ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಆಡದೇ ಇದ್ದರೆ ಆಗುವ ಸಮಸ್ಯೆಗಳನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮನವರಿಕೆ ಮಾಡಿಕೊಂಡಿದೆ. ಹೀಗಾಗಿ ಟೂರ್ನಿಯಲ್ಲಿ ಆಡಲು ಪ್ರಯತ್ನಿಸುತ್ತಿರುವ ಬಾಂಗ್ಲಾದೇಶ ತನ್ನ ಕೊನೆಯ ಪ್ರಯತ್ನವಾಗಿ ಐಸಿಸಿಗೆ ಮತ್ತೊಂದು ಪತ್ರವನ್ನು ಬರೆದು ಕಳುಹಿಸಿದೆ. ತಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಕೊನೆಯ ಪ್ರಯತ್ನವಾಗಿ ಬಿಸಿಬಿ ಐಸಿಸಿಯ ಸ್ವತಂತ್ರ ವಿವಾದ ಪರಿಹಾರ ಸಮಿತಿ (ಡಿಆರ್‌ಸಿ) ಹಸ್ತಕ್ಷೇಪ ಮಾಡುವಂತೆ ಕೋರಿದೆ.
ಭಾರತ ಪ್ರವಾಸ ಬೆಳೆಸಲು ಬಾಂಗ್ಲಾದೇಶ ಹಿಂದೇಟು ಹಾಕಿದ ಹಿನ್ನೆಲೆ ಬಿಸಿಬಿ ಅಳೆದು ತೂಗಿ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿಂದೆಯೂ ಬಿಸಿಬಿ ತಾನಾಡುವ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿಯನ್ನು ಮಾಡಿತ್ತು. ಭಾರತದಲ್ಲಿ ಭದ್ರತಾ ಕಾರಣಗಳನ್ನು ನೀಡಿ ಪ್ರವಾಸ ಬೆಳೆಸದಿರಲು ಬಿಸಿಬಿ ತಿಳಿಸಿತ್ತು. ಈಗ ಬರುತ್ತಿರುವ ಮಾಹಿತಿ ಪ್ರಕಾರ ಬಿಸಿಬಿ ಟೂರ್ನಿಯಿಂದ ಹಿಂದೆ ಸರಿಯುವ ಬದಲು ಐಸಿಸಿಯ ಕಾನೂನು ಚೌಕಟ್ಟಿನ ಕದ ತಟ್ಟಿದೆ

ಐಸಿಸಿ ವಿವಾದಗಳ ಪರಿಹಾರಕ್ಕಾಗಿ ಸಮಿತಿಯೊಂದನ್ನು ನೇಮಿಸಿರುತ್ತದೆ. ಈ ಸಮಿತಿಯಲ್ಲಿ ಕಾನೂನು ತಜ್ಞರು ಸಹ ಸೇರಿರುತ್ತಾರೆ. ಇದು ಐಸಿಸಿ ನಿರ್ಧಾರಗಳು, ನಿಯಮಗಳಿಗೆ ಸಂಬಂಧಿಸಿದಂತೆ ವಿವಾದಗಳನ್ನು ನಿವಾರಿಸುವ ಕಾರ್ಯವನ್ನು ಮಾಡುತ್ತದೆ. ಈ ಸಮಿತಿ ಲಂಡನ್‌ನಲ್ಲಿ ಇದೆ. ಈ ಸಮಿತಿಯು ಐಸಿಸಿಯ ಮೇಲ್ಮನವಿ ನ್ಯಾಯಾಲಯವಾಗಿ ಕಾರ್ಯ ಮಾಡುವುದಿಲ್ಲ. ಬದಲಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಐಸಿಸಿ ಸರಿಯಾದ ರೀತಿಯಲ್ಲಿ ತನ್ನ ಪಾತ್ರವನ್ನು ವಹಿಸಿದೆಯಾ ಎಂದು ಪರಾಮರ್ಶಿಸುತ್ತದೆ. ಇದರ ನಿರ್ಧಾರಗಳು ಅಂತಿಮ ಮತ್ತು ಬದ್ಧವಾಗಿರುತ್ತವೆ.
ಐಸಿಸಿ ಯಾವುದೇ ಯೋಚನೆ ಮಾಡದೆ ತನ್ನ ನಿರ್ಧಾರವನ್ನು ಪ್ರಕಟಿಸಿದೆ ಎಂದು ಬಿಸಿಬಿ ಪ್ರಶ್ನೆ ಎತ್ತಿದೆ. ಈಗಾಗಲೇ ಬಿಸಿಬಿ ತಮ್ಮೊಂದಿಗೆ ಐಸಿಸಿ ಅನ್ಯಾಯ ಮಾಡುತ್ತಿದೆ ಎಂದು ದೂರಿದದೆ. ಒಂದು ವೇಳೆ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದ ಹೊರನಡೆದರೆ 240 ಕೋಟಿ ನಷ್ಟವಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೂ ಸಹ ಬಿಸಿಬಿ ತಾನು ಭಾರತಕ್ಕೆ ಪ್ರವಾಸ ಬೆಳೆಸುವುದಿಲ್ಲ ಎಂಬ ನಿರ್ಧಾರಕ್ಕೆ ಬದ್ಧವಾಗಿದೆ. ಬಾಂಗ್ಲಾದೇಶ ಪ್ರವಾಸ ಬೆಳೆಸದಂತೆ ಪಾಕಿಸ್ತಾನ ಸಹ ಬೆಂಬಲಿಸುತ್ತಿದೆ. ಆದರೆ ಪಾಕ್ ಟಿ20 ವಿಶ್ವಕಪ್‌ನಲ್ಲಿ ಆಡಲು ಗ್ರೀನ್ ಸಿಗ್ನಲ್ ನೀಡಿದೆ.
ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಆಡುವುದಿಲ್ಲ ಎಂದು ಈ ಮೊದಲೇ ಸ್ಪಷ್ಟ ಪಡಿಸಿತ್ತು. ಅಲ್ಲದೆ ಇತ್ತೀಚಿಗೆ ನಡೆದ ಐಸಿಸಿ ಸಭೆಯಲ್ಲಿ ಸ್ಥಳ ಬದಲಾವಣೆಯ ಬೇಡಿಕೆಯನ್ನು ಇಟ್ಟಿತ್ತು. ಅಲ್ಲದೆ ತಮ್ಮ ತಂಡದ ಗುಂಪುಗಳ ಬದಲಾವಣೆಗಳನ್ನು ಮಾಡುವಂತೆ ಮನವಿ ಮಾಡಿತ್ತು. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಐಸಿಸಿ ವೇಳಾ ಪಟ್ಟಿಯಲ್ಲಿ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿತ್ತು. ಐಸಿಸಿ ಈ ನಿರ್ಧಾರವನ್ನೇ ಪ್ರಶ್ನಿಸಿ ಡಿಆರ್‌ಸಿಗೆ ಮನವಿಯನ್ನು ಮಾಡಿದೆ. ಬಾಂಗ್ಲಾದೇಶ ತನ್ನ ನಿಲುವಿನ ಬಗ್ಗೆ ಮತ್ತೊಮ್ಮೆ ವಿಮರ್ಷೆ ನಡೆಸಿದಂತೆ ಕಾಣುತ್ತಿದೆ. ಡಿಆರ್‌ಸಿ ಬಿಸಿಬಿ ಪರವಾಗಿ ತೀರ್ಪು ನೀಡದಿದ್ದರೆ ಮತ್ತು ತಂಡವು ಪಂದ್ಯಾವಳಿಯಿಂದ ಹಿಂದೆ ಸರಿದರೆ, ಸ್ಕಾಟ್ಲೆಂಡ್ ಅನ್ನು ಅವರ ಸ್ಥಾನದಲ್ಲಿ ಸೇರಿಸಲಾಗುತ್ತದೆ.