ಮುಂಬೈ: ಶನಿವಾರದಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಮೆಗಾ ಟೂರ್ನಿಯ ಚಾಂಪಿಯನ್ ಪಟ್ಟವನ್ನ ಅಲಂಕರಿಸಬೇಕು ಎಂದು 20 ತಂಡಗಳು ಕಾದಾಟ ನಡೆಸಲಿವೆ. ಮೊದಲ ದಿನ ಮೂರು ಪಂದ್ಯಗಳು ನಡೆಯಲಿದ್ದು, ಭಾರತ ಮೂರನೇ ಪಂದ್ಯದಲ್ಲಿ ಅಖಾಡಕ್ಕೆ ಪ್ರವೇಶಿಸಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಪಡೆ, ಅಮೆರಿಕಾಕ್ಕೆ ಸವಾಲು ಎಸೆಯಲಿದೆ. ಈ ಪಂದ್ಯವನ್ನು ಗೆದ್ದು ಶುಭಾರಂಭ ಮಾಡುವ ಕನಸು ಭಾರತ ತಂಡದ್ದಾಗಿದೆ.
ಭಾರತ "ಎ" ಗುಂಪಿನಲ್ಲಿ ಸ್ಥಾನ ಪಡೆದಿದೆ. ಮೊದಲ ಪಂದ್ಯಕ್ಕೆ ಮುಂಬೈನ ವಾಂಖೆಡೆ ಅಂಗಳ ಆತಿಥ್ಯ ನೀಡಲಿದ್ದು, ಎಲ್ಲರ ಕಣ್ಣುಗಳು ಭಾರತದ ಮೇಲೆ ನೆಟ್ಟಿವೆ. ಟೀಮ್ ಇಂಡಿಯಾ ಹಾಲಿ ಚಾಂಪಿಯನ್ ಆಗಿ ಅಖಾಡ ಪ್ರವೇಶಿಸಲಿದೆ. ಅಲ್ಲದೆ ಸದ್ಯ ಸೂರ್ಯಕುಮಾರ್ ಪಡೆ ನೀಡಿರುವ ಭರ್ಜರಿ ಪ್ರದರ್ಶನ, ತಂಡದ ಆತ್ಮವಿಶ್ವಾಸವನ್ನು ಇಮ್ಮಡಿ ಮಾಡಿದೆ. ಭಾರತ ತಂಡದ ಅನುಭವಿ ಆಟಗಾರರು ಲಯಕ್ಕೆ ಮರಳಿದ್ದು, ಟೂರ್ನಿಯಲ್ಲಿ ಎದುರಾಳಿಗಳಿಗೆ ನಡುಕ ಆರಂಭವಾಗಿದೆ.

ಸೂರ್ಯ ಪಡೆ ಯುಎಸ್‌ಎ ತಂಡವನ್ನು ಮಣಿಸಲು ಸಿದ್ಧತೆ ನಡೆಸಿದೆ. ಕಳೆದ ಕೆಲವು ಪಂದ್ಯಗಳಲ್ಲಿ ಬಿರುಸಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಇವರಿಗೆ ಅಭಿಷೇಕ್ ಶರ್ಮಾ ಸಾಥ್ ನೀಡಲಿದ್ದಾರೆ. ಉಭಯ ಆಟಗಾರರು ಹೊಡಿ ಬಡಿ ಆಟಕ್ಕೆ ಹೆಸರುವಾಸಿಯಾಗಿದ್ದು, ಪವರ್ ಪ್ಲೇನಲ್ಲಿ ಬಿಗ್ ಹಿಟ್‌ಗಳ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಕ್ಷಮತೆ ಹೊಂದಿದ್ದಾರೆ. ಅಭಿಷೇಕ್ ಶರ್ಮಾ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಆಡುತ್ತಿದ್ದು ಎಲ್ಲರ ಗಮನ ಅವರ ಮೇಲೆ ನೆಟ್ಟಿದೆ.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಮಾಡುವ ಅನಿವಾರ್ಯತೆ ಇದೆ. ಉಭಯ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆಲ್‌ರೌಂಡರ್ ರೂಪದಲ್ಲಿ ಕಣಕ್ಕೆ ಇಳಿಯುವ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ರನ್‌ಗಳನ್ನು ಹಿಗ್ಗಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಫಿನಿಷರ್ ಪಾತ್ರದಲ್ಲಿ ರಿಂಕು ಸಿಂಗ್ ಹಾಗೂ ಶಿವಂ ದುಬೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ವೇಗದ ಬೌಲಿಂಗ್ ನೊಗವನ್ನು ಅರ್ಶದೀಪ್ ಸಿಂಗ್ ಹೊರಲಿದ್ದಾರೆ. ಇವರಿಗೆ ಹೊಸ ಚೆಂಡಿನಲ್ಲಿ ಹಾರ್ದಿಕ್ ಪಾಂಡ್ಯ ಸಾಥ್ ನೀಡಲಿದ್ದಾರೆ. ಪವರ್ ಪ್ಲೇ ಮುಗಿಯುವ ವೇಳೆ ಜಸ್ಪ್ರೀತ್ ಸಹ ತಮ್ಮ ಯಾರ್ಕರ್ ದಾಳಿಯಿಂದ ಕಾಡಲು ಸನ್ನದ್ಧರಾಗುತ್ತಾರೆ. ಸ್ಪಿನ ಬೌಲರ್ ರೂಪದಲ್ಲಿ ವರುಣ್ ಚಕ್ರವರ್ತಿ ಕಾಣಿಸಿಕೊಳ್ಳುವುದು ಬಹುತೇಕ ಫಿಕ್ಸ್ ಆಗಿದೆ.
ವಾಂಖೆಡೆ ಪಿಚ್ ಸಾಂಪ್ರದಾಯಿಕವಾಗಿ ಬ್ಯಾಟಿಂಗ್‌ಗೆ ಹೆಚ್ಚು ಸಹಕಾರಿಯಾಗಿದೆ. ಕೆಂಪು ಮಣ್ಣಿನ ಈ ಪಿಚ್‌ನಲ್ಲಿ ಪಂದ್ಯದ ಆರಂಭಿಕ ಓವರ್‌ಗಳಲ್ಲಿ ವೇಗಿಗಳಿಗೆ ಉತ್ತಮ ಬೌನ್ಸ್ ಮತ್ತು ಸ್ವಿಂಗ್ ಸಿಗುವ ಸಾಧ್ಯತೆ ಇದೆ. ಭಾರತ ಹಾಗೂ ಅಮೆರಿಕ ನಡುವಣ ಪಂದ್ಯ ಸಂಜೆ ನಡೆಯಲಿದ್ದು, ಇಬ್ಬನಿ ಬೀಳುವ ಸಾಧ್ಯತೆ ಹೆಚ್ಚಿದೆ. ಟಾಸ್ ಗೆದ್ದ ತಂಡ ಬೌಲಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ.
ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ.
ಸಾಯಿತೇಜ ಮುಕ್ಕಾಮಲ, ಆಂಡ್ರೀಸ್ ಗೌಸ್ (ವಿಕೆಟ್ ಕೀಪರ್), ಶಯಾನ್ ಜಹಾಂಗೀರ್, ಮೊನಾಂಕ್ ಪಟೇಲ್ (ನಾಯಕ), ಮಿಲಿಂದ್ ಕುಮಾರ್, ಹರ್ಮೀತ್ ಸಿಂಗ್, ಶುಭಂ ರಂಜಾನೆ, ಮೊಹಮ್ಮದ್ ಮೋಹ್ಸಿನ್, ಶಾಡ್ಲಿ ವ್ಯಾನ್ ಶಾಲ್ಕ್ವಿಕ್, ಸೌರಭ್ ನೇತ್ರಾವಲ್ಕರ್ ಮತ್ತು ಅಲಿ ಖಾನ್.
ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ.
ಭಾರತ ಹಾಗೂ ಯುಎಸ್‌ಎ ನಡುವಣ ಪಂದ್ಯ ಸಂಜೆ 7ಕ್ಕೆ ಆರಂಭವಾಗಲಿದೆ. ಪಂದ್ಯ ಆರಂಭಕ್ಕೂ ಅರ್ಧ ಗಂಟೆ ಮುನ್ನ ಟಾಸ್ ನಡೆಯಲಿದೆ.