
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಭಾರತ ತಮ್ಮ ಮೊದಲ ಪಂದ್ಯವನ್ನು ಈಗಾಗಲೇ ಆಡಿದ್ದು ಎರಡನೇ ಪಂದ್ಯಕ್ಕಾಗಿ ಸಿಡ್ನಿಗೆ ತೆರಳಿದೆ. ಆದರೆ ಸಿಡ್ನಿಯಲ್ಲಿ ಆಟಗಾರರಿ ಅಭ್ಯಾಸದ ಬಳಿಕ ನೀಡಿರುವ ಆಹಾರದ ಬಗ್ಗೆ ಆಟಗಾರರು ಅಸಮಾಧಾವನ್ನು ವ್ಯಕ್ತಪಡಿಸಿದ್ದು ನೆಟ್ ಅಭ್ಯಾಸಕ್ಕೂ ಸೂಕ್ತ ವ್ಯವಸ್ಥೆಗಳಿಲ್ಲ ಎಂಬ ಬಗ್ಗೆ ಕಿಡಿ ಕಾರಿದ್ದಾರೆ ಎನ್ನಲಾಗಿದೆ.
ಬಿಸಿಸಿಐ ಮೂಲಗಳು ಈ ಬಗ್ಗೆ ಮಾಹಿತಿನ್ನು ನೀಡಿದೆ. "ಭಾರತ ತಂಡಕ್ಕೆ ನೀಡಲಾದ ಆಹಾರ ಗುಣಮಟ್ಟದ್ದಾಗಿರಲಿಲ್ಲ. ಕೇವಲ ಸ್ಯಾಂಡ್‌ವಿಚ್‌ಗಳನ್ನು ಮಾತ್ರವೇ ನೀಡಲಾಗಿತ್ತು. ಅಲ್ಲದೆ ಸಿಡ್ನಿಯಲ್ಲಿ ಐಸಿಸಿ ನೀಡಿದ ಆಹಾರ ತಣ್ಣಗಿತ್ತು ಹಾಗೂ ಚೆನ್ನಾಗಿರಲಿಲ್ಲ ಎಂದು ಆಟಗಾರರು ಹೇಳಿದ್ದಾರೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.
ಟಿ20 ವಿಶ್ವಕಪ್ 2022 ಸಂದರ್ಭದಲ್ಲಿ ಐಸಿಸಿಯೇ ಆಹಾರಗಳನ್ನು ಒದಗಿಸುತ್ತದೆ ಎಂಬುದು ಗಮನಾರ್ಹ ಅಂಶ. ಆದರೆ ಐಸಿಸಿ ಊಟದ ಬಳಿಕ ಯಾವುದೇ ಬಿಸಿ ಆಹಾರವನ್ನು ಒದಗಿಸುತ್ತಿಲ್ಲ. ಇನ್ನು ದ್ವಿಪಕ್ಷೀಯ ಸರಣಿಗಳ ಸಂದರ್ಭದಲ್ಲಿ ಆತಿಥೇಯ ರಾಷ್ಟ್ರಗಳೇ ಆಹಾರ ಒದಗಿಸುವ ಜವಾಬ್ಧಾರಿ ವಹಿಸಿಕೊಂಡಿರುತ್ತದೆ.
ಅಭ್ಯಾಸದ ವ್ಯವಸ್ಥೆ ಬಗ್ಗೆಯೂ ಅಸಮಾಧಾನ: ಇನ್ನು ಟೀಮ್ ಇಂಡಿಯಾ ಆಟಗಾರರಿಗೆ ಸಿಡ್ನಿಯಲ್ಲಿ ಅಭ್ಯಾಸ ನಡೆಸಲು ಮಾಡಿರುವ ವ್ಯವಸ್ಥೆ ಬಗ್ಗೆಯೂ ಆಟಗಾರರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಸಿಡ್ನಿ ನಗರದ ಹೊರವಲಯದಲ್ಲಿ 45 ನಿಮಿಷಗಳಷ್ಟು ದೂರದಲ್ಲಿರುವ ಬ್ಲಾಕ್‌ಟೌನ್‌ನಲ್ಲಿ ಭಾರತ ತಂಡದ ಅಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಭಾರತ ತಂಡದ ಆಟಗಾರರು ಅಭ್ಯಾಸದಲ್ಲಿ ಭಾಗಿಯಾಗಿರಲಿಲ್ಲ.
ಬಿಸಿಸಿಐ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದೆ. "ಟೀಮ್ ಇಂಡಿಯಾ ಆಟಗಾರರು ಅಭ್ಯಾಸದಲ್ಲಿ ಭಾಗಿಯಾಗಿರಲಿಲ್ಲ. ಅವರಿಗೆ 45 ನಿಮಿಷಗಳಷ್ಟು ದೂರದಲ್ಲಿರುವ ಬ್ಲಾಕ್‌ರ್ಟನ್‌ನಲ್ಲಿ ಅಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗಿತ್ತು" ಎಂದಿದ್ದಾರೆ. ಭಾರತ ತನ್ನ ಎರಡನೇ ಪಂದ್ಯವನ್ನು ನೆದರ್ಲೆಂಡ್ಸ್ ವಿರುದ್ಧ ಗುರುವಾರ ಆಡಲಿದ್ದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ.