T20 World Cup 2026: ಇಂಗ್ಲೆಂಡ್-ಶ್ರೀಲಂಕಾ ಸೂಪರ್ 8 ಪಂದ್ಯಕ್ಕೆ ಮಳೆ ಭೀತಿ: ಹವಾಮಾನ ವರದಿ ಏನಿದೆ?
T20 World Cup 2026: ಟಿ20 ವಿಶ್ವಕಪ್ 2026ನ ಗುಂಪು ಹತಂದಲ್ಲಿ ಲೀಗ್ ಪಂದ್ಯಗಳು ಎಲ್ಲಾ ಮುಗಿದಿದ್ದು, ಇದೀಗ ಸೂಪರ್ 8 ಪ್ರವೇಶ ಪಡೆದಿರುವ ತಂಡಗಳ ನಡುವೆ ಪೈಪೋಟಿ ಶುರುವಾಗಿದೆ. ಈ ನಡುವೆಯೇ ಈಗಾಗಲೇ ಹಲವು ಪಂದ್ಯಗಳು ಮಳೆಯಿಂದ ರದ್ದಾದ ಹಿನ್ನೆಲೆ ತಲಾ ಒಂದು ಅಂಕ ನೀಡಲಾಗಿದೆ. ಭಾನುವಾರ (ಫೆಬ್ರವರಿ 22) ನಡೆಯಲಿರುವ ಇಂಗ್ಲೆಂಡ್-ಶ್ರೀಲಂಕಾ ನಡುವಿನ ಕದನಕ್ಕೂ ವರುಣನ ಭೀತಿ ಎದುರಾಗಿದೆ.
ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಗ್ರೂಪ್ 2ರ ಇಂಗ್ಲೆಂಡ್-ಶ್ರೀಲಂಕಾ ಸೂಪರ್ 8 ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಹವಾಮಾನ ಇಲಾಖೆ ವರದಿಗಳ ಪ್ರಕಾರ, ಇಲ್ಲಿ ಸುಮಾರು ಶೇಕಡ 87ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಈ ಮ್ಯಾಚ್ ರದ್ದಾದ್ರೆ ಏನು ಮಾಡಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಾಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಶ್ರೀಲಂಕಾದಲ್ಲಿ ನಿರಂತರವಾಗಿ ಮಳೆರಾಯನ ಆರ್ಭಟ ಮುಂದುವರೆದಿದೆ. ಇದರ ಪರಿಣಾಮ 2026ರ ಟಿ20 ವಿಶ್ವಕಪ್ ಪಂದ್ಯಗಳ ಮೇಲೆ ಬೀರಿದೆ. ಈಗಾಗಲೇ ಭಾರೀ ಮಳೆಯಿಂದಾಗಿ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ನ್ಯೂಜಿಲೆಂಡ್- ಪಾಕಿಸ್ತಾನ ನಡುವಿನ ಸೂಪರ್ 8 ಪಂದ್ಯ ರದ್ದಾಗಿದ್ದು, ಎರಡು ತಂಡಗಳಿಗೆ ತಲಾ 1 ಅಂಕಗಳನ್ನು ನೀಡಲಾಗಿದೆ.
ಇಂಗ್ಲೆಂಡ್-ಶ್ರೀಲಂಕಾ ಪಂದ್ಯಕ್ಕೂ ಮಳೆ ಭೀತಿ
ಹಾಗೆಯೇ ಫೆಬ್ರವರಿ 22 ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಇಂಗ್ಲೆಂಡ್-ಶ್ರೀಲಂಕಾ ಸೂಪರ್ 8 ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಪಂದ್ಯದ ಸಮಯದಲ್ಲಿ ನಿರಂತರ ಮಳೆಯಾದ್ರೆ, ಓವರ್‌ಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ. ಇದರಿಂದ ಎರಡೂ ತಂಡಗಳ ಸೆಮಿಫೈನಲ್ ಅವಕಾಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಹವಾಮನ ಇಲಾಖೆ ಹೇಳೋದೇನು?
ಹವಾಮಾನ ಇಲಾಖೆ ಪ್ರಕಾರ, ಭಾನುವಾರ ಪಲ್ಲೆಕೆಲೆನಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಶೇಕಡ 87ರಷ್ಟು ಮಳೆಯ ಸಾಧ್ಯತೆಯಿದೆ. ರಾತ್ರಿ ವೇಳೆಗೆ ಶೇಕಡ 55ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. ಮಳೆಯ ಕಾರಣ ಸಂಪೂರ್ಣ 20 ಓವರ್‌ಗಳ ಪಂದ್ಯ ನಡೆಯುವ ಸಾಧ್ಯತೆ ತುಂಬಾ ಕಡಿಮೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಮಧ್ಯಾಹ್ನದ ವೇಳೆ ಸುಮಾರು 3 ಗಂಟೆಗಳ ಕಾಲ ಹಾಗೂ ರಾತ್ರಿ 2 ಗಂಟೆಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇದೆ. ಇದರಿಂದ ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ ಅಡ್ಡಿ ಉಂಟಾಗುವ ಭೀತಿ ಎದುರಾಗಿದೆ. ಪಂದ್ಯ ಮಧ್ಯಾಹ್ನ 3 ಗಂಟೆಯಿಂದ ಆರಂಭ ಆಗಲಿದ್ದು, ಈ ವೇಳೆಯೇ ಮಳೆ ಪ್ರಮಾಣ ಹೆಚ್ಚಿರಲಿದ ಎನ್ನುವ ಮುನ್ಸೂಚನೆ ಇದೆ. ಆದ್ದರಿಂದ ಮ್ಯಾಚ್ ವಿಳಂಬವಾಗಬಹುದು ಅಥವಾ ರದ್ದಾಗುವ ಸಾಧ್ಯತೆಯೂ ಇದೆ.
ಮೀಸಲು ದಿನ ಇರಲಿದೆಯೇ?
ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಾತ್ರ ಒಂದು ದಿನ ಮೀಸಲು ಇಡಲಾಗುತ್ತದೆ. ಆದರೆ, ಸೂಪರ್ 8 ಹಂತದ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರುವುದಿಲ್ಲ. ನಿಗದಿತ ದಿನಾಂಕದಂದೇ ಪಂದ್ಯ ಪೂರ್ಣಗೊಳ್ಳದೆ ರದ್ದಾದರೆ, ಎರಡು ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತದೆ.
ಈಗಾಗಲೇ ಶನಿವಾರ ನಡೆಯಬೇಕಿದ್ದ ಪಾಕಿಸ್ತಾನ-ನ್ಯೂಜಿಲೆಂಡ್ ನಡುವಿನ ಪಂದ್ಯವೂ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಎರಡು ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ. ಇದೇ ಗುಂಪಿನಲ್ಲಿ ಮತ್ತೊಂದು ಪಂದ್ಯವೂ ರದ್ದಾದರೆ ಅಂಕಪಟ್ಟಿಯಲ್ಲಿ ಇಂಗ್ಲೆಂಡ್, ಶ್ರೀಲಂಕಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಾಲ್ಕು ತಂಡಗಳು ಒಂದೊಂದು ಅಂಕದೊಂದಿಗೆ ಒಂದೇ ಸ್ಥಾನ ಕಾಯ್ದುಕೊಳ್ಳಲಿವೆ.
ಹೀಗೆ ಆದ್ರೆ, ಸೆಮಿಫೈನಲ್ ಪ್ರವೇಶದ ಹೋರಾಟ ಇನ್ನಷ್ಟು ರೋಚಕವಾಗಲಿದೆ. ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯುವುದು ಅತ್ಯಾವಶ್ಯಕ ಆಗಿದೆ. ಆದ್ದರಿಂದ ಮುಂದಿನ ಪ್ರತಿಯೊಂದು ಪಂದ್ಯವೂ ತಂಡಗಳಿಗೆ ನಿರ್ಣಾಯಕವಾಗಲಿದೆ. ಇನ್ನೂ ಇಂದು ಸಂಜೆ ಅಹಮದಬಾದ್ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗ್ರೂಪ್ 1ರ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಸೂಪರ್ 8 ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಯಾವುದೇ ಮಳೆಯ ಆತಂಕವಿಲ್ಲ. ಆದರೆ, ಸೆಮಿಫೈನಲ್ ಹಾದಿ ಸುಲಭ ಆಗಬೇಕಂದ್ರೆ ಇದರಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಲೇಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications