ಬುಧವಾರ, ಜೂನ್ 12ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್‌ನ 25ನೇ ಪಂದ್ಯದಲ್ಲಿ ಭಾರತ ತಂಡವು ಹೈ-ಫ್ಲೈಯಿಂಗ್ ಯುಎಸ್ಎ ತಂಡವನ್ನು ಎದುರಿಸಲಿದೆ.
ಯುಎಸ್‌ಎ ತನ್ನ ಆರಂಭಿಕ ಪಂದ್ಯದಲ್ಲಿ ಕೆನಡಾ ತಂಡವನ್ನು ಸೋಲಿಸುವಾಗ 195ರ ಬೃಹತ್ ಗುರಿಯನ್ನು ಬೆನ್ನಟ್ಟುವ ಮೂಲಕ ಪಂದ್ಯಾವಳಿಯಲ್ಲಿ ಉನ್ನತ ಫಾರ್ಮ್‌ನಲ್ಲಿ ಸಾಗುತ್ತಿದೆ.

ನಂತರ, ತಮ್ಮ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ರೋಚಕವಾಗಿ ಸೋಲಿಸುವ ಮೂಲಕ ಮತ್ತಷ್ಟು ನಿಬ್ಬೆರಗಾಗಿಸಿದರು, ಟೈ ಪಂದ್ಯದ ನಂತರ ಸೂಪರ್ ಓವರ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಹೀನಾಯ ಸೋಲನ್ನು ನೀಡಿದರು.
ಇದೇ ವೇಳೆ ಭಾರತದ ಮಾಜಿ ವೇಗದ ಬೌಲರ್ ಲಕ್ಷ್ಮೀಪತಿ ಬಾಲಾಜಿ ಅವರು ಸಹ-ಆತಿಥೇಯ ಯುಎಸ್ಎ ವಿರುದ್ಧ 2024ರ ಟಿ20 ವಿಶ್ವಕಪ್‌ನ ಭಾರತದ ಮೂರನೇ ಪಂದ್ಯಕ್ಕೂ ಮುನ್ನ ತಮ್ಮ ಉತ್ಸಾಹವನ್ನು ಹೊರಹಾಕಿದರು.
ಭಾರತ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಲಕ್ಷ್ಮೀಪತಿ ಬಾಲಾಜಿ, ಯುಎಸ್ಎ ತಂಡಕ್ಕೆ ಪಂದ್ಯದ ಮಹತ್ವದ ಬಗ್ಗೆ ಮಾತನಾಡಿದರು. ಈ ಪಂದ್ಯವನ್ನು ಭಾರತದಲ್ಲಿ 1.4 ಶತಕೋಟಿ ಜನರು ವೀಕ್ಷಿಸುತ್ತಾರೆ. ಆದ್ದರಿಂದ, ಟೀಮ್ ಇಂಡಿಯಾ ವಿರುದ್ಧ ಅದ್ಭುತ ಪ್ರದರ್ಶನ ನೀಡಲು ಅವರಿಗೆ ಬೂಸ್ಟ್ ನೀಡುತ್ತದೆ.
"ಯುಎಸ್ಎ ತಂಡಕ್ಕೆ ಇದು ಅತಿದೊಡ್ಡ ಪಂದ್ಯವಾಗಲಿದೆ. ಏಕೆಂದರೆ 1.4 ಶತಕೋಟಿ ಜನರು ಈ ಪಂದ್ಯವನ್ನು ವೀಕ್ಷಿಸುತ್ತಾರೆ. ಹೀಗಾಗಿ, ಯುಎಸ್ಎ ತಂಡದ ಆಟಗಾರರು ಮೈದಾನದಲ್ಲಿ ತಮ್ಮ ಬ್ರ್ಯಾಂಡ್ ಕ್ರಿಕೆಟ್ ಪ್ರದರ್ಶಿಸಲು ಬಯಸುತ್ತಾರೆ," ಎಂದರು.
"ಯುಎಸ್ಎ ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತದೆ. ಭಾರತ ವಿರುದ್ಧ ನಿರ್ದಿಷ್ಟ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ," ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡುತ್ತಾ ಲಕ್ಷ್ಮಿಪತಿ ಬಾಲಾಜಿ ಹೇಳಿದರು.
ಮಾತು ಮುಂದುವರೆಸಿದ ಲಕ್ಷ್ಮಿಪತಿ ಬಾಲಾಜಿ, ಮುಂಬರುವ ಪಂದ್ಯವನ್ನು "ಮಿನಿ ಇಂಡಿಯಾ vs ಇಂಡಿಯಾ' ಹಣಾಹಣಿ ಎಂದು ಕರೆದರು. ಏಕೆಂದರೆ ಯುಎಸ್ಎ ತಂಡವು ಹಲವು ಭಾರತೀಯ ಆಟಗಾರರಿಂದ ತುಂಬಿದೆ.
ಹೀಗಾಗಿ ಭಾರತದ ಮಾಜಿ ವೇಗದ ಬೌಲರ್ ಲಕ್ಷ್ಮಿಪತಿ ಬಾಲಾಜಿ, ಯುಎಸ್ಎ ತಂಡಕ್ಕೆ ಹಲವಾರು ಭಾರತೀಯ ತಾರೆಗಳಿಂದ ಸ್ಫೂರ್ತಿ ಪಡೆದಿರುವುದರಿಂದ ಇದು ಭಾವನಾತ್ಮಕ ಪಂದ್ಯವಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿದರು.

"ಹೌದು, ಯುಎಸ್ಎ ತಂಡದಲ್ಲಿ ನಾವು ವಲಸಿಗ ಆಟಗಾರರ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಮಿನಿ ಇಂಡಿಯಾ ವರ್ಸಸ್ ಇಂಡಿಯಾ. ಹಾಗಾಗಿ ಅಂತಹ ಪಂದ್ಯವನ್ನು ನಾವು ನಿರೀಕ್ಷಿಸಬಹುದು. ನಾನು ಒಂದೆರಡು ಯುಎಸ್ಎ ಕ್ರಿಕೆಟಿಗರನ್ನು ಭೇಟಿ ಮಾಡಿದ್ದೇನೆ ಮತ್ತು ಅವರೆಲ್ಲರೂ ಭಾರತದ ಬಹಳಷ್ಟು ಕ್ರಿಕೆಟಿಗರನ್ನು ಅನುಸರಿಸಿದ್ದಾರೆ," ಎಂದರು.
"ಅವರು ಎಲ್ಲಾ ಭಾರತೀಯ ತಾರೆಗಳಿಂದ ಸ್ಫೂರ್ತಿ ಪಡೆದಿದ್ದಾರೆ. ಆದ್ದರಿಂದ ಅವರಿಗೂ ಈ ಪಂದ್ಯ ಭಾವನಾತ್ಮಕವಾಗಿರುತ್ತದೆ. ಅವರಲ್ಲಿ ಕೆಲವರು ಭಾರತದ ಅಂಡರ್-19 ತಂಡದಲ್ಲಿ ಆಡಿದ್ದಾರೆ ಮತ್ತು ಈಗ ಯುಎಸ್ಎ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದು ಉಭಯ ತಂಡಗಳಿಗೆ ಭಾವನಾತ್ಮಕ ಪಂದ್ಯವಾಗಿದೆ," ಎಂದು ಲಕ್ಷ್ಮಿಪತಿ ಬಾಲಾಜಿ ತಿಳಿಸಿದರು.
ಗಮನಾರ್ಹವಾಗಿ, ಯುಎಸ್ಎ ತಂಡದ ಎಡಗೈ ವೇಗಿ ಸೌರಭ್ ನೇತ್ರವಾಳ್ಕರ್ ಪಾಕಿಸ್ತಾನದ ವಿರುದ್ಧ ಸೂಪರ್ ಓವರ್‌ನಲ್ಲಿ ಹೀರೋ ಆದ ನಂತರ ಭಾರತದಲ್ಲಿ ಸ್ಟಾರ್ ಆದರು. ಸೌರಭ್ 2010ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕಾಗಿ ಆಡಿದ ಅವರ ವೈವಿಧ್ಯಮಯ ಪ್ರೊಫೈಲ್‌ಗಾಗಿ ರಾಷ್ಟ್ರೀಯ ಸಂವೇದನೆಯಾಗಿದ್ದಾರೆ.
ನಂತರ, ಭಾರತ ತೊರೆದು ಈಗ ಒರಾಕಲ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. 32 ವರ್ಷದ ಸೌರಭ್ ಉಕುಲೆ ಆಟಗಾರರಾಗಿದ್ದಾರೆ.
ಮುಂಬೈ ಮೂಲದ ಕ್ರಿಕೆಟಿಗ ತನ್ನ ಮೂಲ ರಾಷ್ಟ್ರದ ವಿರುದ್ಧ ಕಠಿಣ ಸವಾಲನ್ನು ಎದುರಿಸುತ್ತಾನೆ ಮತ್ತು ಭಾರತ ತಂಡದ ವಿರುದ್ಧ ತನ್ನ ಅತ್ಯುತ್ತಮ ಪ್ರದರ್ಶನವನ್ನು ಪುನರಾವರ್ತಿಸಲು ಆಶಿಸುತ್ತಾನೆ.