ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ 15 ಸದಸ್ಯರ ಹೆಸರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಏಪ್ರಿಲ್ 30 ರಂದು ಪ್ರಕಟಿಸಿದೆ.
ಆದರೆ ನೂತನ ಟಿ20 ವಿಶ್ವಕಪ್ ಟೀಮ್ ಇಂಡಿಯಾದಿಂದ ಕೆಎಲ್ ರಾಹುಲ್, ರಿಂಕು ಸಿಂಗ್, ದಿನೇಶ್ ಕಾರ್ತಿಕ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ತಿಲಕ್ ವರ್ಮಾ, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರವಿ ಬಿಷ್ಣೋಯಿ ಸೇರಿದಂತೆ ಹಲವು ಯುವ ಆಟಗಾರರನ್ನು ಕೈ ಬಿಟ್ಟಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಬಿಸಿಸಿಐ ಆಯ್ಕೆ ಸಮಿತಿ ಗುರಿಯಾದಂತೆ ಕಾಣುತ್ತಿದೆ.

ಅಲ್ಲದೆ ಕೈ ಬಿಟ್ಟಿರುವ ಕೆಲ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಬಿಸಿಸಿಐಗೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಆದರು ಅಚ್ಚರಿಪಡಬೇಕಿಲ್ಲ. ಅದರಂತೆ ಈ ಬಾರಿ ಯಾವೆಲ್ಲಾ ಆಟಗಾರರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿ 15 ಸದಸ್ಯರ ತಂಡದೊಂದಿಗೆ 4 ಮೀಸಲು ಆಟಗಾರರನ್ನು ಆಯ್ಕೆ ಮಾಡಿದೆ . ಇವರಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ಸ್ಥಾನ ಪಡೆದಿದ್ದಾರೆ. ಆದರೆ ಇದುವೇ ಅಂತಿಮ ತಂಡ ಎಂದು ಹೇಳಲು ಸಾಧ್ಯವಿಲ್ಲ.
ಏಕೆಂದರೆ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನ ಒಂದು ವಾರ ಬಾಕಿ ಇರುವಂತೆ ತಂಡವನ್ನು ಬದಲಾಯಿಸಬಹುದು. ಅಂದರೆ ಮುಂದಿನ ತಿಂಗಳ ಮೇ 25 ರವರೆಗೆ ತಂಡದಲ್ಲಿ ಆಟಗಾರರನ್ನು ಬದಲಾವಣೆ ಮಾಡಿಕೊಳ್ಳಲು ಐಸಿಸಿ ಅವಕಾಶ ನೀಡಿದೆ. ಇದರಿಂದ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ಟೀಮ್ ಇಂಡಿಯಾಕ್ಕೆ ಸೇರಿಸಿಕೊಳ್ಳಿ ಎಂದು ಬಿಸಿಸಿಐ ಒತ್ತಾಯಿಸುತ್ತಿದ್ದಾರೆ.
ತಂಡವನ್ನು ಬದಲಾಯಿಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಆನೇಕ ನಿಯಮಗಳಿದ್ದು, ಅದರಂತೆ ಟಿ20 ವಿಶ್ವಕಪ್ ಆರಂಭಕ್ಕೂ 1 ವಾರ ಮುಂಚಿತವಾಗಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ತಂಡವನ್ನು ಬದಲಾಯಿಸಲು ಸಾಧ್ಯವಾಗದೆ ಇದ್ದರೆ ಟೂರ್ನಿ ನಡೆಯುವಾಗ ಗಾಯದ ಸಮಸ್ಯೆ ಅಥವಾ ಇನ್ನಿತರ ಕಾರಣಗಳಿಗಾಗಿ ಬದಲಿ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ತಂಡವನ್ನು ಬದಲಾವಣೆ ಮಾಡಬೇಕಾಗುತ್ತದೆ. ಆದರೆ ಈ ರೀತಿ ಬದಲಾವಣೆ ಮಾಡುವ ಮುನ್ನ ಐಸಿಸಿ ಟೆಕ್ನಿಕಲ್ ಕಮಿಟಿಯ ಅನುಮತಿ ಪಡೆದುಕೊಳ್ಳಬೇಕು. ನಂತರವೇ ಮುಂದಿನ ಹೆಜ್ಜೆಯನ್ನು ಇಡಬೇಕು.
ಈ ಕಾರಣದಿಂದಾಗಿ ಬಿಸಿಸಿಐ ಆಯ್ಕೆ ಸಮಿತಿ 4 ಮೀಸಲು ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಒಂದು ವೇಳೆ ಆಯ್ಕೆ ಮಾಡಿರುವ ಆಟಗಾರರು ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದರೆ ಅವರನ್ನು ತಂಡದಿಂದ ಕೈ ಬಿಡುವುದು ಬಹುತೇಕ ಖಚಿತ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಐಪಿಎಲ್‌ನಲ್ಲಿ ಆಯ್ಕೆ ಆಗಿರುವ ಖುಷಿಯಲ್ಲಿ ಮೈ ಮರೆಯುವಂತಿಲ್ಲ.