
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿಯಾದ ಗೆಲುವನ್ನು ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ಆರಂಭದಲ್ಲಿ ಅನುಭವಿಸಿದ ಆಘಾತದ ಬಳಿಕ ಜೋಸ್ ಬಟ್ಲರ್ ಹಾಗೂ ನಾಯಕ ಇಯಾನ್ ಮಾರ್ಗನ್ ಪ್ರದರ್ಶನದಿಂದ ಉತ್ತಮ ಮೊತ್ತಗಳಿಸಿದ ಇಂಗ್ಲೆಂಡ್ ನಂತರ ಬೌಲಿಂಗ್‌ನಲ್ಲಿಯೂ ಮಿಂಚಿತು. ಶ್ರಿಲಂಕಾ ತಂಡ ಉತ್ತಮ ಪ್ರತಿರೋಧ ಒಡ್ಡಿತಾದರೂ ಅಂತಿಮ ಘಟ್ಟದಲ್ಲಿ ಗೆಲುವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ.
ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ಆಡಿದ ನಾಲ್ಕು ಪಂದ್ಯಗಳಲ್ಲಿಯೂ ಗೆದ್ದಂತಾಗಿದೆ. ಹೀಗೆ ಇಯಾನ್ ಮಾರ್ಗನ್ ಪಡೆ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. ಈ ಮೂಲಕ ಸೆಮಿಫೈನಲ್ ಟಿಕೆಟ್‌ಅನ್ನು ಬಹುತೇಕ ಖಾತ್ರಿಪಡಿಸಿಕೊಂಡಿದೆ. ಮತ್ತೊಂದೆಡೆ ಶ್ರೀಲಂಕಾ ಆಡಿದ ನಾಲ್ಕು ಪಂದ್ಯಗಳ ಪೈಕಿ ಒಂದು ಗೆಲುವು ಮಾತ್ರವೇ ಗಳಿಸಿದ್ದು ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡುವ ಸವಾಲು ಪಡೆದಿತ್ತು. ಇದಕ್ಕೆ ಪೂರಕವಾಗಿ ಶ್ರೀಲಂಕಾ ತಂಡದ ಬೌಲರ್‌ಗಳು ಆರಂಭದಲ್ಲಿ ಅದ್ಭುತವಾದ ಯಶಸ್ಸು ಸಾಧಿಸಿದರು. ಇಂಗ್ಲೆಂಡ್ ತಂಡದ ಮೊತ್ತ 35 ರನ್ ಆಗುವಷ್ಟರಲ್ಲಿ ಪ್ರಮುಖ ಮೂವರು ದಾಂಡಿಗರ ವಿಕೆಟ್ ಕಬಳಿಸಿತ್ತು ಶ್ರೀಲಂಕಾ. ನಂತರ ಜೋಸ್ ಬಟ್ಲರ್‌ಗೆ ಜೊತೆಯಾದ ನಾಯಕ ಇಯಾನ್ ಮಾರ್ಗನ್ ಅದ್ಭುತವಾದ ಇನ್ನಿಂಗ್ಸ್ ಕಟ್ಟಿದರು.
ಇಯಾನ್ ಮಾರ್ಗನ್ ಹಾಗೂ ಜೋಸ್ ಬಟ್ಲರ್ ಜೋಡಿ ಆರಂಭದಲ್ಲಿ ನಿಧಾನವಾಗಿ ಆಟವಾಡುತ್ತಾ ವಿಕೆಟ್ ಕಳೆದುಕೊಳ್ಳದಂತೆ ಎಚ್ಚರ ವಹಿಸಿದರು. ನಂತರ ಜೋಸ್ ಬಟ್ಲರ್ ತಮ್ಮ ಸಹಜ ಆಟವನ್ನು ಪ್ರದರ್ಶಿಸಿ ಸ್ಪೋಟಕ ಬ್ಯಾಟಿಂಗ್ ನಡೆಸಿದರು. 67 ಎಸೆತಗಳನ್ನು ಎದುರಿಸಿದ ಬಟ್ಲರ್ ಭರ್ಜರಿ ಶತಕವನ್ನು ಸಿಡಿಸಲು ಯಶಸ್ವಿಯಾದರು. ಈ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಶತಕ ದಾಖಲಾಯಿತು. ಈ ಶತಕದೊಂದಿಗೆ ಇಂಗ್ಲೆಂಡ್ ಎಲ್ಲಾ ಮೂರು ಮಾದರಿಯಲ್ಲಿಯೂ ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ಕೂಡ ಬರೆದಿದ್ದಾರೆ ಜೋಸ್ ಬಟ್ಲರ್. ನಾಯಕ ಇಯಾನ್ ಮಾರ್ಗನ್ 40 ರನ್‌ಗಳಿಸಿ ಔಟಾದರು. ಅಂತಿಮವಾಗಿ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು.
ಇನ್ನು ಇಂಗ್ಲೆಂಡ್ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ಕೂಡ ಆರಂಭಿಕ ಆಘಾತವನ್ನು ಅನುಭವಿಸಿತು. ಫತುಮ್ ಸಿಸ್ಸಂಕ ಕೇವಲ ಒಂದು ರನ್ ಗಳಿಸಿ ಔಟಾದರು. ನಂತರ ಚರಿತ ಅಸಲಂಕ ಕೂಡ 21 ರನ್‌ಗಳ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡರು. ಕುಸಾಲ್ ಪೆರೆರಾ ಹಾಗೂ ಅವಿಷ್ಕಾ ಫೆರ್ನಾಂಡೋ ಬ್ಯಾಟ್‌ನಿಂದಲೂ ಉತ್ತಮ ಪ್ರದರ್ಶನ ಬಾರಲಿಲ್ಲ. ಬಾನುಕ ರಾಜಪಕ್ಸ 26 ರನ್‌ಗಳ ಕೊಡುಗೆ ನೀಡಿದರು.
ಆದರೆ ನಂತರ ಜೊತೆಯಾದ ನಾಯಕ ದಸುನ್ ಶನಕ ಹಾಗೂ ವನಿಂದು ಹಸರಂಗ ಶ್ರೀಲಂಕಾ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಇಂಗ್ಲೆಂಡ್ ತಂಡ ಈ ಸಂದರ್ಭದಲ್ಲಿ ಸೋಲುವ ಆತಂಕಕ್ಕೂ ಒಳಗಾಯಿತು. ಈ ಜೋಡಿ 53 ರನ್‌ಗಳ ಜೊತೆಯಾಟವನ್ನು ನೀಡಿತು. 21 ಎಸೆತಗಳಲ್ಲಿ 34 ರನ್‌ಗಳಿಸಿದ ಹಸರಂಗ ನಂತರ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ನಾಯಕ ದಸುನ್ ಶನಕ ಕೂಡ ರನ್‌ಔಟ್ ಆಗುವ ಮೂಲಕ ಶ್ರೀಲಂಕಾ ತಂಡದ ಹೋರಾಟ ಬಹುತೇಕ ಅಂತ್ಯವಾಗಿತ್ತು. ಅಂತಿಮವಾಗಿ ಶ್ರೀಲಂಕಾ ತಂಡ 137 ರನ್‌ಗಳಿಗೆ ಆಲೌಟ್ ಆಗಿ ತನ್ನ ಹೋರಾಟವನ್ನು ಮುಗಿಸಿತು.
ಇಂಗ್ಲೆಂಡ್ ತಂಡದ ಪರವಾಗಿ ಮೊಯೀನ್ ಅಲಿ, ಆದಿಲ್ ರಶೀದ್ ಹಾಗೂ ಕ್ರಿಸ್ ಜೋರ್ಡನ್ ತಲಾ 2 ವಿಕೆಟ್ ಕಬಳಿಸಿದರೆ ಕ್ರಿಸ್ ವೋಕ್ಸ್, ಲಿವಿಂಗ್ಸ್ಟನ್ ತಲಾ ಒಂದು ವಿಕೆಟ್ ತಮ್ಮದಾಗಿಸಿದರು. ಈ ಮೂಲಕ ಇಂಗ್ಲೆಂಡ್ ತಂಡ ಟೂರ್ನಿಯಲ್ಲಿ ತನ್ನ ಗೆಲುವಿನ ಓಟವನ್ನು ಮುಂದಿವರಿಸಿದೆ. ಇನ್ನು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೂಪರ್ 12 ಹಂತದ ತನ್ನ ಕೊನೆಯ ಪಂದ್ಯವನ್ನು ಮುಂದಿನ ಶನಿವಾರ ಆಡಲಿದೆ.
ಇಂಗ್ಲೆಂಡ್ ಆಡುವ ಬಳಗ: ಜೇಸನ್ ರಾಯ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡೇವಿಡ್ ಮಲನ್, ಜಾನಿ ಬೈರ್‌ಸ್ಟೋವ್, ಇಯಾನ್ ಮಾರ್ಗನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟನ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಟೈಮಲ್ ಮಿಲ್ಸ್
ಬೆಂಚ್: ಡೇವಿಡ್ ವಿಲ್ಲಿ, ಟಾಮ್ ಕರನ್, ಮಾರ್ಕ್ ವುಡ್, ಸ್ಯಾಮ್ ಬಿಲ್ಲಿಂಗ್ಸ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ಅವಿಷ್ಕ ಫೆರ್ನಾಂಡೋ, ವನಿಂದು ಹಸರಂಗ, ದಸುನ್ ಶನಕ (ನಾಯಕ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಮಹೇಶ್ ತೀಕ್ಷಣ, ಲಹಿರು ಕುಮಾರ
ಬೆಂಚ್; ಧನಂಜಯ ಡಿ ಸಿಲ್ವಾ, ಅಕಿಲ ದನಂಜಯ, ಬಿನೂರ ಫೆರ್ನಾಂಡೋ, ದಿನೇಶ್ ಚಾಂಡಿಮಾಲ್