
ಬೆಂಗಳೂರು: ಕೊರೊನಾ ಕಾಟದಿಂದ 2020ರ ಕ್ರೀಡಾ ವೇಳಾಪಟ್ಟಿಗಳು ಆಚೀಚೆ ಆಗಿದ್ದು, ರದ್ದಾಗಿದ್ದು, ಮುಂದೂಡಲ್ಪಟ್ಟಿದ್ದು ಎಲ್ಲವೂ ನಿಜ. ಆದರೆ 2020ರ ಇಸವಿ ಅತ್ಯಂತ ಚುಕುಟು ಕ್ರಿಕೆಟ್ ಮಾದರಿಯೆನಿಸಿರುವ ಟಿ20ಐನಲ್ಲಿ ಭಾರತದ ಪಾಲಿಗೆ ಬೆಸ್ಟ್ ಸೀಸನ್ ಎನಿಸಿದೆ. ಈ ವರ್ಷ ಟಿ20ಐನಲ್ಲಿ ಟೀಮ್ ಇಂಡಿಯಾ ಗೆಲುವಿನ ದಾಖಲೆ ಬರೆದಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಪಡೆ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಸೋತಿತ್ತು. ಆದರೆ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 2-1ರ ಜಯ ದಾಖಲಿಸಿತ್ತು. ಈ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾದ ಹೆಸರಿನಲ್ಲಿ ದಾಖಲೆ ಸೃಷ್ಠಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿ ಗೆಲುವಿನೊಂದಿಗೆ ಭಾರತ ತಂಡ ಸತತ 3 ಟಿ20ಐ ಸರಣಿಗಳನ್ನು ಗೆದ್ದಂತಾಗಿದೆ. ಮತ್ತು ಸತತ 9 ಟಿ20ಐ ಪಂದ್ಯಗಳನ್ನು ಗೆದ್ದಂತಾಗುತ್ತದೆ. ಆರಂಭದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20ಐ ಸರಣಿಯನ್ನು 2-0ಯಿಂದ ಗೆದ್ದಿತ್ತು. ಆ ಬಳಿಕ ನ್ಯೂಜಿಲೆಂಡ್ ವಿರುದ್ಧ 5-0ಯಿಂದ, ಆಸ್ಟ್ರೇಲಿಯಾ ವಿರುದ್ಧ 2-1ರಿಂದ ಸರಣಿ ಗೆದ್ದಿದೆ.
2020ರಲ್ಲಿ ಭಾರತ ತಂಡ ಒಟ್ಟು 11 ಟಿ20ಐ ಪಂದ್ಯಗಳನ್ನಾಡಿದೆ. ಇದರಲ್ಲಿ ಸೋತಿದ್ದು ಬರೀ ಒಂದರಲ್ಲಿ ಮಾತ್ರ; ಅದು ಆಸ್ಟ್ರೇಲಿಯಾ ವಿರುದ್ಧ. ಶ್ರೀಲಂಕಾ ವಿರುದ್ಧದ ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಮುಂದೆ ಭಾರತ ತಂಡಕ್ಕೆ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ವಿರುದ್ಧ ಸರಣಿಯಿದೆ. ಅಲ್ಲೂ ಗೆದ್ದರೆ ಒಟ್ಟಿಗೆ ಸತತ 5 ಟಿ20ಐ ಸರಣಿಗಳನ್ನು ಗೆದ್ದಂತಾಗುತ್ತದೆ.