ಜೂನ್ 20 ಗುರುವಾರ, ವೆಸ್ಟ್ ಇಂಡೀಸ್‌ನ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ (ಬುಧವಾರ) ನಡೆದ 2024ರ ಟಿ20 ವಿಶ್ವಕಪ್‌ನ ಸೂಪರ್-8 ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಯುಎಸ್‌ಎ ಮುಗ್ಗರಿಸಿದೆ.
ಸ್ಪೋಟಕ ಬ್ಯಾಟಿಂಗ್ ಮಾಡಿದ ಆಂಡ್ರೀಸ್ ಗೌಸ್ ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಹರಿಣಗಳ ಪಡೆ ಎದುರು ಯುಎಸ್‌ಎ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ನೀಡಿದ 195 ರನ್‌ಗಳ ಟಾರ್ಗೆಟ್ ಅನ್ನು ಬೆನ್ನಟ್ಟಲು ಸಾಧ್ಯವಾಗದ
ಯುಎಸ್‌ಎ 6 ವಿಕೆಟ್ ಕಳೆದುಕೊಂಡು ಕೇವಲ 176 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿದೆ.
ಹೀಗಾಗಿ ದಕ್ಷಿಣ ಆಫ್ರಿಕಾ ತಂಡ 18 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಇತ್ತ ಟಿ20 ವಿಶ್ವಕಪ್‌ನ ಸೂಪರ್-8 ರಲ್ಲಿ ಯುಎಸ್‌ಎ ಮೊದಲ ಪಂದ್ಯ ಸೋತಿರುವುದು ಮುಂಬರುವ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಒತ್ತಡದಲ್ಲಿ ಸಿಲುಕಿಕೊಂಡಿದೆ.

ಯುಎಸ್‌ಎ ಎದುರು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ಆರಂಭಿಕರಾಗಿ ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್ ಕಣಕ್ಕೀಳಿದರು. ಆದರೆ ಹರಿಣಗಳ ಪಡೆಗೆ ಈ ಜೋಡಿಯಿಂದ ಉತ್ತಮ ಆರಂಭ ಸಿಗಲಿಲ್ಲ. ರೀಜಾ ಹೆಂಡ್ರಿಕ್ಸ್ ಕೇವಲ 11 ರನ್‌ಗಳಿಸಿ ಔಟ್ ಆದರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಏಡೆನ್ ಮಾರ್ಕ್ರಾಮ್ ಅವರೊಂದಿಗೆ ಕ್ವಿಂಟನ್ ಡಿ ಕಾಕ್ ಅದ್ಭುತ ಇನ್ನಿಂಗ್ಸ್ ಆಡಿದರು. 116 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಯುಎಸ್‌ಎ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡಿತ್ತು.
ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದ ಕ್ವಿಂಟನ್ ಡಿ ಕಾಕ್ ಅರ್ಧಶತಕ ಸಿಡಿಸಿ ಮಿಂಚಿದರು. ಕ್ವಿಂಟನ್ ಡಿ ಕಾಕ್ ಎದುರಿಸಿದ 40 ಎಸೆತಗಳಲ್ಲಿ 7 ಬೌಂಡರಿ ಹಾಗು 5 ಸಿಕ್ಸರ್‌ಗಳ ನೆರವಿನಿಂದ 74 ರನ್‌ಗಳಿಸಿ ಔಟ್ ಆದರೆ, ನಾಯಕ ಏಡೆನ್ ಮಾರ್ಕ್ರಾಮ್ 32 ಎಸೆತಗಳಲ್ಲಿ 46 ರನ್ ಹೊಡೆದು ವಿಕೆಟ್ ಕಳೆದುಕೊಂಡರು.
ನಂತರ ಬಂದ ಡೇವಿಡ್ ಮಿಲ್ಲರ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದರು. ಕೊನೆಯಲ್ಲಿ ಒಂದಾದ ಹೆನ್ರಿಚ್ ಕ್ಲಾಸೆನ್ ಅಜೇಯ 36 ರನ್ ಗಳಿಸದರೆ, ಟ್ರಿಸ್ಟಾನ್ ಸ್ಟಬ್ಸ್ 20 ಬಾರಿಸಿದರು.
ಈ ಮೂಲಕ ದಕ್ಷಿಣ ಆಫ್ರಿಕಾ ನಾಲ್ಕು ವಿಕೆಟ್ ನಷ್ಟಕ್ಕೆ 194 ರನ್ ಕಲೆ ಹಾಕಿತು. ಯುಎಸ್‌ಎ ಪರ ಹರ್ಮೀತ್ ಸಿಂಗ್ ಮತ್ತುಸೌರಭ್ ನೇತ್ರವಲ್ಕರ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಹರಿಣಗಳ ಪಡೆ ನೀಡಿದ ಗುರಿಯನ್ನು ಚೇಸಿಂಗ್ ಮಾಡಿದ ಯುಎಸ್‌ಎ ಪರ ಆಂಡ್ರೀಸ್ ಗೌಸ್ ಮತ್ತು ಹರ್ಮೀತ್ ಸಿಂಗ್ ಗೆಲುವು ತಂದು ಕೊಡಲು ಹೋರಾಡಿದರು. ಆರಂಭಿಕರಾಗಿ ಬಂದ ಸ್ಟೀವನ್ ಟೇಲರ್ 24 ರನ್ ಗಳಿಸಿ ಔಟ್ ಆದರೆ, ನಿತೀಶ್ ಕುಮಾರ್ (8), ನಾಯಕ ಆರನ್ ಜೋನ್ಸ್ (0), ಕೋರಿ ಆಂಡರ್ಸನ್ (12) ಹಾಗು ಶಯಾನ್ ಜಹಾಂಗೀರ್ (3) ಹೆಚ್ಚು ರನ್ ಗಳಿಸಿ ತಂಡಕ್ಕೆ ನೆರವಾಗಿಲ್ಲ.
ಕೊನೆಯಲ್ಲಿ ಅಬ್ಬರಿಸಿದ ಆಂಡ್ರೀಸ್ ಗೌಸ್ ಅವರು 47 ಎಸೆತಗಳಲ್ಲಿ 5 ಬೌಂಡರಿ, ಸಿಕ್ಸರ್ ಮೂಲಕ 80 ರನ್ ಹೊಡೆದು ವಿಕೆಟ್ ಕಳೆದುಕೊಂಡರು. ಹರ್ಮೀತ್ ಸಿಂಗ್ ಕೂಡ 38 ರನ್ ಗಳಿಸಿ ಔಟ್ ಆದರು. ಹೀಗಾಗಿ ಯುಎಸ್‌ಎ 18 ರನ್‌ಗಳಿಂದ ಸೋಲು ಕಾಣಬೇಕಾಯಿತು.
ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ ಮೂರು ವಿಕೆಟ್ ಕಬಳಿಸಿ ಮಿಂಚಿದರೆ, ಕೇಶವ್ ಮಹಾರಾಜ್, ಅನ್ರಿಚ್ ನಾರ್ಟ್ಜೆ ಮತ್ತು ತಬ್ರೈಜ್ ಶಮ್ಸಿ ತಲಾ ಒಂದೊಂದು ವಿಕೆಟ್ ಪಡೆದರು.