ಜೂನ್ 7 ಶನಿವಾರ, ಅಮೆರಿಕಾದ ನ್ಯೂಯರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ 2024ರ ಟಿ20 ವಿಶ್ವಕಪ್‌ನ ಲೀಗ್ ಹಂತದ 16ನೇ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಗೆ ನೆದರ್ಲ್ಯಾಂಡ್ಸ್ ಮಂಡಿಯೂರಿದೆ.
ಸಂಘಟಿತ ಮಾರಕ ಬೌಲಿಂಗ್ ದಾಳಿ ನಡೆಸಿದ ಹರಿಣಗಳ ಪಡೆ ನೆದರ್ಲ್ಯಾಂಡ್ಸ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ನೆದರ್ಲ್ಯಾಂಡ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 103 ರನ್‌ಗಳನ್ನು ಕಲೆ ಹಾಕಿದೆ. ಬಲಿಷ್ಠ ದಕ್ಷಿಣ ಆಫ್ರಿಕಾ ಗೆಲುವಿಗೆ 104 ರನ್‌ಗಳ ಅವಶ್ಯಕತೆ ಇದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನೆದರ್ಲ್ಯಾಂಡ್ಸ್ ಬ್ಯಾಟರ್‌ಗಳು ದಕ್ಷಿಣ ಆಫ್ರಿಕಾ ಬೌಲಿಂಗ್ ಎದುರಿಸಲು ವಿಫಲವಾದರು. ನೆದರ್ಲ್ಯಾಂಡ್ಸ್ ತಂಡ 15 ರನ್ ಗಳಿಸುವಷ್ಟರಲ್ಲೇ ಆರಂಭಿಕರಾದ ಮೈಕೆಲ್ ಲೆವಿಟ್ (0) ಮತ್ತು ಮ್ಯಾಕ್ಸ್ ಓಡೌಡ್ (2) ವಿಕೆಟ್ ಕಳೆದುಕೊಳ್ಳಬೇಕಾಯಿತು.
ಬಳಿಕ ಬಂದ ಮೂರನೇ ಕ್ರಮಾಂಕದಲ್ಲಿ ವಿಕ್ರಮಜಿತ್ ಸಿಂಗ್ 12 ರನ್‌ಗಳಿಸಿ ಔಟ್ ಆದರು. ನಾಯಕ ಸ್ಕಾಟ್ ಎಡ್ವರ್ಡ್ಸ್ (10 ) ಅವರು ಸಹಾ ಕುಸಿದ ನೆದರ್ಲ್ಯಾಂಡ್ಸ್ ಆಸರೆಯಾಗಲು ಸಾಧ್ಯವಾಗದೆ ರನೌಟ್ ಆದರು. ನಂತರ ಬಾಸ್ ಡಿ ಲೀಡೆ ಸಹಾ ಕೇವಲ 6 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು.
ತೇಜ ನಿಡಮನೂರು ಶೂನ್ಯಕ್ಕೆ ಔಟ್ ಆದರೆ, ಲೋಗನ್ ವ್ಯಾನ್ ಬೀಕ್ (23) ಮತ್ತು ಟಿಮ್ ಪ್ರಿಂಗಲ್ (0) ವಿಕೆಟ್ ಕಳೆದುಕೊಂಡರು. ಇಂತಹ ಪರಿಸ್ಥಿತಿಯಲ್ಲಿ ಒಂದೆಡೆ ವಿಕೆಟ್‌ಗಳು ಬೀಳುತ್ತಿದರೂ, ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್ ನಿಧಾನವಾಗಿ ಬ್ಯಾಟ್ ಬೀಸಿದರು.
ಇದರ ಪ್ರತಿಫಲವಾಗಿ ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್ ಅವರು 45 ಎಸೆತಗಳಲ್ಲಿ 2 ಬೌಂಡರಿ ಹಾಗು 1 ಸಿಕ್ಸರ್ ಮೂಲಕ 40 ರನ್ ಹೊಡೆದು ನೆದರ್ಲ್ಯಾಂಡ್ಸ್ ತಂಡಕ್ಕೆ ನೆರವಾಗುವ ಮೂಲಕ ಔಟ್ ಆಗಿ ಹೊರ ನಡೆದರು. ಅಂತಿಮವಾಗಿ ಪಾಲ್ ವ್ಯಾನ್ ಮೀಕೆರೆನ್ ಅಜೇಯ 1 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ ಪರ ಒಟ್ನೀಲ್ ಬಾರ್ಟ್‌ಮನ್ 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಮಾರ್ಕೊ ಜಾನ್ಸೆನ್ ಮತ್ತು ಅನ್ರಿಚ್ ನಾರ್ಟ್ಜೆ ತಲಾ ಎರಡು ವಿಕೆಟ್ ಪಡೆದರು.
ನೆದರ್ಲ್ಯಾಂಡ್ಸ್ ತಂಡ : ಮೈಕೆಲ್ ಲೆವಿಟ್, ಮ್ಯಾಕ್ಸ್ ಓಡೌಡ್, ವಿಕ್ರಮಜಿತ್ ಸಿಂಗ್, ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್(ವಿ.ಕೀ ಮತ್ತು ನಾಯಕ), ಬಾಸ್ ಡಿ ಲೀಡೆ, ತೇಜ ನಿಡಮನೂರು, ಲೋಗನ್ ವ್ಯಾನ್ ಬೀಕ್, ಟಿಮ್ ಪ್ರಿಂಗಲ್, ಪಾಲ್ ವ್ಯಾನ್ ಮೀಕೆರೆನ್, ವಿವಿಯನ್ ಕಿಂಗ್ಮಾ
ದಕ್ಷಿಣ ಆಫ್ರಿಕಾ ತಂಡ : ಕ್ವಿಂಟನ್ ಡಿ ಕಾಕ್(ವಿ.ಕೀ), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್(ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ಒಟ್ನೀಲ್ ಬಾರ್ಟ್‌ಮನ್