ಶನಿವಾರ, ಜೂನ್ 29ರಂದು ಬಾರ್ಬಡೋಸ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ರೋಚಕ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ತಂಡ 2ನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿತು.
ಮೊದಲನೇ ಟಿ20 ವಿಶ್ವಕಪ್ ಗೆದ್ದ 17 ವರ್ಷಗಳ ನಂತರ, 2ನೇ ಏಕದಿನ ವಿಶ್ವಕಪ್ ಗೆದ್ದ 13 ವರ್ಷಗಳ ನಂತರ,ಮತ್ತು 2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಫೈನಲ್‌ಗಳಲ್ಲಿ 2 ಹೃದಯವಿದ್ರಾವಕ ಸೋಲಿನ ನಂತರ, ಭಾರತವು ಅಂತಿಮವಾಗಿ ತಮ್ಮ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿತು.

ಕೊನೆಯ ಓವರ್‌ನ ಕೊನೆಯ ಎಸೆತದವರೆಗೂ ಹೋದ 2024ರ ಐಸಿಸಿ ಟಿ20 ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ ಏಡೆನ್ ಮಾರ್ಕ್ರಾಮ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 7 ರನ್‌ಗಳಿಂದ ಸೋಲಿಸಿತು.
ಅಲ್ಲದೆ, 2007ರ ಉದ್ಘಾಟನಾ ಟಿ20 ವಿಶ್ವಕಪ್ ಆವೃತ್ತಿಯನ್ನು ಗೆದ್ದಿದ್ದ ಟೀಮ್ ಇಂಡಿಯಾ, ಇದೀಗ ಎರಡನೇ ಬಾರಿಗೆ ಪುರುಷರ ಟಿ20 ವಿಶ್ವಕಪ್ ಗೆದ್ದ ಮೂರನೇ ತಂಡವೆನಿಸಿದೆ.
ವೆಸ್ಟ್ ಇಂಡೀಸ್ 2012 ಮತ್ತು 2016ರಲ್ಲಿ ಎರಡು ಪ್ರಶಸ್ತಿ ಗೆದ್ದ ಮೊದಲ ತಂಡವಾಗಿದ್ದು, ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡ 2010 ಮತ್ತು 2022ರಲ್ಲಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದೆ.

ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ರಣರೋಚಕ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಲು ಟೀಮ್ ಇಂಡಿಯಾ ಅದ್ಭುತ ಹೋರಾಟವನ್ನು ರಚಿಸಿದ್ದರಿಂದ ಬರೀ ಕ್ರೀಡಾಂಗಣ ಮಾತ್ರವಲ್ಲದೆ, ದೂರದ ಭಾರತದಲ್ಲೂ ಭಾವನೆಗಳ ಸಮುದ್ರವಾಗಿತ್ತು.
ಭಾರತ ತಂಡದ ಆಟಗಾರರು ತಮ್ಮ ನರವನ್ನು ಬಿಗಿ ಹಿಡಿದಿಟ್ಟುಕೊಂಡು ದಕ್ಷಿಣ ಆಫ್ರಿಕಾ ವಿರುದ್ಧ ತೀವ್ರವಾಗಿ ಹೋರಾಡಿದ ಪಂದ್ಯದಲ್ಲಿ 7 ರನ್‌ಗಳಿಂದ ಸೋಲಿಸಿದಾಗ ಇಡೀ ತಂಡದಲ್ಲಿ ಸಂತೋಷ, ಕಣ್ಣೀರು ಮತ್ತು ಸಂಭ್ರಮದ ಮನೆ ಮಾಡಿತ್ತು.
ವಿರಾಟ್ ಕೊಹ್ಲಿ ಅದ್ಭುತ 76 ರನ್ ಗಳಿಸುವ ಮೂಲಕ ದೊಡ್ಡ ಫೈನಲ್ ಪಂದ್ಯದಲ್ಲಿ ಬ್ಯಾಟ್‌ನೊಂದಿಗೆ ಇನ್ನಿಂಗ್ಸ್ ಮುನ್ನಡೆಸಿದರು ಮತ್ತು ಭಾರತ ತಂಡ ಸ್ಪರ್ಧಾತ್ಮಕ 7 ವಿಕೆಟ್‌ಗೆ 176 ರನ್ ಕಲೆಹಾಕಲು ಸಹಾಯ ಮಾಡಿದರು.
ಮಾಜಿ ನಾಯಕನಿಗೆ ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 47 ರನ್ ಮತ್ತು ಶಿವಂ ದುಬೆ 16 ಎಸೆತಗಳಲ್ಲಿ 27 ರನ್ ಗಳಿಸಿ ನಿರ್ಣಾಯಕ ಕೊಡುಗೆಯೊಂದಿಗೆ ಸಮರ್ಥವಾಗಿ ಬೆಂಬಲ ನೀಡಿದರು.
177 ರನ್‌ಗಳ ಗುರಿಯನ್ನು ರಕ್ಷಿಸುವಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್‌ದೀಪ್ ಸಿಂಗ್ ಅವರು ಆರಂಭಿಕ ಬ್ಯಾಟರ್ ರೀಜಾ ಹೆಂಡ್ರಿಕ್ಸ್ ಮತ್ತು ನಾಯಕ ಏಡೆನ್ ಮಾರ್ಕ್ರಾಮ್ ಅವರ ವಿಕೆಟ್ ಪಡೆಯುವ ಮೂಲಕ ಪರಿಪೂರ್ಣ ಮುನ್ನಡೆ ತಂದುಕೊಟ್ಟರು.
ನಂತರ ಕ್ವಿಂಟನ್ ಡಿ ಕಾಕ್, ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರ ಮರು ಹೋರಾಟದ ಪ್ರಯತ್ನದಿಂದಾಗಿ ದಕ್ಷಿಣ ಆಫ್ರಿಕಾ ತಂಡ ಪಂದ್ಯಕ್ಕೆ ಮರಳಿತು.
ಕೊನೆಯ 24 ಎಸೆತಗಳಲ್ಲಿ 26 ರನ್ ಅಗತ್ಯವಿದ್ದಾಗ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್‌ದೀಪ್ ಸಿಂಗ್ ಸಂವೇದನಾಶೀಲ ಪುನರಾಗಮನ ಮಾಡಿದರು. ಉಪನಾಯಕ ಹಾರ್ದಿಕ್ ಪಾಂಡ್ಯ ಕೊನೆಯ ಓವರ್‌ನಲ್ಲಿ 16 ರನ್ ರಕ್ಷಿಸಿದರು.
ಸೂರ್ಯಕುಮಾರ್ ಯಾದವ್ ಅವರು ಡೇವಿಡ್ ಮಿಲ್ಲರ್ ಅವರ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಮುನ್ನಡಿ ಬರೆದರು. ಭಾರತ ತಂಡ ಅದ್ಭುತ ಗೆಲುವು ಸಾಧಿಸಿತು ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಪರಿಪೂರ್ಣ ವಿದಾಯದ ಉಡುಗೊರೆ ನೀಡಿದರು.
ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನವಾದರೆ, ಜಸ್ಪ್ರೀತ್ ಬುಮ್ರಾ ಅವರು ಪಂದ್ಯಾವಳಿಯುದ್ದಕ್ಕೂ ತಮ್ಮ ಅದ್ಭುತ ಬೌಲಿಂಗ್‌ಗಾಗಿ ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಜಸ್ಪ್ರೀತ್ ಬುಮ್ರಾ 8.26ರ ಸರಾಸರಿ ಮತ್ತು 4.17ರ ಅತ್ಯುತ್ತಮ ಎಕಾನಮಿ ದರದೊಂದಿಗೆ 15 ವಿಕೆಟ್‌ಗಳೊಂದಿಗೆ ಜಂಟಿ-ಎರಡನೇ ಅತಿ ಹೆಚ್ಚು ವಿಕೆಟ್-ಟೇಕರ್ ಆಗಿ ಮುಗಿಸಿದರು.