T20 World Cup 2024: ಆಂಗ್ಲರ ವಿರುದ್ಧ ಸೇಡು ತೀರಿಸಿಕೊಂಡ ಭಾರತ; ಫೈನಲ್‌ನಲ್ಲಿ ಹರಿಣ ಪಡೆ ವಿರುದ್ಧ ಕಾಳಗಕ್ಕೆ ಸಜ್ಜು
ಗುರುವಾರ, ಜೂನ್ 27ರ ತಡರಾತ್ರಿ ಗಯಾನಾದ ಪ್ರಾವಿಡೆನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ 68 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ.
ಈ ಮೂಲಕ 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನ್ ಹೀನಾಯ ಸೋಲಿಗೆ ರೋಹಿತ್ ಶರ್ಮಾ ಪಡೆ 2024ರ ಟಿ20 ವಿಶ್ವಕಪ್‌ನ ಅದೇ ಸೆಮಿಫೈನಲ್‌ನಲ್ಲಿ ಸೋಲಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಅಲ್ಲದೆ, ಶನಿವಾರ, ಜೂನ್ 29ರಂದು ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕ ಮತ್ತು ಸೂರ್ಯಕುಮಾರ್ ಯಾದವ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತ್ತು.
172 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ಭಾರತ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದರು ಮತ್ತು ಯಾವುದೇ ಅರ್ಧಶತಕವಿಲ್ಲದೆ 16.4 ಓವರ್‌ಗಳಲ್ಲಿ ಕೇವಲ 103 ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿದರು.
ಟೀಮ್ ಇಂಡಿಯಾ 2007 ಮತ್ತು 2014ರ ನಂತರ ಟಿ20 ವಿಶ್ವಕಪ್‌ನಲ್ಲಿ ಮೂರನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿತು. ಗಮನಾರ್ಹವಾಗಿ, ಈ ಪಂದ್ಯಾವಳಿಯಲ್ಲಿ ಭಾರತ ತಂಡ ಅಜೇಯವಾಗಿದ್ದು, ದಕ್ಷಿಣ ಆಫ್ರಿಕಾ ಕೂಡ ಅಜೇಯವಾಗಿ ಫೈನಲ್ ತಲುಪಿದೆ.

ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್ ಮತ್ತು ಫಿಲಿಪ್ ಸಾಲ್ಟ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 3.1 ಓವರ್‌ಗಳಲ್ಲಿ 26 ರನ್ ಜೊತೆಯಾಟ ನಿರ್ಮಿಸಿತು. ಈ ವೇಳೆ ನಾಯಕ ಜೋಸ್ ಬಟ್ಲರ್ 15 ಎಸೆತಗಳಲ್ಲಿ 4 ಬೌಂಡರಿ ಸಮೇತ 23 ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ಮೊಯಿನ್ ಅಲಿ 8 ರನ್ ಗಳಿಸಿ ಔಟಾದರೆ, ಜಾನಿ ಬೈರ್‌ಸ್ಟೋವ್ ಸೊನ್ನೆ ಸುತ್ತಿದರು. ಇದೇ ವೇಳೆ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಸ್ಫೋಟಕ ಬ್ಯಾಟರ್ ಫಿಲಿಪ್ ಸಾಲ್ಟ್ ಕ್ಲೀನ್ ಬೌಲ್ಡ್ ಆಗುವ ಮೂಲಕ ಇಂಗ್ಲೆಂಡ್ ತಂಡದ ಸೋಲಿಗೆ ನಾಂದಿ ಹಾಡಿದರು.

ಆ ಬಳಿಕ ಕ್ರೀಸ್‌ಗೆ ಬಂದ ಹ್ಯಾರಿ ಬ್ರೂಕ್ 19 ಎಸೆತಗಳಲ್ಲಿ 3 ಬೌಂಡರಿ ಮೂಲಕ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಸ್ಯಾಮ್ ಕರ್ರಾನ್ ಕೇವಲ 2 ರನ್‌ಗಳಿಗೆ ಪೆವಿಲಿಯನ್ ಸೇರಿದರು. ಅಪಾಯಕಾರಿ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ 11 ರನ್ ಗಳಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು.
ಇನ್ನು ಕ್ರಿಸ್ ಜೋರ್ಡಾನ್ 1 ರನ್ ಗಳಿಸಿದರೆ, ಜೋಫ್ರಾ ಆರ್ಚರ್ ಕೊನೆಯಲ್ಲಿ ಅಬ್ಬರಿಸಲು ಪ್ರಯತ್ನಿಸಿದರು ಮತ್ತು 15 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 21 ರನ್ ಬಾರಿಸಿದರು. ಉಳಿದಂತೆ ಆದಿಲ್ ರಶೀದ್ 2 ರನ್ ಮತ್ತು ರೀಸ್ ಟೋಪ್ಲೆ 3 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಕುಲದೀಪ್ ಯಾದವ್ 4 ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಅಕ್ಷರ್ ಪಟೇಲ್ 4 ಓವರ್‌ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ 2.4 ಓವರ್‌ಗಳಲ್ಲಿ 12 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications