ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಆಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0ಯಿಂದ ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಗೆಲುವಿನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಆಡಿಲೇಡ್‌ನಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಬಹುದು ಎಂದು ಆ ಸ್ಟಾರ್ ಪ್ಲೇಯರ್ ರೆಕಾರ್ಡ್ ಹೇಳುತ್ತಿವೆ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಬೌಲರ್‌ಗಳು ಭರ್ಜರಿ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಇನ್ನು ಟೀಮ್ ಇಂಡಿಯಾದ ಬ್ಯಾಟರ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ಸೊಗಸಾದ ಪ್ರದರ್ಶನ ನಿಡಿದ್ದರು. ಆರಂಭಿಕ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ತಂಡ ತಮ್ಮ ಮೇಲೆ ಇಟ್ಟ ನಂನಿಕೆಗೆ ಪೂರಕವಾಗಿ ಆಟವಾಡಿದ್ದರು. ಇನ್ನು ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹ ಅಮೋಘ ಪ್ರದರ್ಶನ ನೀಡಿ, ಮೂರಂಕಿ ಮುಟ್ಟಿದ್ದರು. ಇದರ ಪರಿಣಾಮ ಭಾರತ ಗೆಲುವಿನ ನಗೆ ಬೀರಲು ಸಾಧ್ಯವಾಗಿತ್ತು.

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಆಡಿಲೇಡ್ ಅಂಗಳ ಅಚ್ಚು ಮೆಚ್ಚು. ಈ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆ ಭರ್ಜರಿಯಾಗಿವೆ. ಕೊಹ್ಲಿ ಈ ಮೈದಾನದಲ್ಲಿ ಇದುವರೆಗೆ ಒಟ್ಟು 4 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಆಡಿದ ಎಂಟು ಇನ್ನಿಂಗ್ಸ್‌ಗಳಲ್ಲಿ ಕಿಂಗ್ ಕೊಹ್ಲಿ 63.62ರ ಸರಾಸರಿಯಲ್ಲಿ 509 ರನ್ ಗಳಿಸಿದ್ದಾರೆ. ವಿರಾಟ್ ಅಡಿಲೇಡ್‌ನಲ್ಲಿ ಮೂರು ಶತಕ ಮತ್ತು ಒಂದು ಅರ್ಧ ಶತಕ ಗಳಿಸಿದ್ದಾರೆ.
ಕೊಹ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಕಣಕ್ಕೆ ಇಳಿದಾಗ 74 ರನ್‌ಗಳ ಪ್ರಬಲ ಇನ್ನಿಂಗ್ಸ್ ಕಟ್ಟಿದ್ದರು. ಆದರೆ ಇದೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್ ಕೇವಲ 4 ರನ್‌ಗಳಿಗೆ ಆಟ ಮುಗಿಸಿದ್ದರು. ಈ ಅಂಗಳದಲ್ಲಿ ವಿರಾಟ್ ಕೊಹ್ಲಿ ದೊಡ್ಡ ಇನಿಂಗ್ಸ್ ಸುಲಭವಾಗಿ ಕಟ್ಟಬಲ್ಲರು ಎದು ಅಂಕಿ ಅಂಶಗಳು ತಿಳಿಸುತ್ತವೆ. ವಿರಾಟ್ ಕೊಹ್ಲಿ ಆಡಿಲೇಡ್ ಅಂಗಳದಲ್ಲಿಎಲ್ಲ ಫಾರ್ಮೆಟ್‌ಗಳಲ್ಲೂ ಅಬ್ಬರಿಸಿದ್ದಾರೆ. ಇವರು ಈ ಅಂಗಳದಲ್ಲಿ ಆಡಿದ 11 ಪಂದ್ಯಗಳಲ್ಲಿ 73.61 ರ ಸರಾಸರಿಯಲ್ಲಿ 957 ರನ್ ಸಿಡಿಸಿದ್ದಾರೆ. ಈ ವೇಳೇ ಐದು ಶತಕ ಸೇರಿವೆ.

ಪರ್ತ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಸುಮಾರು 16 ತಿಂಗಳುಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದರು. ಹೀಗಾಗಿ ಇವರ ಮೇಲೆ ವಿಶ್ವಾಸ ಹೆಚ್ಚಿದೆ. ಎರಡನೇ ಟೆಸ್ಟ್‌ನಲ್ಲೂ ವಿರಾಟ್ ಅಬ್ಬರದ ಆಟವನ್ನು ಪ್ರದರ್ಶಿಸಿದರೆ, ಟೀಮ್ ಇಂಡಿಯಾ ಈ ಟೆಸ್ಟ್ ಪಂದ್ಯವನ್ನು ಸಹ ಗೆಲ್ಲಬಹುದು. ಅಲ್ಲದೆ ಸರಣಿಯಲ್ಲಿ 2-0 ಮನ್ನಡೆ ಸಾಧಿಸಬಹುದು.