ಕೊಹ್ಲಿ, ಸೂರ್ಯಕುಮಾರ್ ಅಲ್ಲ: ಟಿ20 ವಿಶ್ವಕಪ್‌ನಲ್ಲಿ ಇನ್ನು ಈ ಭಾರತೀಯನದ್ದೇ ಆಟ ಎಂದ ಗಂಭೀರ್!

ಈ ಬಾರಿಯ ಟಿ20 ವಿಶ್ವಕಪ್ ಈಗ ರೋಚಕ ಘಟ್ಟವನ್ನು ತಲುಪಿದ್ದು ಸಮಿಫೈನಲ್ ಹಂತಕ್ಕೇರಲು ಅಂತಿಮ ಅವಕಾಶವನ್ನು ಎಲ್ಲಾ ತಂಡಗಳು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಯಾವೆಲ್ಲಾ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯಲಿದೆ ಎಂಬುದು ಎಲ್ಲರ ಕುತೂಹಲವಾಗಿದ್ದು ಈ ಕುತೂಹಲ ಸೂಪರ್ 12 ಹಂತದ ಅಂತಿಮ ಪಂದ್ಯದವರೆಗೂ ಮುಂದುವರಿಯುವುದರಲ್ಲಿ ಅನುಮಾನವಿಲ್ಲ. ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಭಾರತ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಲಿದೆ.
ಇನ್ನು ಟೀಮ್ ಇಂಡಿಯಾ ಈವರೆಗೆ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಮೂಲಕ ಸೆಮಿಫೈನಲ್ ಹಂತಕ್ಕೇರುವ ಸನಿಹದಲ್ಲಿದೆ. ಟೀಮ್ ಇಂಡಿಯಾದ ಈವರೆಗಿನ ಪಂದ್ಯಗಳಲ್ಲಿ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್. ಇಬ್ಬರು ಆಟಗಾರರು ಕೂಡ ಅದ್ಭುತ ಫಾರ್ಮ್‌ನಲ್ಲಿದ್ದು ಮುಂದಿನ ಪಂದ್ಯಗಳಲ್ಲಿಯೂ ಈ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆಯಿದೆ.
ಆದರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತನ್ ಗಂಭಿರ್ ಕುತೂಹಲಕಾರಿ ಹೇಳಿಕೆ ನೀಡಿದ್ದು ಈ ಬಾರಿಯ ವಿಶ್ವಕಪ್‌ನ ಮುಂದಿನ ಪಂದ್ಯಗಳಲ್ಲಿ ತಂಡದ ಮತ್ತೋರ್ವ ಆಟಗಾರನಿಂದ ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು ಎಂದಿದ್ದಾರೆ. ಹಾಗಾದರೆ ಆ ಆಟಗಾರ ಯಾರು? ಮುಂದೆ ಓದಿ..

ಕೆಎಲ್ ರಾಹುಲ್ ಮೇಲೆ ಗಂಭೀರ್‌ಗೆ ವಿಶ್ವಾಸ
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಆರಂಭಿಕ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಒಳಗಾಗಿದ್ದರು. ಆದರೆ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅದ್ಭುತ ಅರ್ದ ಶತಕ ಸಿಡಿಸಿ ಫಾರ್ಮ್‌ಗೆ ಮರಳಿದ್ದರು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಭಾರತದ ಪರವಾಗಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದಿದ್ದಾರೆ ಗೌತಮ್ ಗಂಭೀರ್. ಮೊದಲ ಮೂರು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಎರಡಂಕಿ ದಾಟುವಲ್ಲಿಯೂ ವಿಫಲವಾಗಿದ್ದರು.

ರಾಹುಲ್ ಯಾವಾಗಲೂ ಫಾರ್ಮ್‌ನಲ್ಲೆ ಇರುತ್ತಾರೆ ಎಂದ ಗಂಭೀರ್
ಈ ಬಾಎರಿಯ ವಿಶ್ವಕಪ್‌ನ ಸೆಮಿಫೈನಲ್ ಹಂತದಲ್ಲಿ ಕೆಎಲ್ ರಾಹುಲ್ ಭಾರತದ ಪರವಾಗಿ ಅದ್ಭುತವಾದ ಇನ್ನಿಂಗ್ಸ್‌ಗಳನ್ನು ನೀಡುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಒಂದು ಕೆಟ್ಟ ಇನ್ನಿಂಗ್ಸ್‌ನಿಂದ ಆಟಗಾರನನ್ನು ಕೆಟ್ಟ ಆಟಗಾರ ಎನ್ನಲು ಸಾಧ್ಯವಿಲ್ಲ, ರಾಹುಲ್ ಯಾವಾಗಲೂ ಫಾರ್ಮ್‌ನಲ್ಲೇ ಇರುತ್ತಾರೆ ಎಂದಿದ್ದಾರೆ. "ಅಭ್ಯಾಸ ಪಂದ್ಯದಲ್ಲಿ ರಾಹುಲ್ ಅರ್ಧ ಶತಕ ಬಾರಿಸಿದಾಗ ಎಲ್ಲರೂ ಸಂಭ್ರಮಿಸಿದ್ದರು. ಅವರು ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಲಿದ್ದಾರೆ. ಒಂದು ಕೆಟ್ಟ್ ಇನ್ನಿಂಗ್ಸ್‌ನಿಂದಾಗಿ ಕೆಟ್ಟ ಆಟಗಾರ ಎಂದು ಹೇಳಲು ಸಾಧ್ಯವಿಲ್ಲ ಹಾಗೂ ಒಂದು ಉತ್ತಮ ಇನ್ನಿಂಗ್ಸ್‌ನಿಂದ ಶ್ರೇಷ್ಠ ಆಟಗಾರ ಎನ್ನಲೂ ಸಾಧ್ಯವಿಲ್ಲ. ಹಾಗಾಗಿ ನೀವು ಹೆಚ್ಚು ಸಮತೋಲಿತವಾಗಿರಬೇಕಾಗುತ್ತದೆ. ಒಂದು ಉತ್ತಮವಾದ ಹೊಡೆತ ಎಲ್ಲವನ್ನೂ ಬದಲಾಯಿಸಿ ಬಿಡುತ್ತದೆ" ಎಂದಿದ್ದಾರೆ ಗೌತಮ್ ಗಂಭೀರ್.

ರಾಹುಲ್‌ಗೆ ಗಂಭೀರ್ ಬೆಂಬಲ
"ರಾಹುಲ್ ಫಾರ್ಮ್‌ಗೆ ಮರಳಿದ್ದಾರೆ, ಅವರು ಯಾವಾಗಲೂ ಫಾರ್ಮ್‌ನಲ್ಲಿಯೇ ಇದ್ದರು. ನೀವು ಉತ್ತಮ ಪ್ರದರ್ಶನವನ್ನು ನೀಡಲು ಬಯಸುವ ಸಮಯ ಇದು. ಇದು ವಿಶ್ವಕಪ್ ವೇದಿಕೆ. ವಿಶ್ವದ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಚಿತ್ತವೂ ನಿಮ್ಮ ಮೇಲಿದೆ. ನಿಮಗೆ ಉತ್ತಮ ಆರಂಭ ದೊರೆತಿಲ್ಲ ಎಂಬ ಕಾರಣಕ್ಕೆ ನೀವು ಉತ್ತಮ ಆಟಗಾರನಲ್ಲ ಎಂಬುದು ಅರ್ಥವಲ್ಲ" ಎಂದು ಕೆಎಲ್ ರಾಹುಲ್ ಬಗ್ಗೆ ವಿಶೇಷ ಭತವಸೆಯ ಮಾತುಗಳನ್ನಾಡಿದ್ದಾರೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್.

ಪ್ರದರ್ಶನದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದ ರಾಹುಲ್
ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧ ಶತಕ ಸಿಡಿಸಿದ್ದ ಕೆಎಲ್ ರಾಹುಲ್ ಆ ಪಂದ್ಯವನ್ನು ಗೆದ್ದ ಬಳಿಕ ಹರ್ಷ ವ್ಯಕ್ತಡಿಸಿದ್ದರು. "ಇದೊಂದು ಮಿಶ್ರ ಅನುಭವವಾಗಿದೆ. ಆಸ್‌ಟರೇಲಿಯಾಗೆ ಬರುವುದಕ್ಕೂ ಮುನ್ನ ಕೆಲ ಉತ್ತಮ ಇನ್ನಿಂಗ್ಸ್‌ಗಳು ನನ್ನ ಬ್ಯಾಟ್‌ನಿಂದ ಬಂದಿದ್ದವು. ಆದರೆ ಮೊದಲ ಮೂರು ಪಂದ್ಯಗಳು ನನ್ನ ಪರವಾಗಿ ಬಂದಿರಲಿಲ್ಲ. ನಾನು ಈ ಹಿಂದೆ ಸಾಕಷ್ಟು ಉತ್ತಮ ಕೊಡುಗೆಗಳನ್ನು ನೀಡಿದ್ದೆ. ಹೀಗಾಗಿ ನಾನು ಕಳವಳಗೊಂಡಿರಲಿಲ್ಲ. ಈಗ ನನ್ನಿಂದ ಉತ್ತಮ ಪ್ರದರ್ಶನ ಬಂದಿರುವುದು ನನಗೆ ಹರ್ಷವನ್ನುಂಟು ಮಾಡಿದೆ" ಎಂದು ಕೆಎಲ್ ರಾಹುಲ್ ಹೇಳಿಕೆ ನೀಡಿದ್ದರು. ಟೀಮ್ ಇಂಡಿಯಾದ ಸೂಪರ್ 12 ಹಂತದ ಅಂತಿಮ ಪಂದ್ಯ ಭಾನುವಾರ ನಡೆಯಲಿದ್ದು ಜಿಂಬಾಬ್ವೆ ವಿರುದ್ಧ ಭಾರತ ಸೆಣೆಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications