ಧರ್ಮಶಾಲ, ಅ.04: ಟೀಂ ಇಂಡಿಯಾದ ಟಿ20 ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಬಾರಿಸಿದ ಭರ್ಜರಿ ಶತಕ ಹೊಸ ದಾಖಲೆ ಬರೆದಿದೆ. ಈ ಶತಕ ತಂಡದ ಗೆಲುವಿಗೆ ಕೊಡುಗೆ ನೀಡದಿದ್ದರೂ ವೈಯಕ್ತಿಕ ಸಾಧನೆಗೆ ಕಾರಣವಾಗಿದೆ. ಸುರೇಶ್ ರೈನಾ ನಂತರ ರೋಹಿತ್ ಶರ್ಮ ಅವರು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್ ಪಿ ಸಿಎ) ಮೈದಾನದಲ್ಲಿ ಶುಕ್ರವಾರ(ಅಕ್ಟೋಬರ್ 2)ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ ಶರ್ಮ ಅವರು 66 ಎಸೆತಗಳಲ್ಲಿ 106 ರನ್ (12X4, 5X6) ಬಾರಿಸಿದರು. ಇದು ಅವರ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿದೆ. [ಟಾಸ್ ಸೋತು, ಮ್ಯಾಚನ್ನೂ ಸೋತ ಭಾರತ]

28 ವರ್ಷ ವಯಸ್ಸಿನ ರೋಹಿತ್ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಈ ರೀತಿ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎನಿಸಿದರು. ಇದಕ್ಕೂ ಮುನ್ನ ಸುರೇಶ್ ರೈನಾ ಅವರು ದಕ್ಷಿಣ ಆಫ್ರಿಕಾದ ವಿರುದ್ಧವೇ 2010ರಲ್ಲಿ 101ರನ್ ಗಳಿಸಿದ್ದರು.
ಈಗ 28 ವರ್ಷ ವಯಸ್ಸಿನ ಈ ಇಬ್ಬರು ಆಟಗಾರರು ಎಲ್ಲಾ ಬಗೆಯ ಕ್ರಿಕೆಟ್ ಮಾದರಿಯಲ್ಲಿ ಶತಕ ಬಾರಿಸಿರುವ ಹಾಲಿ ಟೀಂ ಇಂಡಿಯಾ ಆಟಗಾರರೆನಿಸಿದ್ದಾರೆ. ರೋಹಿತ್ ಹಾಗೂ ರೈನಾ ಅವರು ಟೆಸ್ಟ್, ಏಕದಿನ ಕ್ರಿಕೆಟ್ ಹಾಗೂ ಟಿ20 ಪಂದ್ಯಗಳಲ್ಲಿ ಶತಕ ಬಾರಿಸಿದ್ದಾರೆ.
ರೈನಾ ಅವರು 1 ಟೆಸ್ಟ್, 5 ಏಕದಿನ ಕ್ರಿಕೆಟ್ ಹಾಗೂ 1 ಟಿ20 ಅಂತಾರಾಷ್ಟ್ರೀಯ ಶತಕ ಗಳಿಸಿದ್ದಾರೆ. ರೋಹಿತ್ ಅವರು 2 ಟೆಸ್ಟ್, 7 ಏಕದಿನ ಕ್ರಿಕೆಟ್ ಹಾಗೂ 1 ಟಿ20 ಶತಕ ಬಾರಿಸಿದ್ದಾರೆ. ಮುಂಬೈ ಮೂಲದ ಬಲಗೈ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಅವರು ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ (264ರನ್) ಬಾರಿಸಿರುವ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)