T20 World Cup: ಇಶಾನ್, ಹಾರ್ದಿಕ್ ಅರ್ಧಶತಕದ ಆಟ
ನವದೆಹಲಿ: ಭರವಸೆಯ ಬ್ಯಾಟರ್ ಇಶಾನ್ ಕಿಶನ್ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಟಿ20 ವಿಶ್ವಕಪ್‌ನ "ಎ" ಗುಂಪಿನ ಪಂದ್ಯದಲ್ಲಿ ನಮೀಬಿಯಾಗೆ ಸವಾಲಿನ ಮೊತ್ತದ ಗುರಿಯನ್ನು ನೀಡಿದೆ.
ಟಾಸ್ ಸೊತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಭಾರತ ತಂಡಕ್ಕೆ ಸಿಕ್ಕಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಗಾಯಕ್ಕೆ ತುತ್ತಾಗಿದ್ದು, ಇನ್ನು ಚೇತರಿಕೆ ಕಾಣದ ಕಾರಣ ಅವರನ್ನು ತಂಡದಿಂದ ಬಿಡಲಾಗಿತ್ತು. ಹೀಗಾಗಿ ಇವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಸಂಜು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳುವಲ್ಲಿ ವಿಫಲರಾದರು. ಕೇವಲ 8 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 22 ರನ್ ಬಾರಿಸಿದ್ದ ಸಂಜು ಇಲ್ಲದ ಹೊಡೆತಕ್ಕೆ ಮುಂದಾಗಿ ತಂಡದ ಮೊತ್ತ 25 ಆಗಿದ್ದಾಗ ಔಟ್ ಆದರು.

ಸಂಜು ಸ್ಯಾಮ್ಸನ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ತಿಲಕ್ ವರ್ಮಾ, ಇಶಾನ್ ಕಿಶನ್ ಅವರಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ಬ್ಯಾಟಿಂಗ್ ಮಾಡುವಾಗ ಟೀಮ್ ಇಂಡಿಯಾ 250ರ ಆಸು ಪಾಸಿನಲ್ಲಿ ರನ್ ಕಲೆ ಹಾಕಬಹುದು ಎಂದು ಅಂದಾಜಿಸಲಾಗಿತ್ತು. ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವಾಡಿದ ಇಶಾನ್ ಕಿಶನ್ ರನ್ ವೇಗದ ಸ್ಥಿರತೆಯನ್ನು ಕಾಯ್ದುಕೊಂಡರು. ಭಾರತ ಪವರ್ ಪ್ಲೇನಲ್ಲಿ ಒಂದು ವಿಕೆಟ್ ಕಳೆದುಕೊಂಡು 86 ರನ್ ಕಲೆ ಹಾಕಿತು.
ಇಶಾನ್ ಸ್ಫೋಟಕ ಆಟ
ಎರಡನೇ ವಿಕೆಟ್‌ಗೆ ಇಶಾನ್, ತಿಲಕ್ ಜೊತೆಗೂಡಿ 31 ಎಸೆತಗಳಲ್ಲಿ 79 ರನ್ ಸೇರಿಸಿ ಆರ್ಭಟಿಸಿದರು. ಈ ವೇಳೆ ಇಶಾನ್ ಕಿಶನ್ 24 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 61 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಆರ್ಭಟಿಸಿದ್ದ ಸೂರ್ಯಕುಮಾರ್ ಯಾದವ್ 12 ರನ್‌ಗಳಿಗೆ ಆಟ ಮುಗಿಸಿದರು. ತಿಲಕ್ ವರ್ಮಾ 25 ರನ್ ಬಾರಿಸಿದ್ದಾಗ ತಾಳ್ಮೆಯನ್ನು ಕಳೆದುಕೊಂಡರು. 124 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಸಂಕಷ್ಟದಲ್ಲಿತ್ತು.
ಹಾರ್ದಿಕ್ ಅರ್ಧಶತಕ
5ನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಆಧಾರವಾದರು. ಈ ಜೋಡಿ ಕೇವಲ 39 ಎಸೆತಗಳಲ್ಲಿ 81 ರನ್ ಸೇರಿಸಿ ತಂಡದ ಮೊತ್ತವನ್ನು 200ಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕುವಲ್ಲಿ ನೆರವಾದರು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿ ಆರ್ಭಟಿಸಿದರು.

ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಸೇರಿಸಿತು. ನಮೀಬಿಯಾ ತಂಡದ ಪರ ಗೆರ್ಹಾರ್ಡ್ ಎರಾಸ್ಮಸ್ 4 ವಿಕೆಟ್ ಪಡೆದು ಆರ್ಭಟಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications