
ಭಾರತದ ಆರಂಭಿಕರ ವೈಫಲ್ಯ
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಕೇವಲ 5 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ನಂತರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ತಂಡವನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸಿದರಾದರೂ ರೋಹಿತ್ ಶರ್ಮಾ 27 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಇನ್ನು ಈ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾಋ್ ಈ ಪಂದ್ಯದಲ್ಲಿಯೂ ಅಬ್ಬರಿಸುವ ನಿರೀಕ್ಷೆ ಮೂಡಿಸಿದರಾದರೂ ಅವರ ಆಟ 14 ರನ್‌ಗಳಿಗೆ ಅಂತ್ಯವಾಯಿತು.

ಆಸರೆಯಾದ ಕೊಹ್ಲಿ, ಹಾರ್ದಿಕ್
ಆದರೆ ಬಳಿಕ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ ಅಮೋಘ ಜೊತೆಯಾಟದಲ್ಲಿ ಭಾಗಿಯಾದರು. ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿ ಈ ಪಂದ್ಯದಲ್ಲಿಯೂ ಅರ್ಧ ಶತಕ ಸಿಡಿಸಿದರು. 40 ಎಸೆತಗಳನ್ನು ಎದುರಿಸಿದ ಕೊಹ್ಲಿ 50 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಮತ್ತೊಂದು ತುದಿಯಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರದ ಪ್ರದರ್ಶನ ಮುಂದುವರಿದಿತ್ತು. ಕೇವಲ 33 ಎಸೆತಗಳಲ್ಲಿ 63 ರನ್ ಬಾರಿಸಿದ ಹಾರ್ದಿಕ್ ಪಾಂಡ್ಯ 190.91ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಈ ಇನ್ನಿಂಗ್ಸ್‌ನಲ್ಲಿ ಐದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸಿಡಿಸಿದ್ದಾರೆ ಪಾಂಡ್ಯ. ಈ ಭರ್ಜರಿ ಪ್ರದರ್ಶನದ ಕಾರಣದಿಂದಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 168 ರೆನ್‌ಗಳನ್ನು ಗಳಿಸಲು ಸಾಧ್ಯವಾಯಿತು.

ವಿಕೆಟ್ ಕಳೆದುಕೊಳ್ಳದೆ ರನ್ ಬೆನ್ನಟ್ಟಿದ ಇಂಗ್ಲೆಂಡ್
ಇನ್ನು ಭಾರತ ತಂಡ ನೀಡಿದ 169 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ಭಾರತದ ಬೌಲಿಂಗ್ ವಿಭಾಗದ ಮೇಲೆ ಮುಗಿ ಬೀಳುತ್ತಾ ಸಾಗಿತು. ಇಂಗ್ಲೆಂಡ್ ತಂಡದ ಆರಂಭಿಕ ಜೋಡಿಯಾದ ಅಲೆಕ್ಸ್ ಹೇಲ್ಸ್ ಹಾಗೂ ಜೋಸ್ ಬಟ್ಲರ್ ಮೊದಲ ಓವರ್‌ನಿಂದಲೇ ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಸಾಗಿದರು. ಅಂತಿಮ ಹಂತದವರೆಗೂ ಇಂಗ್ಲೆಂಡ್‌ನ ಈ ಜೋಡಿಯನ್ನು ಬೇರ್ಪಡಿಸಲು ಭಾರತೀಯ ಬೌಲರ್‌ಗಳು ಸಂಪೂರ್ಣವಾಗಿ ವಿಫಲವಾದರು. ಅಂತಿವಾಗಿ ಇನ್ನೂ ನಾಲ್ಕು ಓವರ್‌ಗಳು ಬಾಕಿಯಿರುವಂತೆಯೇ ಇಂಗ್ಲೆಂಡ್ ತಂಡ ಪಂದ್ಯದಲ್ಲಿ ಗೆಲುವು ಸಾಧಿಸಿತು. ಜೋಸ್ ಬಟ್ಲರ್ 49 ಎಸೆತಗಳಲ್ಲಿ 80 ರನ್ ಬಾರಿಸಿದರೆ ಅಲೆಕ್ಸ್ ಹೇಲ್ಸ್ 86 ರನ್‌ಗಳನ್ನು ಗಳಿಸಿದರು. ಈ ಮೂಲಕ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದಿದೆ.

ಇತ್ತಂಡಗಳ ಆಡುವ ಬಳಗ
ಭಾರತ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್(ವಿಕೆಟ್ ಕೀಪರ್), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಶ್‌ದೀಪ್ ಸಿಂಗ್
ಇಂಗ್ಲೆಂಡ್ ಆಡುವ ಬಳಗ: ಜೋಸ್ ಬಟ್ಲರ್(ವಿಕೆಟ್ ಕೀಪರ್/ ನಾಯಕ), ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್


Click it and Unblock the Notifications
