ಟಿ20 ವಿಶ್ವಕಪ್ 2026 ಸೋಲಿನ ನೋವಲ್ಲಿದ್ದ ಕಿವೀಸ್ ಆಟಗಾರರಿಗೆ ಪತ್ನಿಯರ ಸಾಂತ್ವನ
T20 World Cup 2026: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿತು. ಮತ್ತೊಂದೆಡೆ, ನ್ಯೂಜಿಲೆಂಡ್ ತಂಡ ಸೋಲನುಭವಿಸಿ ನಿರಾಶೆಗೆ ಒಳಗಾಯಿತು. ಆದರೆ, ಪಂದ್ಯ ಮುಕ್ತಾಯದ ನಂತರ ಮೈದಾನದಲ್ಲಿ ಕಂಡುಬಂದ ದೃಶ್ಯವೊಂದು ಇದೀಗ ವಿಶ್ವದಾದ್ಯಂತ ಕ್ರೀಡಾಭಿಮಾನಿಗಳ ಮನಗೆದ್ದಿದೆ.
ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿದ ಬಳಿಕ, ನ್ಯೂಜಿಲೆಂಡ್ ಆಟಗಾರರು ನಿರಾಶೆಗೆ ಒಳಗಾಗಿ ಕಣ್ಣೀರಿಟ್ಟ ದೃಶ್ಯಗಳು ಕಂಡುಬಂದವು. ಅದರಲ್ಲೂ ಗ್ಲೆನ್ ಫಿಲಿಪ್ಸ್, ಇಶ್ ಸೋಧಿ ಮೈದಾನದಲ್ಲೇ ಭಾವುಕರಾಗಿ ತಮ್ಮ ಪತ್ನಿಯರನ್ನು ತಬ್ಬಿಕೊಂಡ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸೋಲಿನ ನೋವಲ್ಲಿದ್ದ ಆಟಗಾರರಿಗೆ ಕುಟುಂಬಸ್ಥರ ಸಾಂತ್ವನ
ಸೋಲಿನ ಆ ಕ್ಷಣದಲ್ಲಿ ಈ ಆಟಗಾರರಿಗೆ ಸಾಂತ್ವನ ನೀಡಲು ಅವರ ಪತ್ನಿಯರು ಮೈದಾನಕ್ಕಿಳಿದರು. ಗ್ಲೆನ್ ಫಿಲಿಪ್ಸ್ ಅವರು ತಮ್ಮ ಪತ್ನಿಯನ್ನು ಅಪ್ಪಿಕೊಂಡು ನೋವನ್ನು ಹಂಚಿಕೊಂಡರು. ಇತ್ತ ಇಶ್ ಸೋಧಿ ಕೂಡ ತಮ್ಮ ಪತ್ನಿಯೊಂದಿಗೆ ಭಾವನಾತ್ಮಕ ಕ್ಷಣಗಳನ್ನು ಕಳೆದರು. ಹೀಗೆ ಪ್ರತಿ ಆಟಗಾರರ ಕಷ್ಟದ ಸಮಯದಲ್ಲಿ ಕುಟುಂಬವು ನೀಡಿದ ಈ ಸಾಥ್, ಕ್ರೀಡಾಂಗಣದ ವಾತಾವರಣವನ್ನೇ ಬದಲಿಸಿಬಿಟ್ಟಿತು.
ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ದೃಶ್ಯಗಳು
ಈ ದೃಶ್ಯವನ್ನು ಕಂಡ ಕ್ರೀಡಾಭಿಮಾನಿಗಳು, ಸೋಲು-ಗೆಲುವು ಆಟದ ಭಾಗ, ಆದರೆ, ಇಂತಹ ಕಠಿಣ ಸಮಯದಲ್ಲಿ ಕುಟುಂಬ ನೀಡುವ ಬೆಂಬಲವೇ ಆಟಗಾರನಿಗೆ ನಿಜವಾದ ಶಕ್ತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸುತ್ತಿದ್ದಾರೆ. ಈ ಫೋಟೋಗಳು ಮತ್ತು ವಿಡಿಯೋಗಳು ಕ್ರೀಡಾ ಜಗತ್ತಿನಲ್ಲಿ ಮಾನವೀಯ ಸಂಬಂಧಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸಿವೆ.
ಈ ಮೂಲಕ ಕ್ರೀಡಾ ಜಗತ್ತಿನಲ್ಲಿ ಗೆಲುವಿನ ಸಂಭ್ರಮಕ್ಕೆ ಸಿಗುವ ಮನ್ನಣೆ, ಸೋಲಿನ ನೋವಿನ ಸಮಯದಲ್ಲೂ ಆಟಗಾರರಿಗೆ ಸಿಗುತ್ತದೆಯೇ? ಈ ಪ್ರಶ್ನೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದ ನಂತರ ನಡೆದ ಕ್ಷಣಗಳಿಂದ ಉತ್ತರ ಸಿಕ್ಕಿದೆ. ಕ್ರಿಕೆಟ್ ಎನ್ನುವುದು ಕೇವಲ ಅಂಕಿ-ಅಂಶಗಳ ಆಟವಲ್ಲ, ಅದೊಂದು ಭಾವನೆಗಳ ಸಂಗಮ ಎಂಬುದನ್ನು ಈ ಪಂದ್ಯದ ನಂತರದ ದೃಶ್ಯಗಳು ಸಾಬೀತುಪಡಿಸಿದವು.
ಅಹಮದಾಬಾದ್‌ನಲ್ಲಿ ಅಬ್ಬರಿಸಿದ ಭಾರತ
ಕಳೆದ ಭಾನುವಾರ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಧೂಳೀಪಟ ಮಾಡುವ ಮೂಲಕ ಸತತ ಎರಡನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಭಾರತ 96 ರನ್‌ಗಳ ಭರ್ಜರಿ ಜಯ ಸಾಧಿಸಿತು.
ನ್ಯೂಜಿಲೆಂಡ್ ವಿರುದ್ಧ ಸ್ಪೋಟಕ ಬ್ಯಾಟಿಂಗ್ ದಾಳಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿತು. ಸಂಜು ಸ್ಯಾಮ್ಸನ್ ಅವರ ಅಪ್ರತಿಮ 89, ಅಭಿಷೇಕ್ ಶರ್ಮಾ ಅವರ ವೇಗದ 52 ರನ್, ಇಶಾನ್ ಕಿಶನ್ ಸಿಡಿಸಿದ ಅರ್ಧಶತಕ ಹಾಗೂ ಕೊನೆಯಲ್ಲಿ ದುಬೆ ಅವರ ಅಬ್ಬರ್ ಬ್ಯಾಟಿಂಗ್ ನೆರವಿನಿಂದ ಭಾರತವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.
ಕಿವೀಸ್ ಪಡೆಗೆ ನಡುಕ ಹುಟ್ಟಿಸಿದ ಭಾರತದ ಬೌಲರ್‌ಗಳು
ಬೃಹತ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಭಾರತದ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿತು. ಜಸ್ಪ್ರಿತ್ ಬುಮ್ರಾ ಅವರು ಮಾರಕ ಬೌಲಿಂಗ್ ದಾಳಿ ನಡೆಸಿ ಎದುರಾಳಿ ಬ್ಯಾಟರ್‌ಗಳಿಗೆ ಆರಂಭದಲ್ಲೇ ಕಡಿವಾಣ ಹಾಕಿದರು. ಬುಮ್ರಾ ಕೇವಲ 15 ರನ್‌ಗಳನ್ನು ನೀಡಿ 4 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಅವರಿಗೆ ಸಾಥ್ ನೀಡಿದ ಅಕ್ಷರ್ ಪಟೇಲ್ 3 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಹಾಗೂ ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದು 159 ರನ್‌ಗಳಿಗೆ ಕಟ್ಟಿಹಾಕಿದರು. ಈ ಮೂಲಕ ಭಾರತ ತಂಡ 96 ರನ್‌ಗಳ ಅಂತರದಿಂದ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications