ಪಾಕ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಆಟಗಾರನನ್ನು ಮುಂದಿನ ಪಂದ್ಯದಿಂದ ಹೊರಗಿಡಲು ಗವಾಸ್ಕರ್ ಸಲಹೆ

ಟೀಮ್ ಇಂಡಿಯಾ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧದ ರೋಮಾಂಚಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ನೆದರ್ಲೆಂಡ್ಸ್ ತಂಡದ ವಿರುದ್ಧ ಭಾರತ ತನ್ನ ಎರಡನೇ ಪಂದ್ಯವನ್ನಾಡಲಿದ್ದು ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.
ಅಚ್ಚರಿಯೆಂದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತದ ಪರವಾಗಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಆಟಗಾರನ್ನೇ ಸುನಿಲ್ ಗವಾಸ್ಕರ್ ಮುಂದಿನ ಪಂದ್ಯದಿಂದ ಹೊರಗಿಡಲು ಸಲಹೆ ನೀಡಿದ್ದಾರೆ. ಆ ಆಟಗಾರನ ಬದಲಿಗೆ ಮತ್ತೋರ್ವ ಪ್ರತಿಭಾನ್ವಿತ ಆಲ್‌ರೌಂಡರ್‌ಗೆ ಅವಕಾಶ ನೀಡುವುದು ಉತ್ತಮ ನಿರ್ಧಾರವಾಗಲಿದೆ ಎಂದಿದ್ದಾರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್. ಹಾಗಾದರೆ ಸುನಿಲ್ ಗವಾಸ್ಕರ್ ಹೀಗಂದಿದ್ದು ಯಾಕೆ? ಯಾವ ಆಟಗಾರನಿಗೆ ವಿಶ್ರಾಂತಿ ನೀಡಲು ಗವಾಸ್ಕರ್ ಸಲಹೆ ನೀಡಿದ್ದಾರೆ? ಮುಂದೆ ಓದಿ..

ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಿ ಎಂದ ಗವಾಸ್ಕರ್
ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಗುರುವಾರ ನಡೆಯಲಿರುವ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ನೀಡಲು ಹೇಳಿದ್ದು ಬೇರೆ ಯಾರಿಗೂ ಅಲ್ಲ. ತಂಡದ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾಗೆ. "ಹಾರ್ದಿಕ್ ಪಾಂಡ್ಯಾಗೆ ಮುಂದಿನ ಪಂದ್ಯದಲ್ಲಿ ವಿಶ್ರಾಂತಿ ನೀಡಿದರೆ ಉತ್ತಮ ನಿರ್ಧಾರವಾಗಬಹುದು. ಯಾಕೆಂದರೆ ಭಾನುವಾರ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ಎದುರಾಳಿಯಾಗಿರಲಿದೆ. ಅದು ಕೂಡ ಭಾರತದ ಪಾಲಿಗೆ ದೊಡ್ಡ ಸವಾಲಾಗಿರುತ್ತದೆ. ಆ ಪಂದ್ಯಕ್ಕೆ ಹಾರ್ದಿಕ್ ಹೊಸತನದೊಂದಿಗೆ ಕಣಕ್ಕಿಲಿಯಬೇಕು. ಆದರೆ ಇದು ಚುಟುಕು ಮಾದರಿಯ ಪಂದ್ಯವಾಗಿರುವ ಕಾರಣ ಯಾವ ತಂಡವನ್ನು ಕೂಡ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಹಾರ್ದಿಕ್ ಪಾಂಡ್ಯ ಬದಲಿಗೆ ದೀಪಕ್ ಹೂಡ ಉತ್ತಮ ಆಯ್ಕೆ
ಇನ್ನು ಮುಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಾಗೆ ವಿಶ್ರಾಂತಿ ನೀಡಿದರೆ ಯಾವ ಆಟಗಾರ ಬದಲಿಯಾಗಿ ಆಡುವುದು ಸೂಕ್ತ ಎಂಬ ವಿಚಾರವಾಗಿಯೂ ಗವಾಸ್ಕರ್ ಉತ್ತರಿಸಿದ್ದಾರೆ. "ನನ್ನ ಪ್ರಕಾರ ಹಾರ್ದಿಕ್ ಪಾಂಡ್ಯಾಗೆ ವಿಶ್ರಾಂತಿ ನೀಡಿದರೆ ಆ ಸ್ಥಾನದಲ್ಲಿ ದೀಪಕ್ ಹೂಡಾಗೆ ಅವಕಾಶ ನೀಡುವುದು ಉತ್ತಮ. ಅದಕ್ಕೆ ಕಾರಣ ಪಾಂಡ್ಯ ಇಲ್ಲದಿದ್ದರೆ ದಿನೇಶ್ ಕಾರ್ತಿಕ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಾಗುತ್ತದೆ. ಇದು ಬೇಗನೆ ವಿಕೆಟ್ ಉರುಳಿದರೆ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಹಿನ್ನಡೆಯಾಗಬಹುದು" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಪಾಕಿಸ್ತಾನದ ವಿರುದ್ಧ ಹಾರ್ದಿಕ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ
ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಮೊದಲಿಗೆ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಪಾಕಿಸ್ತಾನದ ಮಧ್ಯಮ ಕ್ರಮಾಂಕಕ್ಕೆ ಆಘಾತ ನೀಡಿದ್ದರು. ಪಾಕಿಸ್ತಾನದ ಮಧ್ಯಮ ಕ್ರಮಾಂಖದ ಮೂರು ವಿಕೆಟ್ ಕಿತ್ತು ಹಾರ್ದಿಕ್ ಪಾಕ್ ತಂಡಕ್ಕೆ ಹಿನ್ನಡೆಯುಂಟು ಮಾಡಿದ್ದರು. ಅದಾದ ಬಳಿಕ ಬ್ಯಾಟಿಂಗ್‌ನಲ್ಲಿ ತಂಡ ಕನಿಷ್ಠ ಮೊತ್ತಕ್ಕೆ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿದ್ದಾಗ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಸೇರಿಕೊಂಡು ಅಮೋಘ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಈ ಮೂಲಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ ಹಾರ್ದಿಕ್ ಪಾಂಡ್ಯ.

ಮುಂದಿನ ಪಂದ್ಯಕ್ಕೆ ಸಜ್ಜಾದ ಟೀಮ್ ಇಂಡಿಯಾ
ಪಾಕಿಸ್ತಾನದ ವಿರುದ್ಧ ಸಾಧಿಸಿದ ರೋಚಕ ಗೆಲುವು ಭಾರತಕ್ಕೆ ಸಹಜವಾಗಿಯೇ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಯಾವುದೇ ಹಂತದಿಂದಲೂ ಮೇಲೇಳುವ ಹುಮ್ಮಸ್ಸು ತಂಡಕ್ಕೆ ದೊರೆತಿರುವುದು ಮುಂದಿನ ಪಂದ್ಯಗಳಿಗೆ ಹುರುಪು ಮೂಡಿಸಿದೆ. ಭಾರತ ತನ್ನ ಎರಡನೇ ಪಂದ್ಯವನ್ನು ನೆದರ್ಲೆಂಡ್ಸ್ ತಂಡದ ವಿರುದ್ಧ ಆಡಲಿದ್ದು ಆ ಪಂದ್ಯಕ್ಕೆ ಸಿದ್ಧತೆ ನಡೆಸಿಕೊಂಡಿದೆ. ಬಳಿಕ ಮುಂದಿನ ಭಾನುವಾರ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದ್ದು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಹಣಾಹಣಿ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications