ಶನಿವಾರ, ಜೂನ್ 15ರಂದು ಫ್ಲೋರಿಡಾದ ಲಾಡೆರ್‌ಹಿಲ್‌ನಲ್ಲಿ ಬಲಿಷ್ಠ ಭಾರತ ಮತ್ತು ದುರ್ಬಲ ಕೆನಡಾ ತಂಡಗಳ ನಡುವೆ ನಡೆಯಬೇಕಿದ್ದ 2024ರ ಐಸಿಸಿ ಟಿ20 ವಿಶ್ವಕಪ್‌ನ 33ನೇ ಪಂದ್ಯವು ನಿರಂತರ ಮಳೆಯಿಂದಾಗಿ ಒದ್ದೆಯಾದ ಔಟ್‌ಫೀಲ್ಡ್‌ನಿಂದ ಒಂದೇ ಒಂದು ಎಸೆತ ಕಾಣದೆ ರದ್ದುಗೊಂಡಿದೆ.
ನಿಗದಿತ ಟಾಸ್ ಸಮಯಕ್ಕಿಂತ ಮುಂಚಿತವಾಗಿ ಮಳೆ ಸುರಿಯಲು ಆರಂಭಿಸಿತು ಮತ್ತು ಅದು ಟಾಸ್ ಚಿಮ್ಮಲು ವಿಳಂಬವಾಗಿಸಿತು. ಎರಡಕ್ಕಿಂತ ಹೆಚ್ಚು ಬಾರಿ ತಪಾಸಣೆ ನಡೆಸಿದರೂ ಒದ್ದೆಯಾದ ಪಿಚ್ ಪಂದ್ಯ ನಡೆಸಲು ಅನುವು ಮಾಡಿಕೊಡಲಿಲ್ಲ. ಪಂದ್ಯದ ಆರಂಭವನ್ನು ಒಂದು ಗಂಟೆಯವರೆಗೆ ವಿಸ್ತರಿಸಿದರೂ, ಅಂಪೈರ್‌ಗಳು ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.

ಈಗಾಗಲೇ ಸೂಪರ್ 8ಕ್ಕೆ ಲಗ್ಗೆ ಇಟ್ಟಿರುವ ಭಾರತ, ಅಜೇಯರಾಗಿ ಮುಂದಿನ ಸುತ್ತಿಗೆ ಪ್ರವೇಶಿಸಿದೆ. ಎ ಗುಂಪಿನಲ್ಲಿ ಸೂಪರ್ 8 ಪ್ರವೇಶಿಸಿದ ಯುಎಸ್ಎ ಆಗಿದೆ. ಪಾಕಿಸ್ತಾನ, ಕೆನಡಾ ಮತ್ತು ಐರ್ಲೆಂಡ್ ತಂಡಗಳು ಸೂಪರ್ 8ರಿಂದ ಹೊರಬಿದ್ದಿವೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಇದುವರೆಗೆ ಆಡಿದ ಮೂರೂ ಪಂದ್ಯಗಳನ್ನು ಗೆಲ್ಲುವ ಮೂಲಕ ಪಂದ್ಯಾವಳಿಯಲ್ಲಿ ಅಜೇಯ ಓಟ ಮುಂದುವರೆಸಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 8 ವಿಕೆಟ್‌ಗಳ ಗೆಲುವಿನ ನಂತರ, ಪಾಕಿಸ್ತಾನ ವಿರುದ್ಧ ಆರು ರನ್‌ಗಳ ರೋಚಕ ಗೆಲುವು ಸಾಧಿಸಿತು.
ನಂತರ 2007ರ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡವು ತಮ್ಮ ಮೂರನೇ ಗುಂಪು ಹಂತದ ಪಂದ್ಯದಲ್ಲಿ ಸಹ-ಆತಿಥೇಯ ಯುಎಸ್ಎ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಗೆದ್ದುಬೀಗಿತು.
ಮತ್ತೊಂದೆಡೆ, ಈಗಾಗಲೇ ಸೂಪರ್ 8ರ ರೇಸ್‌ನಿಂದ ಹೊರಬಿದ್ದಿರುವ ಕೆನಡಾ ತಂಡ ಇದುವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ. ಇದೀಗ ಹೆಮ್ಮೆಗಾಗಿ ಆಡುವ ಮೂಲಕ 2024ರ ಟಿ20 ವಿಶ್ವಕಪ್‌ನ ಅಭಿಯಾನ ಕೊನೆಗೊಳಿಸಲಿದೆ.
ಈಗಾಗಲೇ ಎ ಗುಂಪಿನಿಂದ ಭಾರತ ಮತ್ತು ಯುಎಸ್ಎ ತಂಡಗಳು 2024ರ ಟಿ20 ವಿಶ್ವಕಪ್‌ನ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆದಿದ್ದರೆ, ಪಾಕಿಸ್ತಾನ, ಐರ್ಲೆಂಡ್ ಮತ್ತು ಕೆನಡಾ ತಂಡಗಳು ಹೊರಬಿದ್ದಿವೆ.
ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ತನ್ನ ಸೂಪರ್ 8ರ ಅಭಿಯಾನವನ್ನು ಗುರುವಾರ, ಜೂನ್ 20ರಂದು ಬಾರ್ಬಡೋಸ್‌ನಲ್ಲಿ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಪ್ರಾರಂಭಿಸಲಿದೆ.
ಆಂಟಿಗುವಾದ ನಾರ್ತ್ ಸೌಂಡ್‌ನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಜೂನ್ 22ರ ಶನಿವಾರದಂದು ಭಾರತ ತಂಡವು ಬಾಂಗ್ಲಾದೇಶ ಅಥವಾ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.
ಸೋಮವಾರ, ಜೂನ್ 24ರಂದು ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನ ಡೇರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ತಂಡವು ಐಸಿಸಿ ಪಂದ್ಯಾವಳಿಯಬದ್ಧ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.