ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಬೇಕು ಮಿಂಚಬೇಕು ಎಂಬುದೇ ಹಲವು ಯುವ ಕ್ರಿಕೆಟ್ ಆಟಗಾರರ ಆಶಯ. ಈ ನಿಟ್ಟಿನಲ್ಲೇ ಈ ಆಟಗಾರರು ಹಗಲು ರಾತ್ರಿ ಮೈದಾನದಲ್ಲಿ ಬೆವರು ಹರಿಸುತ್ತಾರೆ. ಈ ನಿಟ್ಟಿನಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅಬ್ಬರಿಸಿ, ಹಂತ ಹಂತವಾಗಿ ಸಾಧನೆಯ ಮೆಟ್ಟಿಲನ್ನು ಹತ್ತುತ್ತಾ ದೇಶವನ್ನು ಪ್ರತಿನಿಧಿಸುವ ಆಸೆಯನ್ನು ಹೊಂದಿರುತ್ತಾರೆ.
ಇಂತಹದ್ದೇ ಆಸೆಯ ಕನಸು ಕಾಣುತ್ತಿರುವ ಆಟಗಾರ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಹಂಬಲದಲ್ಲಿದ್ದಾನೆ. ಸಿಕ್ಕ ಅವಕಾಶದಲ್ಲಿ ಅಬ್ಬರಿಸುತ್ತಿರುವ ಕರ್ನಾಟದ ಸ್ಟಾರ್ ಪ್ಲೇಯರ್ ರನ್ ಮಹಲ್ ಕಟ್ಟುತ್ತಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ತಂಡದ ಮೇಲೆ ತಾನು ಸಹ ಕಣ್ಣು ನೆಟ್ಟಿರುವುದಾಗಿ ಸಾರಿ ಹೇಳಿದ್ದಾರೆ.

ಕರ್ನಾಟದ ಆರಂಭಿಕ ಆಟಗಾರ ರಣಜಿ ಟ್ರೋಫಿಯಲ್ಲಿ ಪಂಜಾಬ್ ವಿರುದ್ಧ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಈ ಪ್ರದರ್ಶನವನ್ನೇ ಮುಂದುವರೆಸುವ ಇಂಗಿತವನ್ನು ಹೊಂದಿರುವ ಆಟಗಾರನೇ ದೇವದತ್ ಪಡಿಕ್ಕಲ್..
ಈಗಾಗಲೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಭಾರತದ ಪರ ಆಡಿರುವ ದೇವದತ್ ಪಡಿಕ್ಕಲ್ ಕಮ್ ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ. 2021ರಲ್ಲಿ ಶ್ರೀಲಂಕಾ ವಿರುದ್ಧ ಚುಟುಕು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದ ದೇದವತ್, ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡಿದ ಆಟಗಾರರೇ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಅದು ಹೇಗೆ ದೇವದತ್ ಪಡಿಕ್ಕಲ್ ಸ್ಥಾನ ಪಡೆಯುತ್ತಾರೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು. ಇದಕ್ಕೆ ಉತ್ತರ ಇಲ್ಲಿದೆ.
ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಬಗ್ಗೆ ನಿಮಗೆ ತಿಳಿದಿರುತ್ತದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ನಿರ್ಗಮಿಸಿ ನಿರಾಸೆ ಹೊಂದಿತ್ತು. ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಡಿದ ಆಟಗಾರರ ಪಟ್ಟಿಯ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ ಇದಕ್ಕೆ ಉತ್ತರ ಸಿಗಬಹುದು.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ಐಪಿಎಲ್ 2021ರಲ್ಲಿ ಸ್ಥಿರ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿ ನೇರವಾಗಿ ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ಪಡೆಯುತ್ತಾರೆ. ಐಪಿಎಲ್‌ನಲ್ಲಿ ವರುಣ್ ಆಡಿದ 17 ಪಂದ್ಯಗಳಲ್ಲಿ 18 ವಿಕೆಟ್ ಪಡೆದು ಅಬ್ಬರಿಸಿದ್ದರು. ಅಲ್ಲದೆ 2020ರ ಐಪಿಎಲ್ ಸರಣಿಯಲ್ಲೂ ಇಂತಹದ್ದೇ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದರು. ಅವರಿಗೆ ಟೀಮ್ ಇಂಡಿಯಾ ಆಯ್ಕೆ ಸಮಿತಿ ರೆಡ್ ಕಾರ್ಪೆಟ್ ಹಾಕಿತ್ತು. ಮಿಸ್ಟ್ರಿ ಬೌಲರ್ ಎಂದೇ ಖ್ಯಾತಿ ಪಡೆದಿದ್ದ ವರುಣ್ ತಂಡ ತಮ್ಮ ಮೇಲೆ ಇರಿಸಿದ್ದ ನಂಬಿಕೆಯನ್ನು ಹುಸಿಯಾಗಿಸಿದರು.
ದೇವದತ್ ಪಡಿಕ್ಕಲ್ ಈ ಋತುವಿನಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದಾರೆ. ಈ ಪ್ರದರ್ಶನಕ್ಕೆ ಇನ್ನಷ್ಟು ಚುರುಕು ನೀಡುವ ಅಗತ್ಯ ಇದೆ. 2020 ಹಾಗೂ 2021ರಲ್ಲಿ ಆರ್‌ಸಿಬಿ ಪರ ದೇವದತ್ ಆಡಿದ ಧಾಟಿಯ ಬಗ್ಗೆ ಎಲ್ಲರಿಗೂ ಅರಿವಿದೆ. ಅದೇ ರೀತಿಯ ಪ್ರದರ್ಶನ ದೇಶೀಯ ಟೂರ್ನಿಯಲ್ಲಿ ಮಾಡುತ್ತಿರುವ ದೇವದತ್ ಭರವಸೆ ಮೂಡಿಸಿದ್ದಾರೆ.
ಮುಂಬರುವ ಐಪಿಎಲ್‌ನಲ್ಲಿ ಲಖ್ನೋ ಸೂಪರ್ ಜೇಂಟ್ಸ್ ತಂಡದ ಪರ ಕಣಕ್ಕೆ ಇಳಿಯುವ ದೇವದತ್ ಧಮಾಕೆದಾರ್ ಪ್ರದರ್ಶನ ನೀಡುವ ಅವಶ್ಯಕತೆ ಇದೆ. ಮೈಚಳಿ ಬಿಟ್ಟು ಬ್ಯಾಟಿಂಗ್ ಮಾಡಿದ್ದೇ ಆದಲ್ಲಿ ನಿಶ್ಚಿತವಾಗಿಯೂ ದೇವದತ್ ಪಡಿಕ್ಕಲ್‌ಗೆ ಅವಕಾಶದ ಬಾಗಿಲು ತೆರೆಯಬಹುದು.