ಜೂನ್ 7 ಶುಕ್ರವಾರ, 2024ರ ಐಸಿಸಿ ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಅಮೆರಿಕದ ವಿರುದ್ಧ ಮುಗ್ಗರಿಸಿದೆ. ಪಾಕಿಸ್ತಾನ ನೀಡಿದ ಗುರಿಯನ್ನು ಬೆನ್ನಟ್ಟಿದ ಆತಿಥೇಯ ಅಮೆರಿಕ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.
ಇದರ ನಂತರ ಸೂಪರ್ ಓವರ್‌ನಲ್ಲಿ ಯುಎಸ್‌ಎ ಮೊದಲು ಬ್ಯಾಟಿಂಗ್ ಮಾಡಿ 18 ರನ್ ಟಾರ್ಗೆಟ್ ನೀಡಿತ್ತು. ಪಾಕಿಸ್ತಾನ ಕೇವಲ 13 ರನ್ ಗಳಿಸುವ ಮೂಲಕ ಪಂದ್ಯದಲ್ಲಿ ಸೋಲು ಕಾಣಬೇಕಾಯಿತು.

ಈ ಸೋಲಿನ ಬಳಿಕ ಪಾಕಿಸ್ತಾನ ತಂಡ ಮತ್ತು ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಟ್ರೋಲ್ ಆಗುತ್ತಿದ್ದಾರೆ. ಇದರ ಜೊತೆಗೆ ಮಾಜಿ ಕ್ರಿಕೆಟಿಗರು ಕೂಡ ಪಾಕಿಸ್ತಾನ ಆಟಗಾರರನ್ನು ಹೀಯಾಳಿಸುತ್ತಿದ್ದಾರೆ.
ಇದರ ಮಧ್ಯೆ ಟೀಮ್ ಇಂಡಿಯಾ ಮಾಜಿ ಆಟಗಾರ ವಾಸಿಂ ಜಾಫರ್ ತನ್ನ ಟ್ವೀಟರ್ (ಎಕ್ಸ್) ಖಾತೆಯಲ್ಲಿ ಪಾಕಿಸ್ತಾನವನ್ನು ಸೋಲಿಸಿರುವುದಕ್ಕೆ ಯುಎಸ್‌ಎ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ವಾಸಿಂ ಜಾಫರ್ ಅವರ ಪೋಸ್ಟ್ ಇದೀಗ ವೈರಲ್ ಆಗಿದೆ.
ಯುಎಸ್ಎ ಕ್ರಿಕೆಟ್ ಮತ್ತು ಕ್ಯಾಪ್ಟನ್ ಮೋನಾಕ್ ಪಟೇಲ್ ಅವರಿಗೆ ಧನ್ಯವಾದಗಳು, ನೀವು ಕ್ರಿಕೆಟ್ ಪ್ರಪಂಚದ ಗೌರವವನ್ನು ಗಳಿಸಿದ್ದೀರಿ ಎಂದು ಬರೆದಿರುವ ಜಾಫರ್, ಇತ್ತೀಚೆಗೆ ವೈರಲ್ ಆಗುತ್ತಿರುವ ಪ್ರಸಿದ್ಧ ಮೀಮ್ ('ಏ-ಹಾಯ್ ಓಯೆ ಹೋಯೆ') ಅನ್ನು ಪೋಸ್ಟ್ ಮಾಡಿದ್ದಾರೆ. ಜಾಫರ್ ಅವರ ಈ ಪೋಸ್ಸ್‌ಗೆ ನೆಟಿಗರು ಪ್ರತಿಕ್ರಿಯಿಸಿದ್ದು, ಪಾಕಿಸ್ತಾನ ತಂಡದ ಕಾಲನ್ನು ತೀವ್ರವಾಗಿ ಎಳೆಯುತ್ತಿದ್ದಾರೆ.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಬಾಬರ್, 'ಯಾವುದೇ ಪಂದ್ಯಕ್ಕೆ ಅತ್ಯುತ್ತಮ ತಯಾರಿ ಅಗತ್ಯ. ನಮ್ಮ ತಯಾರಿ ಉತ್ತಮವಾಗಿತ್ತು, ಆದರೆ ಪಂದ್ಯದಲ್ಲಿ ತಂತ್ರವನ್ನು ಅಳವಡಿಸಲು ಸಾಧ್ಯವಾಗಲಿಲ್ಲ. ನಾವು ಮೂರೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.
ನಾವು ಮೊದಲ ಆರು ಓವರ್‌ಗಳ (ಪವರ್ ಪ್ಲೇ) ಲಾಭವನ್ನು ಪಡೆಯಲಿಲ್ಲ. 10ನೇ ಓವರ್‌ನ ನಂತರ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇದ್ದೆವು, ಇದರಿಂದಾಗಿ ಲಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಬ್ಯಾಟರ್‌ಗಳು ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನ ಮುಂದಿನ ಪಂದ್ಯವನ್ನು ಭಾರತದೊಂದಿಗೆ ಆಡಲಿದೆ. ಈ ಬ್ಲಾಕ್‌ಬಸ್ಟರ್ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ.
ಇದೇ ಮೈದಾನದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿರುವ ಭಾರತ ಐರ್ಲೆಂಡ್ ಅನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಈ ಮೈದಾನದ ಪಿಚ್ ತುಂಬಾ ಅಪಾಯಕಾರಿಯಾಗಿದೆ. ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯದ ನಂತರ, ಅನುಭವಿ ಕ್ರಿಕೆಟಿಗರು ಪಿಚ್ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಒಂದು ವೇಳೆ ಪಾಕಿಸ್ಥಾನವು ಭಾರತದ ಎದುರು ಸೋತರೆ ಸೂಪರ್-8 ಗೆ ಹೋಗುವ ದಾರಿ ಕಷ್ಟವಾಗಲಿದೆ.