ಇಂಗ್ಲೆಂಡ್‌ಗೆ ಗಾಯದ ಮೇಲೆ ಬರೆ: ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದ ಪ್ರಮುಖ ವೇಗದ ಬೌಲರ್

ಟಿ20 ವಿಶ್ವಕಪ್‌ನಲ್ಲಿ ತಂಡಗಳ ಗಾಯದ ಸಮಸ್ಯೆಗಳು ಮುಂದುವರಿಯುತ್ತಲೇ ಇದೆ. ಇಂಗ್ಲೆಂಡ್ ತಂಡ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಆಡುವುದಕ್ಕೂ ಮುನ್ನವೇ ತಂಡದ ಪ್ರಮುಖ ವೇಗದ ಬೌಲರ್ ರೀಸ್ ಟಾಪ್ಲಿ ಸಂಪೂರ್ಣ ಟೂರ್ನಿಯಿಂದ ಹೊರಗುಳಿಯುವುದು ಖಚಿತವಾಗಿದೆ.
ಗಾಯದ ಕಾರಣದಿಂದಾಗಿ ಶನಿವಾರ ಅಫ್ಘಾನಿಸ್ತಾನದ ವಿರುದ್ಧ ನಡೆಯಲಿರುವ ಇಂಗ್ಲೆಂಡ್ ತಂಡದ ಆರಂಭಿಕ ಪಂದ್ಯದಿಂದ ರೀಸ್ ಟಾಪ್ಲಿ ಹೊರಗುಳಿಯಲಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಮುಂದಿನ ಪಂದ್ಯಗಳಿಗೆ ಲಭ್ಯವಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಇಂಗ್ಲೆಂಡ್ ತಂಡ ಸಂಪೂರ್ಣ ವಿಶ್ವಕಪ್ ಟೂರ್ನಿಗೆ ರೀಸ್ ಟಾಪ್ಲಿ ಸೇವೆಯಿಂದ ವಂಚಿತವಾಗಲಿದೆ.
ಅಭ್ಯಾಸ ಪಂದ್ಯದಲ್ಲಿ ಗಾಯ: ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಪಾಕಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಟಾಪ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಈ ಅಭ್ಯಾಸ ಪಂದ್ಯದಲ್ಲಿ ಅವರು ಬೌಲಿಂಗ್ ನಡೆಸಿರಲಿಲ್ಲ. ಬಳಿಕ ಇಂಗ್ಲೆಂಡ್‌ನ ಆರಂಭಿಕ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದೀಗ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಈ ಯುವ ವೇಗಿ.

ಇನ್ನಷ್ಟೇ ಆಗಬೇಕಿದೆ ಬದಲಿ ಆಟಗಾರನ ಘೋಷಣೆ
ಇನ್ನು ರೀಸ್ ಟಾಪ್ಲಿ ಗಾಯಕ್ಕೆ ತುತ್ತಾಗಿರುವ ಕಾರಣದಿಂದಾಗಿ ಬದಲಿಯಾಗಿ ಯಾವ ಆಟಗಾರನಿಗೆ ಅವಕಾಶ ದೊರೆಯಬಹುದು ಎಂಬುದು ಕುತೂಹಲ ಮೂಡಿಸಿದೆ. ಇಸಿಬಿ ಈವರೆಗೂ ಇಂಗ್ಲೆಂಡ್ ತಂಡಕ್ಕೆ ಬದಲಿ ಆಟಗಾರನನ್ನು ಘೋಷಣೆ ಮಾಡಿಲ್ಲ. ಮಾಹಿತಿಯ ಪ್ರಕಾರ ರಿಚರ್ಡ್ ಗ್ಲೀಸನ್ ಅಥವಾ ಟೈಮಲ್ ಮಿಲ್ಸ್‌ಗೆ ಈ ತಂಡದಲ್ಲಿ ಅವಕಾಶ ದೊರೆಯಬಹುದು ಎನ್ನಲಾಗಿದೆ.

ವೈಟ್‌ಬಾಲ್ ಮಾದರಿಯಲ್ಲಿ ಉತ್ತಮವಾಗಿದೆ ಟಾಪ್ಲಿ ಪ್ರದರ್ಶನ
ರೀಸ್ ಟೋಪ್ಲಿ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಈವರೆಗೆ ಉತ್ತಮ ಪ್ರದರ್ಶನ ನೀಡಿ ಮಿಂಚಿರುವ ಆಟಗಾರ. ಟಿ20 ಅಥವಾ ಏಕದಿನ ಎರಡು ಮಾದರಿಯಲ್ಲಿಯೂ ಟಾಪ್ಲಿ ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಈ ಕಾರಣದಿಂದಾಗಿಯೇ ಅವರು ಇಂಗ್ಲೆಂಡ್‌ನ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು. ಅವರು 2016ರ ಟಿ 20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರವಾಗಿ ಕಣಕ್ಕಿಳಿದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಟೂರ್ನಿಗಳಲ್ಲಿ ಗಾಯದ ಕಾರಣದಿಂದಾಗಿಯೇ ಭಾಗವಹಿಸಲು ಸಾಧ್ಯವಾಗಿಲ್ಲ.

ಇಂಗ್ಲೆಂಡ್‌ಗೆ ಗಾಯದ ಮೇಲೆ ಬರೆ
ಇನ್ನು ಈ ಬಾರಿಯ ವಿಶ್ವಕಪ್‌ನ್ಲಲಿ ಇಂಗ್ಲೆಂಡ್ ತಂಡಕ್ಕೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ತಂಡದ ಪ್ರತಿಭಾನ್ವಿತ ವೇಗದ ಬೌಲರ್ ಜೋಫ್ರಾ ಆರ್ಚರ್ ಸತತ ಎರಡನೇ ಬಾರಿಗೆ ಗಾಯದ ಕಾರಣದಿಂದಾಗಿ ವಿಶ್ವಕಪ್‌ನಿಂದ ವಂಚಿತವಾಗಿದ್ದರೆ ಸ್ಪೋಟಕ ಬ್ಯಾಟರ್ ಜಾನಿ ಬೈರ್‌ಸ್ಟೋವ್ ವಿಶ್ವಕಪ್‌ನ ಆರಂಭಕ್ಕೆ ಕೆಲವೇ ದಿನಗಳಿರುವಾಗ ಗಾಯದ ಕಾರಣದಿಂದಾಗಿ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡರು. ಇದೀಗ ರೀಸ್ ಟೋಪ್ಲಿ ಕೂಡ ಈ ಸಾಲಿಗೆ ಸೇರ್ಪಡೆಯಾಗುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications