
ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರಹಾಕುವ ಜೊತೆಗೆ ಶ್ರೀಲಂಕಾ ತಂಡ ಕೂಡ ಸೆಮಿಫೈನಲ್ ಸ್ಪರ್ಧೆಯಿಂದ ಹೊರ ಬೀಳುವಂತೆ ಮಾಡಿದೆ. ಮೂಲಕ ದಕ್ಷಿಣ ಆಫ್ರಿಕಾ ತಂಡ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಸೆಮಿಫೈನಲ್‌ಗೇರಲು ದಕ್ಷಿಣ ಆಫ್ರಿಕಾಗೆ ಆಸ್ಟ್ರೇಲಿಯಾ ಕಠಿಣ ಸ್ಪರ್ಧೆಯೊಡ್ಡುತ್ತಿದೆ.
ಅಬುದಾಭಿಯ ಶೇಕ್ ಜಾಯೇದ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಎದುರಾಳಿಯನ್ನು ಬ್ಯಾಟಿಂಗ್‌ಗೆ ಇಳಿಸಿತು. ದಕ್ಷಿಣ ಆಫ್ರಿಕಾ ತಂಡದ ಈ ಸವಾಲನ್ನು ಎದುರಿಸಲು ಕಣಕ್ಕಿಳಿದ ಬಾಂಗ್ಲಾದೇಶದ ದಾಂಡಿಗರು ನೀರಸ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಆಟಗಾರ ಲಿಟನ್ ದಾಸ್ ಹಾಗೂ ಕೆಳ ಕ್ರಮಾಂಕದಲ್ಲಿ ಮೆಹದಿ ಹಸನ್ ಕ್ರಮವಾಗಿ 24 ಹಾಘೂ 27 ರನ್‌ಗಳನ್ನು ಗಳಿಸಿದ್ದು ಬಿಟ್ಟರೆ ಬಾಂಗ್ಲಾದೇಶದ ಯಾವ ಆಟಗಾರ ಕೂಡ ಉತ್ತಮ ಪ್ರದರ್ಶನ ನೀಡಲೇ ಇಲ್ಲ. ದಕ್ಷಿಣ ಆಫ್ರಿಕಾದ ಬೌಲರ್‌ಗಳ ದಾಳಿಯ ಮುಂದೆ ಕೇವಲ 84 ರನ್‌ಗಳಿಗೆ ತಂಡ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾ ಪರವಾಗಿ ರಬಡಾ ಹಾಗೂ ನಾರ್ಕಿಯಾ ಜೋಡಿ ಅದ್ಭುತ ಪ್ರದರ್ಶನ ನೀಡಿ ಬಾಂಗ್ಲಾ ದಾಂಡಿಗರಿಗೆ ಆಘಾತ ನಿಡಿದರು. ಇವರಿಬ್ಬರು ತಲಾ 3 ವಿಕೆಟ್ ಪಡೆಯುವ ಮೂಲಕ ಮಿಂಚುಹರಿಸಿದರು. ಸ್ಪಿನ್ನರ್ ಶಂಸಿ 2 ವಿಕೆಟ್ ಪಡೆದರೆ ಪ್ರಿಟೋರಿಯಸ್ 1 ವಿಕೆಟ್ ಕಿತ್ತರು.
ಇನ್ನು ಬಾಂಗ್ಲಾದೇಶ ನೀಡಿದ 85 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಕೂಡ ಉತ್ತಮವಾಗಿ ಇರಲಿಲ್ಲ. ಆದರೆ ಕನಿಷ್ಠ ಗುರಿ ಮುಂದಿದ್ದ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಆತಂಕ ಪಡುವಂತಾಗಲಿಲ್ಲ. ನಾಯಕ ಟಂಬಾ ಬವುಮಾ ಅಜೇಯ 31 ರನ್‌ಗಳನ್ನು ಗಳಿಸಿ ಪಂದ್ಯದ ಹೈಯೆಸ್ಟ್ ಸ್ಕೋರರ್ ಎನಿಸಿದ್ದಾರೆ. ಬಾಂಗ್ಲಾದೇಶ ನೀಡಿದ ಗುರಿಯನ್ನು ದಕ್ಷಿಣ ಆಫ್ರಿಕಾ 13.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪುವಲ್ಲಿ ಯಶಸ್ವಿಯಾಯಿತು.
ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ತಂಡ ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರನೇ ಗೆಲುವು ಸಂಪಾದಿಸಿದೆ. ಈ ಮೂಲಕ ಸೆಮಿ ಫೈನಲ್‌ಗೇರುವ ರೇಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಒಂದೆಡೆ ಇಂಗ್ಲೆಂಡ್ ತಂಡಾಡಿದ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಗೆಲುವು ಸಂಪಾದಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರೆ ಮತ್ತೊಂದೆ ಸ್ಥಾನಕ್ಕಾಗಿ ದಕ್ಷಿಣ ಆಫ್ರಿಕಾ ಹಾಗು ಆಸ್ಟ್ರೇಲಿಯಾ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಬಾಂಗ್ಲಾದೇಶ ಆಡುವ ಬಳಗ: ಮೊಹಮ್ಮದ್ ನಯಿಮ್, ಲಿಟನ್ ದಾಸ್ (ವಿಕೆಟ್ ಕೀಪರ್), ಸೌಮ್ಯ ಸರ್ಕಾರ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ (ನಾಯಕ), ಅಫೀಫ್ ಹೊಸೈನ್, ಶಮೀಮ್ ಹೊಸೈನ್, ಮಹೇದಿ ಹಸನ್, ನಸುಮ್ ಅಹ್ಮದ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್
ಬೆಂಚ್: ಮುಸ್ತಾಫಿಜುರ್ ರೆಹಮಾನ್, ನೂರುಲ್ ಹಸನ್, ರುಬೆಲ್ ಹೊಸೈನ್
ದಕ್ಷಿಣ ಆಫ್ರಿಕಾ ಆಡುವ ಬಳಗ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಅನ್ರಿಚ್ ನಾರ್ಕಿಯಾ, ತಬ್ರೈಜ್ ಶಮ್ಸಿ
ಬೆಂಚ್: ಹೆನ್ರಿಚ್ ಕ್ಲಾಸೆನ್, ಜಾರ್ನ್ ಫಾರ್ಟುಯಿನ್, ವಿಯಾನ್ ಮುಲ್ಡರ್, ಲುಂಗಿ ಎನ್ಗಿಡಿ