ಕೊಹ್ಲಿಯೊಂದಿಗೆ ಯಾರನ್ನೂ ಹೋಲಿಸುವುದು ಅಸಾಧ್ಯ: ಈ ಯುಗದ ಶ್ರೇಷ್ಠ ಆಟಗಾರ ಎಂದ ಪಾಕ್ ಮಾಜಿ ವೇಗಿ

ಕೆಲ ತಿಂಗಳ ಹಿಂದೆ ರನ್‌ಗಳಿಸಲು ಪರದಾಡುತ್ತಿದ್ದ ವಿರಾಟ್ ಕೊಹ್ಲಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಸುದೀರ್ಘ ಕಾಲದಿಂದ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದ ಕಾರಣ ತಂಡದಲ್ಲಿ ಕೊಹ್ಲಿಯ ಉಪಸ್ಥಿತಿಯ ಬಗ್ಗೆಯೂ ಅನೇಕರು ಪ್ರಶ್ನೆಯನ್ನು ಮಾಡಿದ್ದರು. ಆದರೆ ಕಳೆದ ಏಷ್ಯಾ ಕಪ್‌ನಲ್ಲಿ ಮತ್ತೆ ತಮ್ಮ ಹಳೇಯ ಫಾರ್ಮ್ ಕಂಡುಕೊಂಡಿರುವ ವಿರಾಟ್ ಕೊಹ್ಲಿಯನ್ನು ಸದ್ಯ ಭಾರತದ ಪರವಾಗಿ ಅಮೋಗ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ ಟೀಕಾಕಾರರನ್ನು ತಮ್ಮ ಬ್ಯಾಟಿಂಗ್ ಪ್ರದರ್ಶನದ ಮೂಲಕವೇ ಬಾಯ್ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾದ ವಿರುದ್ಧ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನ ಅಭಿಮಾನಿಗಳು ಸುದೀರ್ಘ ಕಾಲ ನೆನಪಿನಲ್ಲಿಟ್ಟುಕೊಳ್ಳುವಂತಾ ಇನ್ನಿಂಗ್ಸ್ ಎಂಬುದರಲ್ಲಿ ಎರಡು ಮಾತಿಲ್ಲ.
ಪಾಕಿಸ್ತಾನದ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಬಳಿಕ ನೆದರ್ಲೆಂಡ್ಸ್ ತಂಡದ ವಿರುದ್ಧವೂ ಅಜೇಉ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಈ ಎರಡು ಅದ್ಭುತ ಪ್ರದರ್ಶನದ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಮಿರ್ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿಯೊಂದಿಗೆ ಬೇರೆ ಯಾರನ್ನೂ ಹೋಲಿಕೆ ಮಾಡುವುದು ಅಸಾಧ್ಯ. ಆತನೋರ್ವ ಅತ್ಯಂತ ವಿಶೇಷ ಆಟಗಾರ ಎಂದಿದ್ದಾರೆ ಪಾಕ್ ಮಾಜಿ ವೇಗಿ.

ಒತ್ತಡದ ಸಂದರ್ಭದಲ್ಲಿ ಕೊಹ್ಲಿ ರೀತಿ ಆಡುವುದು ಅಸಾಧ್ಯ
ಇನ್ನು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಒತ್ತಡದ ಸಂದರ್ಭದಲ್ಲಿ ಆಡುವ ರೀತಿಯ ಬಗ್ಗೆ ಮೊಹಮ್ಮದ್ ಆಮಿರ್ ವಿಶೇಷ ಮಾತುಗಳನ್ನಾಡಿದ್ದಾರೆ. ಅಂಥಾ ಪರಿಸ್ಥಿತಿಯಲ್ಲಿ ಕೊಹ್ಲಿ ರೀತಿಯಲ್ಲಿ ಬ್ಯಾಟಿಂಗ್ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ ಎಂದಿರುವ ಮೊಹಮ್ಮದ್ ಆಮಿರ್ ಈ ಯುಗದ ಅತ್ಯಂತ ಶ್ರೇಷ್ಠ ಕ್ರಿಕೆಟಿಗ ಎಂದು ಕೊಹ್ಲಿಯನ್ನು ಆಮಿರ್ ಕೊಂಡಾಡಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಆಮಿರ್ ಈ ಮಾತುಗಳನ್ನಾಡಿದ್ದಾರೆ.

ಬೇರೆ ಯಾರಿಂದಲೂ ಅಸಾಧ್ಯ
"ನಾನು ಬಹಳ ಬಾರಿ ಅನೇಕ ಸಂದರ್ಶನಗಳಲ್ಲಿ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ ಯಾಕೆ ಎಂಬುದನ್ನು ಹೇಳಿಕೊಂಡಿದ್ದೇನೆ. ಆತ ಈ ಯುಗದ ಅತ್ಯಂತ ಶ್ರೇಷ್ಠ ಆಟಗಾರ. ಆತನೊಂದಿಗೆ ಯಾರನ್ನೂ ಹೋಲಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ನಾನು ಅವರಿಗೆ ಬೌಲಿಂಗ್ ನಡೆಸಿದ್ದೇನೆ. ಅಂಥಾ ಮನೋಧರ್ಮ, ಆಟದ ಮೇಲಿರುವ ಆತನ ಬದ್ಧತೆ, ಒತ್ತಡವನ್ನು ನಿಭಾಯಿಸುವ ರೀತಿ ಬೇರೆ ಯಾರಿಂದಲೂ ಇಂಥಾ ಒತ್ತಡವನ್ನು ನಿಭಾಯಿಸಲು ಸಾಧ್ಯವಿದೆ ಎಂದು ನನಗೆ ಅನಿಸುತ್ತಿಲ್ಲ" ಎಂದು ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಆಮಿರ್ ಪ್ರತಿಕ್ರಿಯಿಸಿದ್ದಾರೆ.

ಯಾರನ್ನೂ ಕೊಹ್ಲಿ ಜೊತೆಗೆ ಹೋಲಿಸುವುದು ಅಸಾಧ್ಯ
ಮುಂದುವರಿದು ಮಾತನಾಡಿದ ಮೊಹಮ್ಮದ್ ಆಮಿರ್ "ಜನರು ವಿರಾಟ್ ಕೊಹ್ಲಿ ಜೊತೆಗೆ ಬೇರೆ ಬೇರೆ ಆಟಗಾರರನ್ನು ಹೋಲಿಕೆ ಮಾಡಲು ಬಯಸುತ್ತಾರೆ. ಆದರೆ ಕೋಹ್ಲಿಯೊಂದಿಗೆ ಬೇರೆ ಯಾರನ್ನೂ ಹೋಲಿಕೆ ಮಾಡುವುದು ಅಸಾಧ್ಯ. ಪಾಕಿಸ್ತಾನದ ವಿರುದ್ಧದ ಅಜೇಯ 83 ರನ್ ಅವರ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ. ಪಾಕಿಸ್ತಾನದ ಬಳಿಯಿಂದ ಆ ಪಂದ್ಯವನ್ನು ಅವರ ಹೇಗೆ ತಮ್ಮತ್ತ ತೆಗೆದುಕೊಂಡು ಹೋದರು ಎಂಬುದನ್ನು ಎಲ್ಲರೂ ನೋಡಿದ್ದೀರಿ. ದೊಡ್ಡ ಆಟಗಾರ ಎಸಿಕೊಳ್ಳುವುದು ಇಂಥಾ ಆಟಗಳಿಂದಾಗಿಯೇ. ವಿರಾಟ್ ಕೊಹ್ಲಿ ನೀಡಿದ ಆ ಪ್ರದರ್ಶನವನ್ನು ಬೇರೆ ಯಾರಿಂದಲೂ ನೀಡಲು ಸಾಧ್ಯವಿಲ್ಲ" ಎಂದಿದ್ದಾರೆ ಮೊಹಮ್ಮದ್ ಆಮಿರ್.

3ನೇ ಕದನಕ್ಕೆ ಭಾರತ ಸಜ್ಜು
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದು ಟೂರ್ನಿಯಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಮೊದಲಿಗೆ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಬಳಿಕ ನೆದರ್ಲೆಂಡ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಲು ಯಶಸ್ವಿಯಾಗಿದೆ. ಇದೀಗ ಟೀಮ್ ಇಂಡಿಯಾ ಈ ವಿಶ್ವಕಪ್‌ನ ಮೂರನೇ ಕದನಕ್ಕೆ ಸಜ್ಜಾಗಿದ್ದು ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡ ಎದುರಾಳಿಯಾಗಿದೆ. ಭಾನುವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ತಮ್ಮ ಮೂರನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು ಎರಡು ಬಲಿಷ್ಠ ತಂಡಗಳ ನಡುವಿನ ಈ ಕದನ ಸಾಕಷ್ಟು ಕುತೂಹಲ ಕೆರಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications