Tamim Iqbal: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಒಂದೇ ದಿನದಲ್ಲಿ ನಿರ್ಧಾರ ವಾಪಸ್ ಪಡೆದ ತಮೀಮ್ ಇಕ್ಬಾಲ್!
ಗುರುವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ಬಾಂಗ್ಲಾದೇಶ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್, ಇಂದು (ಶುಕ್ರವಾರ, ಜುಲೈ 7) ತಮ್ಮ ನಿರ್ಧಾರವನ್ನು ವಾಪಸ್ ತೆಗೆದುಕೊಂಡರು.
ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸೀನಾ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್ ಪಾಪೋನ್ ಅವರನ್ನು ಭೇಟಿಯಾದ ನಂತರ, ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ತಮೀಮ್ ಇಕ್ಬಾಲ್ ತಮ್ಮ ನಿವೃತ್ತಿಯನ್ನು ಹಿಂಪಡೆಯಲು ನಿರ್ಧರಿಸಿದರು.

ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಪಾಪೋನ್ ಮತ್ತು ಮಾಜಿ ನಾಯಕ ಮಶ್ರಫೆ ಮೊರ್ತಜಾ ಅವರ ಸಮ್ಮುಖದಲ್ಲಿ ತಮೀಮ್ ಇಕ್ಬಾಲ್ ಅವರು ನಿವೃತ್ತಿ ವಾಪಸ್ ನಿರ್ಧಾರದ ಬಗ್ಗೆ ಸ್ವತಃ ಮಾಧ್ಯಮಗಳಿಗೆ ಖಚಿತಪಡಿಸಿದರು. ಕ್ರಿಕೆಟ್‌ಗೆ ಮರಳುವ ಮುನ್ನ ತಮೀಮ್ ಒಂದೂವರೆ ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವುದಾಗಿ ತಿಳಿಸಿದರು.
"ನಾನು ಎಲ್ಲರನ್ನೂ ಧಿಕ್ಕರಿಸಬಲ್ಲೆ, ಆದರೆ ಪ್ರಧಾನಿಯವರನ್ನಲ್ಲ. ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಪಾಪೋನ್ ಭಾಯಿ ಕೂಡ ನನ್ನೊಂದಿಗೆ ಸಭೆಯಲ್ಲಿ ಹಾಜರಿದ್ದರು, ಮುಶ್ರಫೆ ಮೊರ್ತಜಾ ಭಾಯಿ ನನ್ನನ್ನು ಕರೆದುಕೊಂಡು ಬಂದಿದ್ದರು," ಎಂದು ತಮೀಮ್ ಇಕ್ಬಾಲ್ ಮಾಧ್ಯಮಗಳಿಗೆ ತಿಳಿಸಿದರು.
"ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ನನ್ನ ನಿರ್ಧಾರವನ್ನು ಬದಲಾಯಿಸುವಂತೆ ವಿನಂತಿಸಿಕೊಂಡರು. ಅವರು ನನಗೆ ಒಂದೂವರೆ ತಿಂಗಳ ರಜೆ ನೀಡಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ಮುಕ್ತನಾಗಿದ್ದೇನೆ," ಎಂದು ತಮೀಮ್ ಹೇಳಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅನಿರೀಕ್ಷಿತ ನಿವೃತ್ತಿಯ ಕುರಿತು ಚರ್ಚಿಸಲು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಗೊನೊ ಭಾಬನ್‌ನಲ್ಲಿ ಬಾಂಗ್ಲಾದೇಶ ಪ್ರಧಾನಿಯನ್ನು ಭೇಟಿ ಮಾಡಲು ಪತ್ನಿಯೊಂದಿಗೆ ತಮೀಮ್ ಇಕ್ಬಾಲ್ ಬಂದರು.
ಅಫ್ಘಾನಿಸ್ತಾನ ವಿರುದ್ಧ ಮೊದಲ ಪಂದ್ಯ ಸೋತ ನಂತರ, ತಮೀಮ್ ಇಕ್ಬಾಲ್ ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆಘಾತಕಾರಿ ಬೆಳವಣಿಗೆಯು ಇಡೀ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿಬೀಳಿಸಿತ್ತು.
ಐಸಿಸಿ ಏಕದಿನ ವಿಶ್ವಕಪ್ 2023 ಪಂದ್ಯಾವಳಿಗೆ ಕೇವಲ ಮೂರು ತಿಂಗಳ ಇರುವ ಮೊದಲೇ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೂ ಶಾಕ್ ಆಗಿತ್ತು. ಸದ್ಯ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಲಿಟ್ಟನ್ ದಾಸ್ ಅವರನ್ನು ಹಂಗಾಮಿ ನಾಯಕರಾಗಿ ನೇಮಿಸಲಾಗಿದೆ.
ತಮೀಮ್ ಇಕ್ಬಾಲ್ ನಿವೃತ್ತಿಗೆ ಯಾವುದೇ ಅಧಿಕೃತ ಕಾರಣಗಳಿರಲಿಲ್ಲ. ಶುಕ್ರವಾರ ಅವರು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹಲವು ವರದಿಗಳು ತಿಳಿಸಿದ್ದವು. ತಮ್ಮ ನಿವೃತ್ತಿ ನಿರ್ಧಾರದ ಕುರಿತು ತಮೀಮ್ ಇಕ್ಬಾಲ್ ಅವರು ಪ್ರಧಾನಿ ಜತೆ ಚರ್ಚಿಸಲಿದ್ದಾರೆ ಎಂದು ವರದಿಯಾಗಿದ್ದವು.
ಪ್ರಧಾನಿಯೊಂದಿಗಿನ ಮಾತುಕತೆ ನಂತರ, 34 ವರ್ಷದ ತಮೀಮ್ ಇಕ್ಬಾಲ್ ದಿಢೀರ್ ಬೆಳವಣಿಗೆಯಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡರು. ಇಕ್ಬಾಲ್ ಜೊತೆ ಅವರ ಪತ್ನಿ, ಮಾಜಿ ನಾಯಕ ಮುಶ್ರಫೆ ಮೊರ್ತಜಾ ಮತ್ತು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಸಹ ಇದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications