ಭಾರತದ ಪರ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿರುವ ಸ್ಟಾರ್ ಆಟಗಾರ ಶರತ್ ಕಮಲ್ ಬುಧವಾರ (ಮಾರ್ಚ್ 5) ದಂದು ನಿವೃತ್ತಿ ಘೋಷಿಸಿದ್ದಾರೆ. ಇದೇ 26 ರಿಂದ 30ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ ವಿಶ್ವ ಟೇಬಲ್ ಟೆನಿಸ್ ಟೂರ್ನಿಯೇ ಅವರ ಕೊನೆಯ ಟೂರ್ನಿ ಆಗಿರಲಿದೆ ಎಂದು ಶರತ್ ಕಮಲ್ ತಿಳಿಸಿದ್ದಾರೆ. ಇವರು ಒಲಿಂಪಿಕ್ಸ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಚೆನ್ನೈನಲ್ಲಿ ತಮ್ಮ ಟೇಬಲ್ ಟೆನಿಸ್ ಆಟವನ್ನು ಆರಂಭಿಸಿದ ಶರತ್ ಕಮಲ್ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವನ್ನು ಸಹ ಚೆನ್ನೈನಲ್ಲಿ ಆಡಲಿದ್ದಾರೆ. ಶರತ್ ತಮ್ಮ ವೃತ್ತಿ ಜೀವನದ ಆರಂಭವನ್ನು ಚೆನ್ನೈನಲ್ಲಿ ಆರಂಭಿಸಿದ್ದರು. ಈ ಬಗ್ಗೆ ಮಾತನಾಡಿರುವ ಶರತ್ ಕಮಲ್, ನಾನು ನನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಚೆನ್ನೈನಲ್ಲಿ ಆಡಿದ್ದೇನೆ ಮತ್ತು ನನ್ನ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿಯೇ ಆಡುತ್ತೇನೆ ಎಂದು ಹೇಳಿದ್ದಾರೆ.

ವೃತ್ತಿಪರ ಆಟಗಾರನಾಗಿ ಇದು ನನ್ನ ಕೊನೆಯ ಟೂರ್ನಿ. ಹಲವು ಪ್ರತಿಷ್ಠಿತ ಗೇಮ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಮ್ಮೆ ನನಗಿದೆ. ನಾನು ಒಲಿಂಪಿಕ್ಸ್ ಪದಕವನ್ನು ಗೆಲ್ಲುವಲ್ಲಿ ಸಫಲವಾಗಲಿಲ್ಲ ಎಂಬ ಬೇಸರ ನಿಶ್ವಿತವಾಗಿ ಕಾಡುತ್ತಿದೆ. ಮುಂಬರುವ ಯುವ ಆಟಗಾರರು ನನ್ನ ಕನಸನ್ನು ನನಸಾಗಿಸುತ್ತಾರೆ ಎಂದು ಶರತ್ ಕಮಲ್ ಹೇಳಿದ್ದಾರೆ.
ಶರತ್ ಕಮಲ್ ಒಬ್ಬ ಪ್ರತಿಭಾನ್ವಿತ ಟೇಬಲ್ ಟೆನಿಸ್ ಆಟಗಾರ. ಇವರು 2022ರಲ್ಲಿ ರ್ಮಿಂಗ್ಹ್ಯಾಮ್ ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಸಾಧನೆಯನ್ನು ಮಾಡಿದ್ದರು. ಶರತ್ ಕಮಲ್ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಒಟ್ಟು 7 ಬಂಗಾರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ 3 ಬೆಳ್ಳಿ, 3 ಕಂಚಿನ ಪದಕಕ್ಕೆ ಶರತ್ ಕೊರಳು ಒಡ್ಡಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಅತಿ ಹೆಚ್ಚು ಪದಕಗಳನ್ನು ಗೆದ್ದವರಲ್ಲಿ ಶರತ್ ಕಮಲ್ ಮೂರನೇ ಸ್ಥಾನದಲ್ಲಿದ್ದಾರೆ. ವಿಶ್ವದ ಅತ್ಯನ್ನತ ಶ್ರೇಯಾಂಕಿತರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ 42 ವರ್ಷದ ಶರತ್ ಕಮಲ್ ಅವರ ಸಾಧನೆ ಅಮೋಘ.

ಶರತ್ ಕಮಲ್ ಏಷ್ಯನ್ ಗೇಮ್ಸ್‌ನಲ್ಲಿ 2 ಕಂಚಿನ ಪದಕ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 4 ಕಂಚಿನ ಪದಕದ ಸಾಧನೆ ಮಾಡಿದ್ದಾರೆ.
ಶರತ್ ಕಮಲ್ ಅವರ ಅಮೋಘ ಕ್ರೀಡಾ ಸಾಧನೆಗೆ ಹಲವು ಪ್ರಶಸ್ತಿಗಳು ಸಂದಿವೆ. ಭಾರತದಲ್ಲಿ ಕ್ರೀಡಾಪಟುವಿಗೆ ನೀಡುವ ಅತ್ಯುನ್ನತ ಪ್ರಶಸ್ತಿ ಖೇಲ್ ರತ್ನ ಅವಾರ್ಡ್, ಅರ್ಜುನ್ ಪ್ರಶಸ್ತಿಗಳು ಸಂದಿವೆ. ಇನ್ನು ಇವರ ಸ್ಥಿರ ಪ್ರದರ್ಶನದ ಫಲವಾಗಿ ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ನಾಗರೀಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮ ಶ್ರೀ ಸಹ ಸಂದಿದೆ.