
ಟಿ20 ವಿಶ್ವಕಪ್‌ನ 20ನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಇಂಗ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳು ಮೆಲ್ಬರ್ನ್ ಅಂಗಳದಲ್ಲಿ ರೋಚಕವಾಗಿ ಸೆಣೆಸಾಡಿದೆ. ಮಳೆಯಿಂದಾಗಿ ಮೊಟಕುಗೊಂಡ ಈ ಪಂದ್ಯದಲ್ಲಿ ಡಕ್ವರ್ತ್ ಲೂಯೀಸ್ ನಿಯಮದ ಅನ್ವಯ ಐರ್ಲೆಂಡ್ ತಂಡ ಇಂಗ್ಲೆಂಡ್‌ಗೆ ಆಘಾತ ನೀಡಿದ್ದು 5 ರನ್‌ಗಳ ಅಂತರದ ಗೆಲುವು ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಬಳಿಕ ಐರ್ಲೆಂಡ್ ತಂಡದ ನಾಯಕ ಆಂಡಿ ಬಲ್ಬಿರ್ನೈ ಮಾತನಾಡಿದ್ದು ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
"ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅಂತಿಮ ಹಂತದಲ್ಲಿ ಅನುಭವಿಸಿದ ಹಿನ್ನಡೆಯಿಂದಾಗಿ ಬೇಸರವಾಗಿದೆ. ನಾವು ಅಂತಿಮ ಏಳು ವಿಕೆಟ್‌ಗಳನ್ನು ಕನಿಷ್ಠ ಮೊತ್ತಕ್ಕೆ ಕಳೆದುಕೊಂಡೆವು. ಹೀಗಾಗಿ ಪಂದ್ಯವನ್ನು ಹಿಡಿತದಿಂದ ಕಳೆದುಕೊಂಡಿದ್ದೆವು. ಇಂಗ್ಲೆಂಡ್ ತಂಡ ಯಾವ ರೀತಿಯಾಗಿ ಆಡಲು ಬಯಸುತ್ತದೆ ಎಂಬುದು ನಮಗೆ ತಿಳಿದಿರುವಕಾರಣ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂಬುದು ನಮ್ಮ ಸ್ಪಷ್ಟವಾದ ಸಂದೇಶವಾಗಿತ್ತು" ಎಂದಿದ್ದಾರೆ ಐರ್ಲೆಂಡ್ ತಂಡದ ನಾಯಕ ಬಲ್ಬಿರ್ನೈ.
ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಐರ್ಲೆಂಡ್ ತಂಡ ಮೊದಲ ವಿಕೆಟ್‌ಅನ್ನು ಶೀಘ್ರವಾಗಿ ಕಳೆದುಕೊಂಡಿದ್ದರೂ ಎರಡನೇ ವಿಕೆಟ್‌ಗೆ ಭರ್ಜರಿ ಪ್ರದರ್ಶನ ನೀಡಿತು. ನಾಯಕ ಬಲ್ಬರ್ನೈ ಹಾಗೂ ಲೂರ್ಕಾನ್ ಟಕ್ಕರ್ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಭರ್ಜರಿ ಪ್ರತ್ಯುತ್ತರ ನೀಡುತ್ತಾ 12 ಓವರ್‌ಗಳ ವೇಳೆಗೆ 103 ರನ್‌ಗಳನ್ನು ಗಳಿಸಲು ಕಾರಣವಾದರು. ಈ ಸಂದರ್ಭದಲ್ಲಿ ಈ ಜೋಡಿ ಬೇರ್ಪಟ್ಟಿತು.
ನಂತರವೂ ಬರ್ಬರ್ನೈ ಬ್ಯಾಟಿಂಗ್ ಮುಂದುವರಿಸಿದ್ದು ಭರ್ಜರಿ ಅರ್ಧ ಶತಕ ದಾಖಲಿಸುವಲ್ಲಿ ಯಶಸ್ವಿಯಾದರು. 47 ಎಸೆತಗಳಲ್ಲಿ ಐರ್ಲೆಂಡ್ ನಾಯಕ 62 ರನ್ ಸಿಡಿಸಿ ವಿಕೆಟ್ ಕಳೆದುಕೊಂಡರು. ಆದರೆ ನಂತರ ಬಂದ ಆಟಗಾರರಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಹೀಗಾಗಿ ಇಂಗ್ಲೆಂಡ್ ಬೌಲಿಂಗ್ ವಿಭಾಗ ಸಂಪೂರ್ಣ ಮೇಲುಗೈ ಸಾಧಿಸಿತು. 19.2 ಓವರ್‌ಗಳಲ್ಲಿ ಆಲೌಟ್ ಆದ ಐರ್ಲೆಂಡ್ ತಂಡ 159 ರನ್ ಗಳಿಸಿತು.
ಇಂಗ್ಲೆಂಡ್ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಮಾರ್ಕ್‌ವುಡ್ ಹಾಗೂ ಲಿವಿಂಗ್‌ಸ್ಟನ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರು ಕೂಡ ಐರ್ಲೆಂಡ್ ತಂಡದ ತಲಾ ಮೂರು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಉಳಿದಂತೆ ಸ್ಯಾಮ್ ಕರನ್ ಎರಡು ವಿಕೆಟ್ ಪಡೆದರೆ ಒಂದು ವಿಕೆಟ್ ಬೆನ್ ಸ್ಟೋಕ್ಸ್ ಪಾಲಾಯಿತು.
ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಅಗ್ರ ಕ್ರಮಾಂಕ ಸಂಪೂರ್ಣ ವೈಫಲ್ಯ ಅನುಭವಿಸಿತು. ಸವಾಲಿನ ಗುರಿಯನ್ನು ನೀಡಿದ ಐರ್ಲೆಂಡ್ ತಂಡ ಈ ಗುರಿಯನ್ನು ರಕ್ಷಣೆ ಮಾಡುವ ದೃಷ್ಟಿಯಲ್ಲಿ ಹೆಜ್ಜೆಯಿಡಲು ಆರಂಭಿಸಿತು. ನಾಯಕ ಆರಂಭಿಕ ಆಟಗಾರ ಜೋಸ್ ಬಟ್ಲರ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರೆ ಅಲೆಕ್ಸ್ ಹೀಲ್ಸ್ 7 ರನ್‌ಗಳನ್ನು ಗಳಿಸಿ ಔಟಾದರು. ಬಳಿಕ ಬೆನ್ ಸ್ಟೋಕ್ಸ್ ಕೂಡ 6 ರನ್ ಮಾತ್ರವೇ ಗಳಿಸಿ ಔಟಾದಾಗ ತಂಡದ ಮೊತ್ತ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ನಂತರ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ ಡೇವಿಡ್ ಮಲನ್ ಹಾಗೂ ಹ್ಯಾರಿ ಬ್ರೂಕ್ ಕೂಡ ಬಳಿಕ ವಿಕೆಟ್ ಕಳೆದುಕೊಂಡರು. ನಂತರ ಬ್ಯಾಟಿಂಗ್‌ಗಿಳಿದ ಮೊಯೀನ್ ಅಲಿ 12 ಎಸೆತಗಳಲ್ಲಿ 24 ರನ್‌ಗಳಿಸಿ ಹೋರಾಟ ನೀಡುವ ಮನೋಭಾವ ತೋರಿಸಿದರು.
ಆದರೆ ಆಗ ಮಳೆ ಇಂಗ್ಲೆಂಡ್ ಪಾಲಿಗೆ ವಿಲನ್ ರೂಪದಲ್ಲಿ ಎಂಟ್ರಿ ಕೊಟ್ಟಿತ್ತು. 14.3 ಓವರ್‌ಗಳಲ್ಲಿ 105 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಬಂದ ಇಂಗ್ಲೆಂಡ್ ತಂಡ ಡಕ್ವರ್ತ್ ಲೂಯೀಸ್ ನಿಯಮದ ಅನ್ವಯ ಈ ಹಂತದಲ್ಲಿ ಐರ್ಲೆಂಡ್ ತಂಡಕ್ಕಿಂತ 5 ರನ್ ಹಿಂದುಳಿದಿತ್ತು. ನಂತರ ಇದರ ಆಧಾರದಲ್ಲಿ ಐರ್ಲೆಂಡ್ ತಂಡವನ್ನು ವಿಜಯೀ ಎಂದು ಘೋಷಣೆ ಮಾಡಲಾಗಿದೆ.