T20 World Cup 2024: ಸ್ಕಾಟ್ಲೆಂಡ್ ಪರ ಮೆಕ್‌ಮುಲ್ಲೆನ್-ಮುನ್ಸಿ ಭರ್ಜರಿ ಬ್ಯಾಟಿಂಗ್; ಕಂಗಾಲಾದ ಒಮಾನ್
ಜೂನ್ 10 ಸೋಮವಾರ, ವೆಸ್ಟ್ ಇಂಡೀಸ್‌ನ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಐಸಿಸಿ 2024ರ ಟಿ20 ವಿಶ್ವಕಪ್‌ನ ಗುಂಪು ಹಂತದ 20ನೇ ಪಂದ್ಯದಲ್ಲಿ ಒಮಾನ್ ವಿರುದ್ಧ ಸ್ಕಾಟ್ಲೆಂಡ್ ಭರ್ಜರಿ ಗೆಲುವು ಸಾಧಿಸಿದೆ.
ಈ ಗೆಲುವಿನ ಮೂಲಕ ಬಿ ಗುಂಪಿನಲ್ಲಿರುವ ಸ್ಕಾಟ್ಲೆಂಡ್ ಅಂಕಪಟ್ಟಿ ಆಗ್ರಸ್ಥಾನಕ್ಕೇರಿದೆ. ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿರುವ ಸ್ಕಾಟ್ಲೆಂಡ್ ಟಿ20 ವಿಶ್ವಕಪ್‌ನ ಸೂಪರ್-8ಕ್ಕೆ ಆರ್ಹತೆ ಪಡೆಯುವ ತವಕದಲ್ಲಿದೆ.

ಇತ್ತ ಆಡಿದ 3 ಪಂದ್ಯಗಳಲ್ಲಿಯೂ ಸೋತಿರುವ ಒಮಾನ್ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಹೀಗಾಗಿ ಗುಂಪು ಹಂತದಲ್ಲೇ ಟೂರ್ನಿಯಿಂದ ಹೊರಗುಳಿಯುವುದು ಪಕ್ಕಾ ಆಗಿದೆ.
ಮೊದಲು ಟಾಸ್ ಗೆದ್ದ ಒಮಾನ್ ಬ್ಯಾಟಿಂಗ್ ಆರಂಭಿಸಿತು. ಪ್ರತೀಕ್ ಆಠವಳೆ ಅರ್ಧಶತಕ ಹಾಗು ಅಯಾನ್ ಖಾನ್ ಅವರ ಅಜೇಯ 41 ರನ್‌ಗಳ ನೆರವಿನಿಂದ ಒಮಾನ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಪೇರಿಸಿತ್ತು.
ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಪ್ರತೀಕ್ ಆಠವಳೆ 40 ಎಸೆತಗಳಲ್ಲಿ 2 ಸಿಕ್ಸರ್ ಹಾಗು 5 ಬೌಂಡರಿಗಳ ಮೂಲಕ 54 ರನ್ ಬಾರಿಸಿದರು. ಇನ್ನೊಂದೆಡೆ ಅಯಾನ್ ಖಾನ್ ಕೆಳ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಅಯಾನ್ ಎದುರಿಸಿದ 39 ಎಸತೆಗಳಲ್ಲಿ 4 ಬೌಂಡರಿಗಳ ಮೂಲಕ ಅಜೇಯ 41 ರನ್ ಗಳಿಸಿ ಒಮಾನ್ ತಂಡದ ಟಾರ್ಗೆಟ್ ಹೆಚ್ಚಿಸಿದರು.
ಒಮಾನ್ ನೀಡಿದ 151 ರನ್‌ಗಳ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ಮೂರನೇ ಕ್ರಮಾಂಕದಲ್ಲಿ ಬಂದ ಬ್ರಾಂಡನ್ ಮೆಕ್‌ಮುಲ್ಲೆನ್ ಜೊತೆಗೂಡಿದ ಆರಂಭಿಕ ಬ್ಯಾಟರ್ ಜಾರ್ಜ್ ಮುನ್ಸಿ ಅದ್ಭುತ ಇನ್ನಿಂಗ್ಸ್ ಕಟ್ಟಿದರು.
ಒಮಾನ್ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡ ಈ ಜೋಡಿ 65 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ ಸ್ಕಾಟ್ಲೆಂಡ್ ಕೇವಲ 3 ವಿಕೆಟ್ ಕಳೆದುಕೊಂಡು 13.1 ಓವರ್‌ಗಳಲ್ಲಿ ಗುರಿ ತಲುಪಿತು.
ಜಾರ್ಜ್ ಮುನ್ಸಿ ಕೇವಲ 20 ಎಸೆತಗಳಲ್ಲಿ 4 ಸಿಕ್ಸರ್ ಹಾಗು 2 ಬೌಂಡರಿ ನೆರವಿನಿಂದ 41 ರನ್ ಹೊಡೆದು ಔಟ್ ಆದರೆ, ಬ್ರಾಂಡನ್ ಮೆಕ್‌ಮುಲ್ಲೆನ್ ಅವರು 31 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿಗಳೊಂದಿಗೆ ಅಜೇಯ 61 ರನ್ ಗಳಿಸಿ ಸ್ಕಾಟ್ಲೆಂಡ್ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು.
ಸ್ಕಾಟ್ಲೆಂಡ್ vs ಒಮಾನ್ ತಂಡಗಳು
ಸ್ಕಾಟ್ಲೆಂಡ್ ತಂಡ : ಜಾರ್ಜ್ ಮುನ್ಸೆ, ಮೈಕೆಲ್ ಜೋನ್ಸ್, ಬ್ರಾಂಡನ್ ಮೆಕ್‌ಮುಲ್ಲೆನ್, ರಿಚಿ ಬೆರಿಂಗ್ಟನ್ (ನಾಯಕ), ಮ್ಯಾಥ್ಯೂ ಕ್ರಾಸ್ (ವಿ.ಕೀ), ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಕ್ರಿಸ್ಟೋಫರ್ ಸೋಲ್, ಸಫ್ಯಾನ್ ಷರೀಫ್, ಬ್ರಾಡ್ ವೀಲ್.
ಒಮಾನ್ ತಂಡ : ನಸೀಮ್ ಖುಷಿ, ಪ್ರತೀಕ್ ಅಠವಳೆ (ವಿ.ಕೀ), ಅಕಿಬ್ ಇಲ್ಯಾಸ್ (ನಾಯಕ), ಜೀಶನ್ ಮಕ್ಸೂದ್, ಖಾಲಿದ್ ಕೈಲ್, ಅಯಾನ್ ಖಾನ್, ಮೆಹ್ರಾನ್ ಖಾನ್, ರಫಿಯುಲ್ಲಾ, ಶಕೀಲ್ ಅಹ್ಮದ್, ಕಲೀಮುಲ್ಲಾ, ಬಿಲಾಲ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications