T20 WC 2024 Final: ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ಚೋಕರ್ಸ್ ಪಟ್ಟಿ ಉಳಿಸಿಕೊಂಡ ದಕ್ಷಿಣ ಆಫ್ರಿಕಾ
ಶನಿವಾರ, ಜೂನ್ 29ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಬಹು ನಿರೀಕ್ಷಿತ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ತಂಡ 7 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಿತು.
ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಬಲಿಷ್ಠ ಭಾರತದೆದುರು ಕೊನೆಯ ಎಸೆತದವರೆಗೂ ಹೋರಾಡಿ ಸೋಲೊಪ್ಪಿಕೊಂಡಿತು.

ಇನ್ನು ಈ ಮೂಲಕ ಭಾರತ ತಂಡ 13 ವರ್ಷಗಳ ಐಸಿಸಿ ವಿಶ್ವಕಪ್ ಟ್ರೋಫಿ ಬರವನ್ನು ನೀಗಿಸಿಕೊಂಡಿತು ಮತ್ತು 2007ರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಬಳಿಕ 2024ರಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಭಾರತ ತಂಡದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕೊನೆಗೂ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ಇದೇ ವೇಳೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಭಾರತ ತಂಡ ಗುರು ಕಾಣಿಕೆ ನೀಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಅವರ ನಿರ್ಣಾಯಕ ಅರ್ಧಶತಕ ಮತ್ತು ಅಕ್ಷರ್ ಪಟೇಲ್ ಅವರ ಅಮೋಘ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು.

177 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸುವ ಮೂಲಕ ವಿರೋಚಿತ ಸೋಲು ಕಂಡಿತು.
ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್ ಜೋಡಿ ಮೊದಲ ವಿಕೆಟ್‌ಗೆ ಕೇವಲ 7 ರನ್ ಗಳಿಸಿತು. ಈ ವೇಳೆ ರೀಜಾ ಹೆಂಡ್ರಿಕ್ಸ್ 4 ರನ್ ಗಳಿಸಿ ಔಟಾದರೆ, ನಂತರ ಬಂದ ನಾಯಕ ಏಡೆನ್ ಮಾರ್ಕ್ರಾಮ್ ಕೂಡ 4 ರನ್ ಗಳಿಸಿ ಔಟಾದರು.
ಆಗ ಜೊತೆಯಾದ ಕ್ವಿಂಟನ್ ಡಿ ಕಾಕ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಜೋಡಿ ಮೂರನೇ ವಿಕೆಟ್‌ಗೆ 58 ರನ್‌ಗಳ ಜೊತೆಯಾಟ ನಿರ್ಮಿಸಿ ದಕ್ಷಿಣ ಆಫ್ರಿಕಾ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ತಂಡದ ಮೊತ್ತ 70 ರನ್‌ಗಳಾಗಿದ್ದಾಗ 21 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 31 ರನ್ ಗಳಿಸಿದ್ದ ಟ್ರಿಸ್ಟಾನ್ ಸ್ಟಬ್ಸ್ ವಿಕೆಟ್ ಒಪ್ಪಿಸಿದರು.
ಇನ್ನು ಕ್ವಿಂಟನ್ ಡಿ ಕಾಕ್ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 39 ರನ್ ಗಳಿಸಿ ಔಟಾದರು. ಈ ವೇಳೆ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಆಸೆ ಚಿಗುರಿಸಿದ್ದು ಹೆನ್ರಿಚ್ ಕ್ಲಾಸೆನ್. ಕೇವಲ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಮೇತ 52 ರನ್ ಬಾರಿಸಿದರು.

ಆ ಬಳಿಕ ಡೇವಿಡ್ ಮಿಲ್ಲರ್ 17 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 21 ರನ್ ಗಳಿಸಿದರೆ, ಉಳಿದಂತೆ ಮಾರ್ಕೊ ಜಾನ್ಸೆನ್ 2 ರನ್, ಕೇಶವ್ ಮಹಾರಾಜ್ 2 ರನ್, ಕಗಿಸೊ ರಬಾಡ 4 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ 3 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಜಸ್ಪ್ರೀತ್ ಬುಮ್ರಾ 4 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರು. ಅರ್ಶ್‌ದೀಪ್ ಸಿಂಗ್ 4 ಓವರ್‌ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 4 ಓವರ್‌ಗಳಲ್ಲಿ 49 ರನ್ ನೀಡಿ 1 ವಿಕೆಟ್ ಪಡೆದರು.
ಇನ್ನು ವಿಶ್ವ ಚಾಂಪಿಯನ್ ಭಾರತ ತಂಡದ ಗೆಲುವಿಗೆ ಕಾರಣರಾದ ವಿರಾಟ್ ಕೊಹ್ಲಿ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದರೆ, ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications