ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಮುಂದಿನ ವರ್ಷ ಫೆಬ್ರವರಿ 7 ರಿಂದ ಟಿ20 ವಿಶ್ವಕಪ್ ಆಯೋಜಿಸುತ್ತಿದೆ. ಈ ಮೆಗಾ ಟೂರ್ನಿಗೆ ಈಗಾಗಲೇ ಒಂದೊಂದು ತಂಡಗಳು ತಮ್ಮ ತಮ್ಮ ತಂಡವನ್ನು ಪ್ರಕಟಿಸಲು ಯೋಜನೆ ರೂಪಿಸಿಕೊಂಡಿವೆ. ಆಸ್ಟ್ರೇಲಿಯಾ ಸಹ ಈ ವಿಶ್ವಕಪ್‌ಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ತಂಡದಲ್ಲಿ ಅನುಭವಿ ಆಟಗಾರರಿಬ್ಬರು ಸ್ಥಾನ ಪಡೆಯಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹ್ಯಾಜಲ್‌ವುಡ್ ಅವರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಈ ಇಬ್ಬರೂ ಆಟಗಾರರು ಗಾಯದಿಂದ ಬಳಲುತ್ತಿದ್ದಾರೆ. ಇನ್ನು ಇವರಿಬ್ಬರೂ ಫಿಟ್ ಆಗಿಲ್ಲ. ಆದರೂ ಇವರಿಬ್ಬರೂ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ.

ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧದ ಆಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಡಿದ್ದರು. ಇವರು ಆರಂಭಿಕ ಎರಡು ಪಂದ್ಯಗಳಲ್ಲಿ ಗಾಯದ ಕಾರಣದಿಂದಾಗಿಯೇ ಆಡಲು ಸಾಧ್ಯವಾಗಿರಲಿಲ್ಲ. ಇವರಿಗೆ ಫಿಟ್ನೆಸ್ ಸಮಸ್ಯೆ ಇದ್ದಿದ್ದರಿಂದ ಮುಂದಿನ ಎರಡು ಪಂದ್ಯಗಳಿಂದ ಕೈ ಬಿಡಲಾಗಿತ್ತು. ಕಮಿನ್ಸ್ ಕೆಲವೇ ದಿನಗಳಲ್ಲಿ ಮತ್ತೊಂದು ಸ್ಕ್ಯಾನ್‌ಗೆ ಒಳಗಾಗಲಿದ್ದಾರೆ. ಸ್ಕ್ಯಾನ್ ವರದಿ ಬಂದ ಬಳಿಕವೇ ಅವರನ್ನು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದೋ ಇಲ್ಲವೋ ಎಂಬುದು ಸ್ಪಷ್ಟವಾಗುತ್ತದೆ. ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಆರಂಭವಾಗಲಿದೆ.
ಸ್ನಾಯು ಸೆಳೆತ ಹಾಗೂ ಪಾದದ ಗಾಯಗಳಿಂದಾಗಿ ಜೋಶ್ ಹ್ಯಾಜಲ್‌ವುಡ್ ಇಡೀ ಆಷಸ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಹ್ಯಾಜಲ್‌ವುಡ್ ಭಾರತ ವಿರುದ್ಧದ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಇವರ ಫಿಟ್ನೆಸ್ ಬಗ್ಗೆ ಮುಖ್ಯ ತರಬೇತುದಾರ ಮೆಕ್‌ಡೊನಾಲ್ಡ್ ದೊಡ್ಡ ಹೇಳಿಕೆ ನೀಡಿದ್ದಾರೆ. ಇವರು ಟಿ20 ವಿಶ್ವಕಪ್ ವೇಳೆಗೆ ಫಿಟ್ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಗಾಯದ ಸಮಸ್ಯೆಯನ್ನು ಎದುರಿಸಿದ್ದಾರೆ. ಬಿಬಿಎಲ್‌ನಲ್ಲಿ ಹೋಬಾರ್ಟ್ ಹರಿಕೇನ್ಸ್ ಪರ ಆಡುವಾಗ ಅವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರು ಇಡೀ ಸರಣಿಯಿಂದ ಹೊರಗುಳಿಯಬೇಕಾಗಿದೆ. ಇವರು ಸಹ ಟಿ20 ವಿಶ್ವಕಪ್ ವೇಳೆ ಫಿಟ್ ಆಗುವ ಸಾಧ್ಯತೆ ಇದೆ ಎಂದು ಮೆಕ್‌ಡೊನಾಲ್ಡ್ ನಂಬಿದ್ದಾರೆ. ಆಸೀಸ್ ಫೆ.11 ರಂದು ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಈ ವೇಳೆ 5 ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಆಸ್ಟ್ರೇಲಿಯಾ "ಬಿ" ಗುಂಪಿನಲ್ಲಿ ಸ್ಥಾನಪಡೆದಿದೆ. ಉಳಿದಂತೆ ಐರ್ಲೆಂಡ್, ಓಮನ್, ಶ್ರೀಲಂಕಾ ಹಾಗೂ ಜಿಂಬಾಬ್ವೆ ತಂಡಗಳು ಸ್ಥಾನ ಪಡೆದಿವೆ.