ನಾಯಕನಾಗಿ ಇಯಾನ್ ಮಾರ್ಗನ್ ದಾಖಲೆ: ಧೋನಿ ಸಾಧನೆ ಹಿಂದಿಕ್ಕಿದ ಇಂಗ್ಲೆಂಡ್ ನಾಯಕ

ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸುವ ಮೂಲಕ ಅವರು ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಅಫ್ಘಾನಿಸ್ತಾನದ ಮಾಜಿ ನಾಯಕ ಅಸ್ಘರ್ ಅಫ್ಘನ್ ಹೆಸರಿನಲ್ಲಿದ್ದ ದಾಖಲೆಯನ್ನು ಮೀರಿ ನಿಂತಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ನಾಯಕ ಎನಿಸಿದ್ದಾರೆ ಇಯಾನ್ ಮಾರ್ಗನ್. ನಾಯಕನಾಗಿ ಅತಿ ಹೆಚ್ಚು ಗೆಲುವು ಸಾಧಿಸಿದ ದಾಖಲೆಯನ್ನು ಇಯಾನ್ ಮಾರ್ಗನ್ ತಮ್ಮದಾಗಿಸಿಕೊಂಡಿದ್ದಾರೆ. ಇಯಾನ್ ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ 43 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದು ಚುಟುಕು ಕ್ರಿಕೆಟ್‌ನಲ್ಲಿ ನಾಯಕನೋರ್ವ ಸಾಧಿಸಿದ ಅತಿ ಹೆಚ್ಚಿನ ಗೆಲುವುವಾಗಿದೆ. 68 ಪಂದ್ಯಗಳಲ್ಲಿ ಇಯಾನ್ ಮಾರ್ಗನ್ ಈ ಸಾಧನೆ ಮಾಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಈ ದಾಖಲೆಯನ್ನು ಹೊಂದಿರುವ ಅಸ್ಘರ್ ಅಫ್ಘನ್ ಹಾಗೂ ಎಂಎಸ್ ಧೋನಿ ತಲಾ 42 ಗೆಲುವುಗಳನ್ನು ಸಾಧಿಸಿದ್ದಾರೆ. ಅಸ್ಘರ್ ಅಫ್ಘನ್ 52 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ ಎಂಎಸ್ ಧೋನಿ 72 ಪಂದ್ಯಗಳಲ್ಲಿ ಇದನ್ನು ಸಾಧಿಸಿದ್ದರು.
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಅದ್ಭುತವಾದ ಪ್ರದರ್ಶನ ನೀಡುತ್ತಿದೆ. ಸೂಪರ್ 12 ಹಂತದಲ್ಲಿ ಇಯಾನ್ ಮಾರ್ಗನ್ ಬಳಗ ನಾಲ್ಕು ಪಂದ್ಯವನ್ನು ಆಡಿದ್ದು 4 ಪಂದ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.
ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ತಂಡದ ವಿರುದ್ಧ 6 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ನಂತರ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಅದಾದ ಬಳಿಕ ಆಸ್ಟ್ರೇಲಿಯಾ ತಂಡಕ್ಕೂ ಇಯಾನ್ ಮಾರ್ಗನ್ ಪಡೆ 8 ವಿಕೆಟ್‌ಗಳ ಭಾರೀ ಅಂತರದ ಸೋಲಿನ ರುಚಿ ತೋರಿಸಿತು. ನಂತರ ಸೋಮವಾರ ನಡೆದ ಶ್ರಿಲಂಕಾ ವಿರುದ್ಧ 26 ರನ್‌ಗಳ ಅಂತರದ ಜಯವನ್ನು ದಾಖಲಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅದ್ಭುತವಾದ ಪ್ರದರ್ಶನ ನೀಡುತ್ತಾ ಮಿಂಚುಹರಿಸುತ್ತಿದೆ.
ಈ ಬಾರಿಯ ಟಿ20 ವಿಶ್ವಕಪ್‌ನ ಸೂಪರ್ 12 ಹಂತದಲ್ಲಿ ಇಂಗ್ಲೆಂಡ್‌ಗೆ ಇನ್ನು ಒಂದು ಪಂದ್ಯ ಮಾತ್ರವೇ ಬಾಕಿಯಿದೆ. ದಕ್ಷಿಣ ಆಫ್ರಿಕಾ ತಂಡದ ವಿರುದಗಧ ಈ ಪಂದ್ಯ ಮುಂದಿನ ಶನಿವಾರ ನಡೆಯಲಿದೆ. ಶಾರ್ಜಾ ಕ್ರೀಡಾಂಗಣ ಈ ಪಂದ್ಯದ ಆತಿಥ್ಯ ವಹಿಸಲಿದೆ. ಇಂಗ್ಲೆಂಡ್ ತಂಡದ ಗೆಲುವಿನ ಓಟಕ್ಕೆ ದಕ್ಷಿಣ ಆಫ್ರಿಕಾ ಬ್ರೇಕ್ ಹಾಕಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.
ಇನ್ನು ಗ್ರೂಫ್ 1ರಲ್ಲಿ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ತಂಡ ಸತತ ನಾಲ್ಕು ಗೆಲುವುಗಳ ಮೂಲಕ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡ ಎರಡನೇ ಸ್ಥಾನದಲ್ಲಿದ್ದರೆ ಇಷ್ಟೇ ಗೆಲುವುಗಳೊಂದಿಗೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಶ್ರೀಲಂಕಾ ನಾಲ್ಕನೇ ಸ್ಥಾನದಲ್ಲಿದ್ದು ವೆಸ್ಟ್ ಇಂಡೀಸ್ ಐದು ಹಾಗೂ ಬಾಂಗ್ಲಾದೇಶ ಕೊನೆಯ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications