ಜೂನ್ 27 ಗುರುವಾರ, ಐಸಿಸಿ ಟಿ20 ವಿಶ್ವಕಪ್ 2024ರ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಅಫ್ಘಾನಿಸ್ತಾನವನ್ನು ಸೋಲಿಸಿ ಫೈನಲ್‌ಗೆ ತನ್ನ ಟಿಕೆಟ್ ಅನ್ನು ಖಚಿತಪಡಿಸಿಕೊಂಡಿದೆ.
ಗಯಾನದಲ್ಲಿ (ಜೂನ್ 27) ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ. 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶವಿದೆ.

ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಎಲ್ಲರ ಕಣ್ಣು ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಮೇಲಿದೆ. ಹೀಗಾಗಿ ಇಂಗ್ಲೆಂಡ್ ಮುಖ್ಯ ಕೋಚ್ ಮ್ಯಾಥ್ಯೂ ಮೋಟ್ ಅವರು ವಿರಾಟ್ ಕೊಹ್ಲಿ ಬಗ್ಗೆ ಎಚ್ಚರಿಕೆಯಿಂದ ಇರಲು ತಮ್ಮ ಆಟಗಾರರಿಗೆ ಸಲಹೆ ನೀಡಿದ್ದಾರೆ.
ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಸೈಲೆಂಟ್ ಆಗಿದೆ. ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿಲ್ಲ.
ಕೊಹ್ಲಿ ಆಡಿರುವ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 66 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 37 ಆಗಿದೆ. ಆದರೆ ಇಂಗ್ಲೆಂಡ್ ತಂಡದ ಕೋಚ್ ಮಾತ್ರ ವಿರಾಟ್ ಕೊಹ್ಲಿ ಅವರನ್ನು ಕಡೆಗಣಿಸಿಲ್ಲ.
ಏಕೆಂದರೆ ವಿರಾಟ್ ಕೊಹ್ಲಿ ನಾಕೌಟ್ ಪಂದ್ಯಗಳಲ್ಲಿ ಅಬ್ಬರಿಸುವುದು ಖಚಿತ. ಹೀಗಾಗಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಮ್ಯಾಥ್ಯೂ ಮೋಟ್ ಆಶಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮ್ಯಾಥ್ಯೂ ಮೋಟ್ ಅವರು, 'ವಿರಾಟ್ ಅವರು ಬಹಳ ಸಮಯದಿಂದ ತಮ್ಮ ಸಾಮರ್ಥ್ಯವನ್ನು ವರ್ಗವನ್ನು ಸಾಬೀತುಪಡಿಸಿದ್ದಾರೆ. ನಾವು ಉತ್ತಮವಾಗಿ ತಯಾರಿ ನಡೆಸಿರುವ ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರು.
ಕೊಹ್ಲಿ ಹೇಗೆ ಆಡುತ್ತಾರೆ? ನಮಗೆ ಎಷ್ಟು ಅಪಾಯಕಾರಿ? ಎಂದು ನಮಗೆ ತಿಳಿದಿದೆ. ಜೊತೆಗೆ ಅವನ ಆಟದ ಬುದ್ಧಿವಂತಿಕೆಯೂ ನಮಗೆ ತಿಳಿದಿದೆ. ಆಟಕ್ಕೆ ತಕ್ಕಂತೆ ಇನ್ನಿಂಗ್ಸ್ ಆಡುವ ಕೌಶಲ್ಯವನ್ನು ಕೊಹ್ಲಿ ಹೊಂದಿದ್ದಾರೆ. ಆದ್ದರಿಂದ ಕೊಹ್ಲಿ ಖಂಡಿತವಾಗಿಯೂ ನಮಗೆ ಪ್ರಮುಖ ಆಟಗಾರರಾಗಿದ್ದಾರೆ ಎಂದು ಹೇಳದ್ದಾರೆ.
ಗಯಾನಾದಲ್ಲಿ ನಡೆಯಲಿರುವ ಪಂದ್ಯವು 2022ರ ಇಂಗ್ಲೆಂಡ್ ಮತ್ತು ಭಾರತ ನಡುವಿನ ಸೆಮಿಫೈನಲ್‌ನ ಮರುಪಂದ್ಯವಾಗಿದೆ. ಅಲ್ಲಿ ಇಂಗ್ಲೆಂಡ್ ತಂಡ ಅಡಿಲೇಡ್ ಓವಲ್‌ನಲ್ಲಿ 10 ವಿಕೆಟ್‌ಗಳಿಂದ ಗೆದ್ದಿದೆ.
ಆದಾಗ್ಯೂ, ಕೆರಿಬಿಯನ್ ಪಿಚ್‌ಗಳ ಪರಿಸ್ಥಿತಿ ವಿಭಿನ್ನವಾಗಿವೆ. ಈ ಹೊಸ ಸಂದರ್ಭಗಳಿಗೆ ತ್ವರಿತವಾಗಿ ಹೊಂದಿಕೊಳ್ಳುವ ತಂಡವು ಮೇಲಿರುತ್ತದೆ (ಫೈನಲ್) ಎಂದು ಮೋಟ್ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಎಲ್ಲರ ಕಣ್ಣು ಕಿಂಗ್ ಕೊಹ್ಲಿ ಮೇಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್‌ನಿಂದ ಅಧಿಕ ರನ್ ಬಂದರೆ ಟೀಮ್ ಇಂಡಿಯಾದ ಮುಂದಿನ ಹಾದಿ ತುಂಬಾ ಸುಲಭವಾಗಲಿದೆ.
ದಕ್ಷಿಣ ಆಫ್ರಿಕಾ ತಂಡವು 2024ರ ಟಿ20 ವಿಶ್ವಕಪ್‌ನ ಮೊದಲ ಫೈನಲಿಸ್ಟ್ ಆಗಿದೆ. ಗುರುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರಿಣಗಳ ಪಡೆ ಅಫ್ಘಾನಿಸ್ತಾನ ತಂಡವನ್ನು ಟೂರ್ನಿಯಿಂದ ಹೊರಗಿಟ್ಟಿದೆ. ಇದೀಗ ಜೂನ್ 29 ರಂದು ನಡೆಯುವ ಪ್ರಶಸ್ತಿ ಸಮರದಲ್ಲಿ ಭಾರತ vs ಇಂಗ್ಲೆಂಡ್ ಸೆಮಿಫೈನಲ್-2 ವಿಜೇತರನ್ನು ಎದುರಿಸಲಿದೆ.