ಹಾಲಿ ಚಾಂಪಿಯನ್ ಪಟ್ಟ, ತವರಿನಲ್ಲೇ ವಿಶ್ವಕಪ್ ಟೂರ್ನಿ: ಆದರೂ ಮುಖಭಂಗ ಅನುಭವಿಸಿದ ಆಸ್ಟ್ರೇಲಿಯಾ

ಈ ಬಾರಿಯ ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು ಎಂದು ಕ್ರಿಕೆಟ್ ಪಂಡಿತರನ್ನು ಕೇಳಿದರೆ ಅವರೆಲ್ಲರ ಮೊದಲ ಉತ್ತರ ಆಸ್ಟ್ರೇಲಿಯಾ ತಂಡವೇ ಆಗಿತ್ತು. ಅದಕ್ಕೆ ಕಾರಣವೂ ಇತ್ತು. ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿರುವುದು ಮೊದಲ ಕಾರಣವಾದರೆ ತವರಿನಲ್ಲಿ ನಡೆಯುತ್ತಿರುವುದು ಮತ್ತೊಂದು ಕಾರಣವಾಗಿತ್ತು, ಜೊತೆಗೆ ತಂಡದಲ್ಲಿನ ಬಲಿಷ್ಠ ಆಟಗಾರರ ಪಡೆ ಕೂಡ ಈ ನಿರೀಕ್ಷೆಗೆ ಪ್ರಮುಖ ಕಾರಣವಾಗಿತ್ತು. ಆದರೆ ಇವುಗಳ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ಸಮಿಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದ್ದು ನಿರಾಸೆ ಅನುಭವಿಸಿದೆ.
ಈ ಬಾರಿಯ ವಿಶ್ವಕಪ್‌ನ ಸೂಪರ್ 12 ಹಂತದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್, ಇಂಗ್ಲೆಂಡ್, ಶ್ರೀಲಂಕಾ, ಐರ್ಲೆಂಡ್, ಅಫ್ಘಾನಿಸ್ತಾನ ತಂಡಗಳ ಜೊತೆಗೆ ಗ್ರೂಪ್ ಒಂದರಲ್ಲಿ ಸ್ಪರ್ಧೆಗೆ ಇಳಿದಿತ್ತು. ಆಡಿದ ಐದು ಪಂದ್ಯಗಳ ಪೈಕಿ ಮೂರು ಗೆಲುವು ಹಾಗೂ ಒಂದು ಸೋಲು ಅನುಭವಿಸಿತು. ಜೊತೆಗೆ ಒಂದು ಪಂದ್ಯ ಮಳೆಗೆ ಆಹುತಿಯಾಯಿತು. ನ್ಯೂಜಿಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲಿಯೇ ಭಾರೀ ಅಂತರದಿಂದ ಸೋಲು ಅನುಭವಿಸಿದ ಕಾರಣ ನೆಟ್‌ರನ್‌ರೇಟ್‌ಗೆ ದೊಡ್ಡ ಹೊಡೆತ ಬಿದ್ದಿತ್ತು. ಅಂತಿಮವಾಗಿ ಈ ಅಂಶವೇ ಆಸ್ಟ್ರೇಲಿಯಾ ತಂಡದ ಹೋರಾಟ ಲೀಗ್ ಹಂತಕ್ಕೆ ಅಂತ್ಯವಾಗಲು ಕಾರಣವಾಯಿತು.

ಶ್ರೀಲಂಕಾ vs ಇಂಗ್ಲೆಂಡ್ ಪಂದ್ಯದ ಮೇಲೆ ನಿಂತಿತ್ತು ಆಸಿಸ್ ಭವಿಷ್ಯ
ಸೂಪರ್ 12 ಹಂತದಲ್ಲಿ ಗ್ರೂಪ್ 1ರಲ್ಲಿ ಸೆಮಿಫೈನಲ್ ಹಂತಕ್ಕೇರುವ ಸ್ಪರ್ಧೆಯಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಮಧ್ಯೆ ತೀವ್ರ ಪೈಪೋಟಿಯಿತ್ತು. ಮೂರು ತಂಡಗಳು ಕೂಡ ಸಮಾನ ಅಂಕವನ್ನು ಗಳಿಸಿಕೊಂಡಿದ್ದು ನೆಟ್‌ರನ್‌ರೇಟ್‌ನ ಆಧಾರಲ್ಲಿ ಈಗ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಆದರೆ ಇಂಗ್ಲೆಂಡ್ ತಂಡಕ್ಕೂ ಈ ಹಾದಿ ಸುಗಮವಾಗಿರಲಿಲ್ಲ. ಶನಿವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ಹಾಗು ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳಿಗೂ ಮಹತ್ವದ್ದಾಗಿತ್ತು. ಈ ಪಂದ್ಯದಲ್ಲಿ ಶ್ರೀಲಂಕಾ ಗೆದ್ದರೆ ಆಸ್ಟ್ರೇಲಿಯಾ ತಂಡಕ್ಕೆ ಸೆಮಿಫೈನಲ್‌ಗೆ ಪ್ರವೇಶಿಸುವ ಅವಕಾಶವಿತ್ತು. ಆದರೆ ಇಂಗ್ಲೆಂಡ್ ಗೆದ್ದು ಆಸಿಸ್ ತಂಡದ ಹೋರಾಟವನ್ನು ಅಂತ್ಯಗೊಳಿಸಿದೆ.

ತವರಿನ ಲಾಭ ಪಡೆಯುವಲ್ಲಿ ವಿಫಲವಾದ ಆಸಿಸ್ ಪಡೆ
ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ತನ್ನ ತವರಿನಲ್ಲಿಯೇ ಆಡುತ್ತಿರುವ ಕಾರಣ ಇದು ತಂಡಕ್ಕೆ ಹೆಚ್ಚಿನ ಅನುಕೂಲವಾಗಬಹುದು ಎನ್ನಲಾಗಿತ್ತು. ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ನಲ್ಲಿ ಇತರ ತಂಡಗಳಿಗಿಂತ ಆಸಿಸ್ ಆಟಗಾರರಿಗೆ ಹೆಚ್ಚು ಆಡಿದ ಅನುಭವವಿರುವ ಕಾರಣ ಇದು ವಿಶ್ವಕಪ್‌ನಲ್ಲಿ ಸಹಾಯವಾಗಬಹುದು ಎಂಬ ಅಭಿಪ್ರಾಯಗಳು ಸಹಜವಾಗಿ ವ್ಯಕ್ತವಾಗಿತ್ತು. ಆದರೆ ಮಹತ್ವದ ಪಂದ್ಯಗಳಲ್ಲಿ ಆಸಿಸ್ ತವರಿನ ಪಿಚ್‌ನ ಲಾಭವನ್ನು ಪಡೆಯುವಲ್ಲಿಯೂ ವಿಫಲವಾಯಿತು. ಹೀಗಾಗಿಯೇ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳಿಗಿಂತ ನೆಟ್ ರನ್‌ರೇಟ್‌ನಲ್ಲಿ ಹಿಂದುಳಿದಿತ್ತು.

ಮೊದಲ ಪಂದ್ಯದಲ್ಲಿಯೇ ಭಾರೀ ಹಿನ್ನಡೆ
ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿಯೇ ದೊಡ್ಡ ಆಘಾತಕ್ಕೆ ಒಳಗಾಯಿತು. ಸೂಪರ್ 12 ಹಂತದ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣೆಸಾಡಿತ್ತು. ಆದರೆ ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ವೈಫಲ್ಯ ಅನುಭವಿಸಿದ ಆಸ್ಟ್ರೇಲಿಯಾ 89 ರನ್‌ಗಳ ಬೃಹತ್ ಅಂತರದಿಂದ ಸೋಲು ಅನುಭವಿಸಿತು. ಸೋಲಿನ ಜೊತೆಗೆ ಸೋಲಿನ ಅಂತರ ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿತು. ಇದುವೇ ಅಂತಿಮವಾಗಿ ಸೆಮಿಫೈನಲ್ ಸ್ಪರ್ಧೆಯಿಂದ ಹಿಒಂದುಳಿಯಲು ಆಸಿಸ್ ತಂಡಕ್ಕೆ ಕಾರಣವಾಯಿತು.

ಆಸ್ಟ್ರೇಲಿಯಾ ಸಂಪೂರ್ಣ ಸ್ಕ್ವಾಡ್
ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ, ಜೋಶ್ ಹ್ಯಾಜಲ್‌ವುಡ್ ಬೆಂಚ್ ಸ್ಟೀವನ್ ಸ್ಮಿತ್, ಕೇನ್ ರಿಚರ್ಡ್ಸನ್, ಆಷ್ಟನ್ ಅಗರ್, ಕ್ಯಾಮೆರಾನ್ ಗ್ರೀನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications