
ಟೀಂ ಇಂಡಿಯಾ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ರೇಸ್‌ನಲ್ಲಿ ದೊಡ್ಡ ಮುನ್ನಡೆ ಸಾಧಿಸಿದೆ. ಗ್ರೂಪ್ 2 ರಲ್ಲಿ ಇನ್ನೂ ಯಾವ ತಂಡವೂ ಸೆಮಿಫೈನಲ್‌ಗೆ ಅರ್ಹತೆ ಪಡೆದಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ಇನ್ನೂ ಸೆಮಿಫೈನಲ್ ತಲುಪುವ ಅವಕಾಶ ಇದೆ.
ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿರುವುದರಿಂದ ಸೆಮಿಫೈನಲ್‌ನಲ್ಲಿ ಪೈಪೋಟಿ ಸಾಕಷ್ಟು ಹೆಚ್ಚಾಗಿದೆ. ಭಾರತ ತನ್ನ ಕೊನೆಯ ಸೂಪರ್ 12 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆದ್ದರೆ, ಗ್ರೂಪ್ 2 ರಲ್ಲಿ ಅಗ್ರಸ್ಥಾನಿಗಳಾಗಿ ಸೆಮಿಫೈನಲ್ ತಲುಪಲಿದ್ದು, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಒಂದು ವೇಳೆ ಮೆಲ್ಬೋರ್ನ್ ಅಂಗಳದಲ್ಲಿ ನಡೆಯುವ ಪಂದ್ಯ ಮಳೆಯಿಂದ ರದ್ದಾದರೆ, ಭಾರತದ ಸೆಮಿಫೈನಲ್ ಲೆಕ್ಕಾಚಾರ ಹೇಗಿರಲಿದೆ ಎನ್ನುವದನ್ನು ತಿಳಿಯಬೇಕು.
ಈ ವರ್ಷ ಟಿ20 ವಿಶ್ವಕಪ್‌ನಲ್ಲಿ ಮಳೆಯು ದೊಡ್ಡ ವಿಲನ್ ಆಗಿದ್ದು, ಅನೇಕ ಪಂದ್ಯಗಳು ಮಳೆಯಿಂದ ರದ್ದಾಗಿವೆ. ಗುಂಪು 1 ರಲ್ಲಿ ಮಳೆಯಿಂದಾಗಿ ಪ್ರಮುಖ ಪಂದ್ಯಗಳೇ ರದ್ದಾಗಿದ್ದವು, ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದು, ಆಸ್ಟ್ರೇಲಿಯಾ ಈಗ ಸೆಮಿಫೈನಲ್‌ನಿಂದಲೇ ಹೊರಬಿದ್ದಿದೆ. ಗುಂಪು 2ರಲ್ಲು ಮಳೆಯಿಂದಾಗಿ ಕೆಲವು ಪಂದ್ಯಗಳು ಮಳೆಯಿಂದ ರದ್ದಾಗಿವೆ.

ಪಂದ್ಯ ರದ್ದಾದರೂ ಸೆಮಿಫೈನಲ್ ಪ್ರವೇಶಿಸುವುದು ಖಚಿತ
ಗ್ರೂಪ್ 2 ರಲ್ಲಿ ಭಾರತ ಮೂರು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡೂ ತಂಡಗಳು 4 ಪಾಯಿಂಟ್ ಹೊಂದಿದ್ದರೂ, ನೆಟ್‌ರನ್‌ರೇಟ್ ಆಧಾರದ ಮೇಲೆ ಪಾಕಿಸ್ತಾನ 3ನೇ ಸ್ಥಾನದಲ್ಲಿದ್ದು, ಬಾಂಗ್ಲಾದೇಶ 4ನೇ ಸ್ಥಾನದಲ್ಲಿದೆ.
ಒಂದು ವೇಳೆ ಮಳೆಯಿಂದಾಗಿ ಜಿಂಬಾಬ್ವೆ ವಿರುದ್ಧದ ಪಂದ್ಯವು ಸಂಪೂರ್ಣವಾಗಿ ರದ್ದಾದರೆ, ಉಭಯ ತಂಡಗಳು ತಲಾ ಒಂದು ಪಾಯಿಂಟ್ ಹಂಚಿಕೊಳ್ಳುತ್ತವೆ. ಹೀಗಾದಲ್ಲಿ, ಭಾರತ 7 ಪಾಯಿಂಟ್ ಪಡೆಯಲಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಲಿದೆ. ಅಂತಹ ಸನ್ನಿವೇಶದಲ್ಲಿ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ.

ದಕ್ಷಿಣ ಆಫ್ರಿಕಾ ಗೆದ್ದರೆ ಪಾಕ್, ಬಾಂಗ್ಲಾ ಹೊರಕ್ಕೆ
ಆದರೆ, ದಕ್ಷಿಣ ಆಫ್ರಿಕಾ ನೆದರ್ಲ್ಯಾಂಡ್ಸ್ ವಿರುದ್ಧ ಜಯ ಗಳಿಸಿದರೆ ಅಂಕಪಟ್ಟಿಯಲ್ಲಿ ಅದು ಅಗ್ರಸ್ಥಾನಕ್ಕೇರಲಿದೆ. ದಕ್ಷಿಣ ಆಫ್ರಿಕಾ ಭಾರತಕ್ಕಿಂತ ಉತ್ತಮ ರನ್ ರೇಟ್ ಹೊಂದಿದೆ. ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಅದು ನ್ಯೂಜಿಲೆಂಡ್ ವಿರುದ್ಧ ಸ್ಪರ್ಧಿಸಲಿದೆ.
ದಕ್ಷಿಣ ಆಫ್ರಿಕಾ ನೆದರ್ಲ್ಯಾಂಡ್ಸ್ ವಿರುದ್ಧ ಸೋತರೆ ಮಾತ್ರ ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಸೆಮಿಫೈನಲ್ ತಲುಪಲು ಅವಕಾಶ ಸಿಗಲಿದೆ. ಒಂದು ವೇಳೆ ನಾಳೆ ದಕ್ಷಿಣ ಆಫ್ರಿಕಾ ಗೆದ್ದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದ ಹೊರಬೀಳಲಿವೆ.
ಟಿ 20 ವಿಶ್ವಕಪ್‌ನಲ್ಲಿ ಯಾವುದೇ ಗುಂಪು ಪಂದ್ಯಗಳಿಗೆ ಯಾವುದೇ ಮೀಸಲು ದಿನ ನಿಗದಿ ಮಾಡಿಲ್ಲ. ಸೆಮಿಫೈನಲ್ ಮತ್ತು ಫೈನಲ್ ಮಾತ್ರ ಮಳೆಯ ಸಂದರ್ಭದಲ್ಲಿ ಮೀಸಲು ದಿನವನ್ನು ಪ್ರಚೋದಿಸುತ್ತದೆ.