲ್ ಲೆವಿಟ್ (18 ರನ್) ಮತ್ತು ಮ್ಯಾಕ್ಸ್ ಓಡೌ'ಡ್ (12 ರನ್) ಸಾಧಾರಣ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 22 ರನ್‌ಗಳ ಜೊತೆಯಾಟ ನಿರ್ಮಿಸಿತು.
ನಂತರ ಬಂದ ವಿಕ್ರಮ್‌ಜಿತ್ ಸಿಂಗ್ 16 ಎಸೆತಗಳಲ್ಲಿ 3 ಸಿಕ್ಸರ್‌ಗಳೊಂದಿಗೆ 26 ರನ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 22 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 33 ರನ್, ನಾಯಕ ಸ್ಕಾಟ್ ಎಡ್ವರ್ಡ್ಸ್ 23 ಎಸೆತಗಳಲ್ಲಿ 3 ಬೌಂಡರಿ ಮೂಲಕ 25 ರನ್ ಗಳಿಸಿದರು. ಕೊನೆಯಲ್ಲಿ ಆರ್ಯನ್ ದತ್ ಅಜೇಯ 15 ರನ್ ಗಳಿಸಿದರೂ, ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ರಿಷಾದ್ ಹೊಸೈನ್ 4 ಓವರ್‌ಗಳಲ್ಲಿ 33 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ತಸ್ಕಿನ್ ಅಹ್ಮದ್ 4 ಓವರ್‌ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮುಸ್ತಾಫಿಜುರ್ ರಹಮಾನ್, ತಂಝೀಮ್ ಹಸನ್ ಶಕಿಬ್ ಮತ್ತು ಮಹಮದುಲ್ಲಾ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ್ದ ತಂಝೀಮ್ ಹಸನ್ ಶಕಿಬ್ ಮತ್ತು ನಜ್ಮುಲ್ ಹೊಸೈನ್ ಶಾಂಟೋ ಉತ್ತಮ ಅರಂಭ ನೀಡಲಿಲ್ಲ. ನಾಯಕ ಕೇವಲ 1 ರನ್ ಗಳಿಸಿ ಔಟಾದರು. ಬಳಿಕ ಬಂದ ಲಿಟ್ಟನ್ ದಾಸ್ ಕೂಡ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಈ ವೇಳೆ ಕ್ರೀಸ್‌ಗೆ ಆಗಮಿಸಿದ ಶಕಿಬ್ ಅಲ್ ಹಸನ್ 46 ಎಸೆತಗಳಲ್ಲಿ 9 ಬೌಂಡರಿ ಸಮೇತ ಅಜೇಯ 64 ರನ್ ಗಳಿಸಿದರೆ, ತೌಹಿದ್ ಹೃದೋಯ್ 9 ರನ್, ಮಹಮ್ಮದುಲ್ಲಾ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 25 ರನ್ ಗಳಿಸಿದರು. ಜಕರ್ ಅಲಿ ಅಜೇಯ 14 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡದ ಪರ ಆರ್ಯನ್ ದತ್ ಮತ್ತು ವ್ಯಾನ್ ಮಿಕೇರೆನ್ ತಲಾ ಎರಡು ವಿಕೆಟ್ ಪಡೆದರೆ, ಟಿಮ್ ಪ್ರಿಂಗಲ್ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications