ಜೂನ್ 28 ಶುಕ್ರವಾರ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯವು ಜೂನ್ 29 ರಂದು (ಶನಿವಾರ) ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಬ್ರಿಡ್ಜ್‌ಟೌನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಫೈನಲ್ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಉಭಯ ತಂಡಗಳು ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ಸತತ ಗೆಲುವಿನೊಂದಿಗೆ ಫೈನಲ್ ತಲುಪಿವೆ. ಇದು ಪ್ರಪ್ರಥಮ ಬಾರಿಗೆ ಎರಡು ತಂಡಗಳು ಸೋಲದೆ ಫೈನಲ್ ತಲುಪಿರುವುದು.
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ಭಾರತದ ಪ್ರಬಲ ಬೌಲರ್‌ಗಳನ್ನು ಎದುರಿಸಲಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಭಾರತದ ಪರ ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ್ದಾರೆ.
ಇದೀಗ ಫೈನಲ್‌ನಲ್ಲಿ ಹರಿಣಗಳ ಪಡೆಯನ್ನು ಕಟ್ಟಿ ಹಾಕಲು ಟೀಮ್ ಇಂಡಿಯಾ ಬೌಲರ್‌ಗಳು ಹೊಸ ತಂತ್ರಗಾರಿಕೆ ಮಾಡಿದ್ದಾರೆ. 2024 ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅರ್ಷದೀಪ್ ಸಿಂಗ್: 2024ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಅರ್ಷದೀಪ್ ಸಿಂಗ್. ಅರ್ಷದೀಪ್ ಇದುವರೆಗೆ 7 ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದಾರೆ.
ಈ ಅವಧಿಯಲ್ಲಿ 9 ರನ್‌ಗಳಿಗೆ 4 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಋತುವಿನ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳಲ್ಲಿ ಅರ್ಷದೀಪ್ 8 ವಿಕೆಟ್ ಪಡೆದಿದ್ದಾರೆ.

ಜಸ್ಪ್ರೀತ್ ಬುಮ್ರಾ : ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತದ ಎರಡನೇ ಯಶಸ್ವಿ ಬೌಲರ್ ಆಗಿದ್ದಾರೆ. ಬುಮ್ರಾ 7 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.
7 ರನ್‌ಗಳಿಗೆ 3 ವಿಕೆಟ್ ಕಬಳಿಸಿರುವುದು ಬುಮ್ರಾ ಅತ್ಯುತ್ತಮ ಪ್ರದರ್ಶನವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ 2 ಟಿ20 ಪಂದ್ಯಗಳಲ್ಲಿ ಬುಮ್ರಾ ಅವರ ಹೆಸರಿನಲ್ಲಿ ಕೇವಲ 1 ವಿಕೆಟ್ ಇದೆ. ಇದೀಗ ಬುಮ್ರಾ ವಿಕೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ.

ಕುಲದೀಪ್ ಯಾದವ್ : ಟೀಮ್ ಇಂಡಿಯಾ ಪರ ಕುಲದೀಪ್ ಯಾದವ್ ಗ್ರೂಪ್ ಹಂತದಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಆದರೆ ಸೂಪರ್-8 ಮತ್ತು ಸೆಮಿಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
ಕುಲದೀಪ್ 4 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. 19 ರನ್‌ಗಳಿಗೆ 3 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ದಕ್ಷಿಣ ಆಫ್ರಿಕಾ ಪರ 2 ಟಿ20 ಪಂದ್ಯಗಳಲ್ಲಿ ಕುಲದೀಪ್ 6 ವಿಕೆಟ್ ಪಡೆದಿದ್ದಾರೆ.

ಅಕ್ಸರ್ ಪಟೇಲ್: 2024ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿ ಅಕ್ಷರ್ ಪಟೇಲ್ ಉಳಿದಿದ್ದಾರೆ. ಅಕ್ಷರ್ 7 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಆಫ್ರಿಕಾ ವಿರುದ್ಧ 11 ಟಿ20 ಪಂದ್ಯಗಳಲ್ಲಿ 6 ವಿಕೆಟ್ ಉರುಳಿಸಿರುವ ಸಾಧನೆ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ: ಟಿ20 ವಿಶ್ವಕಪ್ 2024ರಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಐದನೇ ಬೌಲರ್ ಆಗಿ ಉಳಿದಿದ್ದಾರೆ. ಹಾರ್ದಿಕ್ 7 ಪಂದ್ಯಗಳಲ್ಲಿ ಒಟ್ಟು 8 ವಿಕೆಟ್ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 11 ಟಿ20 ಪಂದ್ಯಗಳಲ್ಲಿ 6 ವಿಕೆಟ್ ಕಬಳಿಸಿದ್ದಾರೆ.