9 ವರ್ಷಗಳ ದುರದೃಷ್ಟಕ್ಕೆ ಅಂತ್ಯ ಹಾಡಲು ಬಯಸುತ್ತೇವೆ: ರೋಹಿತ್ ಶರ್ಮಾ ಆತ್ಮವಿಶ್ವಾಸದ ಮಾತು

ಭಾನುವಾರ ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಹೈವೋಲ್ಟೇಜ್ ಪಂದ್ಯದ ಮೂಲಕ ಭಾರತ ಈ ಬಾರಿಯ ಟಿ20 ವಿಶ್ವಕಪ್‌ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು ಈ ಬಾರಿಯ ಟೂರ್ನಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ 9 ವರ್ಷಗಳಲ್ಲಿ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿ ಗೆಲ್ಲದಿರುವುದು ಬೇಸರ ಮೂಡಿಸಿದೆ. ಆದರೆ ಅದರಿಂದಾಗಿ ನಮ್ಮಮೇಲಿನ ಒತ್ತಡ ಹೆಚ್ಚಾಗುವುದಿಲ್ಲ ಎಂದು ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಅಭಿಯಾನ ಆರಂಭಕ್ಕೂ ಮುನ್ನ ರೋಹಿತ್ ಸಾಕಷ್ಟು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದು ಆ ಬಗ್ಗೆ ಮಾಹಿತಿ ಇಲ್ಲದೆ ಮುಂದೆ ಓದಿ..

ಕಳೆದ ಟೂರ್ನಿಯಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡಿದ್ದೇವೆ
ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಲೀಗ್ ಹಂತದಿಂದಲೇ ನಿರ್ಗಮಿಸಿದ ಬಗ್ಗೆ ಮಾತನಾಡಿದ್ದಾರೆ. ಆ ಸಂದರ್ಭದಲ್ಲಿ ಯಾವೆಲ್ಲಾ ಅಂಶಗಳು ತಪ್ಪಾಗಿದ್ದವು, ಯಾವ ತಪ್ಪುಗಳನ್ನು ಸರಿ ಮಾಡಬಹುದಾಗಿತ್ತು ಎಂದು ಸಾಕಷ್ಟು ವಿಶ್ಲೇಷಣೆ ನಡೆಸಿದ್ದೇವೆ. ಕಳೆದ ವರ್ಷದ ಸೋಲು ಒತ್ತಡವನ್ನು ಉಂಟು ಮಾಡಬಹುದೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ. ಆದರೆ ಅದನ್ನು ನಾವು ಸವಾಲಾಗಿ ಸ್ವೀಕರಿಸಲಿದ್ದೇವೆ ಎಂದಿದ್ದಾರೆ ರೋಹಿತ್ ಶರ್ಮಾ.

ದುರದೃಷ್ಟಕ್ಕೆ ಅಂತ್ಯಹಾಡಲಿದ್ದೇವೆ
"ಇದು ಒತ್ತಡವಲ್ಲ, ಆದರೆ ಐಸಿಸಿ ಟೂರ್ನಮೆಂಟ್‌ನಲ್ಲಿ ನಾವು ಅಗ್ರ ಸ್ಥಾನದಲ್ಲಿರಬೇಕು ಎಂಬ ಸವಾಲನ್ನು ಹಾಕಿಕೊಂಡಿದ್ದೇವೆ. ಅವಕಾಶಗಳು ಯಾವಾಗಲೂ ಬರುತ್ತವೆ, ಈ ಬಾರಿ ನಾವು ಆ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಲು ಗಮನಕೇಂದ್ರೀಕರಿಸಲಿದ್ದೇವೆ. ಕಳೆದ 9 ವರ್ಷಗಳಿಂದ ನಾವು ಐಸಿಸಿ ಟೂರ್ನಿ ಗೆಲ್ಲದಿರುವುದಕ್ಕೆ ನಾವು ಸವಾಲು ಹಾಕಿಕೊಳ್ಳುತ್ತಿದ್ದೇವೆ. ಈ ಬಾರಿ ಆ ದುರದೃಷ್ಟಕ್ಕೆ ನಾವು ಅಂತ್ಯ ಹಾಡಲು ಬಯಸುತ್ತೇವೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ

ಭಾರತದ ಸಾಧನೆಗೆ ರೋಹಿತ್ ಸಂತಸ
ಇನ್ನು ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದಿಂದ ಹೊರಬಿದ್ದ ಬಳಿಕ ಭಾರತ ತಂಡ ದ್ವಿಪಕ್ಷೀಯ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದೆ. ಈ ಬಗ್ಗೆಯೂ ರೋಹಿತ್ ಶರ್ಮಾ ಮಾತನಾಡಿದ್ದಾರೆ. "ಖಂಡಿತವಾಗಿಯೂ ನಾವು ಉತ್ತಮವಾಗಿ ಪ್ರದರ್ಶನ ನೀಡಿಕೊಂಡು ಬಂದಿದ್ದೇವೆ. ಯಾವೆಲ್ಲಾ ವಿಚಾರಗಳಲ್ಲಿ ತಪ್ಪಾಗಿದೆ ಅದರಲ್ಲಿ ಬದಲಾವಣೆ ಮಾಡಿಕೊಳ್ಳಲು ಬಯಸಿದ್ದೆವು. ಕೆಲ ವಿಚಾರಗಳಲ್ಲಿ ನಮಗೆ ಸರಿ ಮಾಡಿಕೊಳ್ಳುವ ಅವಕಾಶ ದೊರೆತಿದೆ. ಈಗ ನಾವು ನಿಜವಾಗಿಯೂ ಉತ್ತಮ ಸ್ಥಿತಿಯಲ್ಲಿದ್ದೇವೆ" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ವರ್ಷ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಾ ಚುಟುಕು ಮಾದರಿಯ ಎಲ್ಲಾ ದ್ವಿಪಕ್ಷೀಯ ಸರಣಿಯಲ್ಲಿ ಗೆಲುವು ಸಾಧಿಸಿದೆ. ಆದರೆ ಏಷ್ಯಾ ಕಪ್ ಟೂರ್ನಿಯಲ್ಲಿ ಮಾತ್ರ ಭಾರತ ತಂಡ ಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿತ್ತು.

ಭಾನುವಾರ ನಡೆಯಲಿದೆ ಹೈವೋಲ್ಟೇಜ್ ಪಂದ್ಯ
ಈ ಬಾರಿಯ ವಿಶ್ವಕಪ್ ಟೂರ್ನಿಯ ಅತ್ಯಂತ ಕುತೂಹಲಕಾರಿ ಪಂದ್ಯವೆಂದೇ ಉಲ್ಲೇಖಿಸಲಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಅಕ್ಟೋಬರ್ 23 ಭಾನುವಾರದಂದು ಎಂಸಿಜಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡು ತಂಡಗಳ ನಡುವಿನ ಪ್ರದರ್ಶನ ಹೇಗಿರಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಭಾರತ ತಂಡದ ಬೌಲಿಂಗ್ ವಿಭಾಗ ತಂಡಕ್ಕೆ ಕಳವಳ ಮೂಡಿಸಿದ್ದರೆ ಪಾಕಿಸ್ತಾನ ತಂಡ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು ಹೆಚ್ಚಾಗಿ ನಂಬಿಕೊಂಡಿದ್ದು ಮಧ್ಯಮ ಕ್ರಮಾಂಕದ ಆಟಗಾರರ ಪ್ರದರ್ಶನ ಆ ತಂಡಕ್ಕೆ ಆತಂಕ ಮೂಡಿಸಿದೆ. ಇನ್ನು ಪಾಕಿಸ್ತಾನದ ಮತ್ತೊಂದು ಪ್ರಮುಖ ಶಕ್ತಿ ಅದರ ವೇಗದ ಬೌಲಿಂಗ್ ವಿಭಾಗ. ಹೀಗಾಗಿ ಭಾರತದ ಬ್ಯಾಟಿಂಗ್ ವಿಭಾಗ ಹಾಗೂ ಪಾಕಿಸ್ತಾನದ ಬೌಲಿಂಗ್ ವಿಭಾಗದ ಈ ಮುಖಾಮುಖಿ ಎಲ್ಲರ ಕುತೂಹಲ ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications