IND vs AUS: ಆಡಿಲೇಡ್ ತಲುಪಿದ ಟೀಮ್ ಇಂಡಿಯಾ ಆಟಗಾರರು: ಆಸ್ಟ್ರೇಲಿಯಾ ಪ್ರಧಾನಿ ಭೇಟಿ
ಬಾರ್ಡರ್ ಗವಸ್ಕರಾರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 1-0 ಮುನ್ನಡೆ ಸಾಧಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಡಿಲೇಡ್‌ನಲ್ಲಿ ಡಿಸೆಂಬರ್ 6 ರಿಂದ 10 ರವರೆಗೆ ನಡೆಯಲಿದೆ. ಇದು ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಿದ್ದು, ಭಾರತೀಯ ಕಾಲಮಾನ ಬೆಳಗ್ಗೆ 9:30 ಗಂಟೆಗೆ ಆರಂಭವಾಗಲಿದೆ.
ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅದ್ಭುತ ಜಯ ಸಾಧಿಸಿದ ನಂತರ ಟೀಮ್ ಇಂಡಿಯಾ ಕ್ಯಾನ್‌ಬೆರಾ ತಲುಪಿದೆ. ಶನಿವಾರದಿಂದ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ಆಸ್ಟ್ರೇಲಿಯಾ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧ ಭಾರತ ಎ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಅಭ್ಯಾಸ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಟೀಮ್ ಇಂಡಿಯಾ ಆಟಗಾರರು ಕ್ಯಾನ್‌ಬೆರಾ ತಲುಪಿರುವ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಚಿಕೊಂಡಿದೆ.

ರೋಹಿತ್ ಶರ್ಮಾ ನೇತೃತ್ವದ ತಂಡವು ಪರ್ತ್‌ನಿಂದ ಕ್ಯಾನ್‌ಬೆರಾಗೆ ಪ್ರಯಾಣಿಸುತ್ತಿರುವುದು ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಕ್ಯಾನ್‌ಬೆರಾದಲ್ಲಿ ನಡೆಯಲಿರುವ ಪಿಂಕ್ ಬಾಲ್ ಅಭ್ಯಾಸ ಪಂದ್ಯವು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಅಡಿಲೇಡ್‌ನಲ್ಲಿ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್‌ಗೆ ಮೊದಲು ಇದು ಏಕೈಕ ಅಭ್ಯಾಸ ಪಂದ್ಯವಾಗಿದೆ. ಈ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾಯಕ ರೋಹಿತ್ ಶರ್ಮಾಗೆ ಇದು ಮೊದಲ ಪಂದ್ಯವಾಗಿದ್ದು, ಎರಡನೇ ಮಗುವಿನ ಜನನದ ಕಾರಣ ಪರ್ತ್ ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಾಗಿರಲಿಲ್ಲ.
ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ಗೆ ನಾಯಕ ರೋಹಿತ್ ಶರ್ಮಾ ಭಾರತ ತಂಡದ ಆಡುವ ಹನ್ನೊಂದರ ಬಳಗವನ್ನು ಸೇರಲಿದ್ದಾರೆ. ಕ್ಯಾನ್‌ಬೆರಾದಲ್ಲಿ ನಡೆಯಲಿರುವ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶುಭಮನ್ ಗಿಲ್ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಆಡದಿದ್ದರೆ, ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಮತ್ತೊಂದೆಡೆ ಕನ್ನಡಿಗ ದೇವದತ್ ಪಡಿಕ್ಕಲ್ ಆಡುವ ಹನ್ನೊಂದರಿಂದ ಹೊರಗುಳಿಯಬೇಕಾಗುತ್ತದೆ. ಪರ್ತ್ ಟೆಸ್ಟ್‌ಗೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಶುಭಮನ್ ಗಿಲ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು.
ಆಸ್ಟ್ರೇಲಿಯಾ ಪ್ರಧಾನಿ ಭೇಟಿ
ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಕ್ಯಾನ್‌ಬೆರಾದಲ್ಲಿದ್ದಾರೆ. ಗುರುವಾರ ಕ್ಯಾನ್‌ಬೆರಾದಲ್ಲಿರುವ ಸಂಸತ್ ಭವನದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಟೀಮ್ ಇಂಡಿಯಾ ಆಟಗಾರರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ನಂತರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಆಂಥೋನಿ ಅಲ್ಬನೀಸ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪರ್ತ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಅವರನ್ನು ಆಂಥೋನಿ ಅಲ್ಬನೀಸ್ ಹೊಗಳಿದ್ದಾರೆ.
ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ
ಶುಭಮನ್ ಗಿಲ್ ಇನ್ನೂ ನೆಟ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿಲ್ಲ. ಹೀಗಾಗಿ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಚೇತರಿಸಿಕೊಳ್ಳದೆ ಗಿಲ್ ಅವರನ್ನು ಆಡಿಸುವ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಮುಂದಾಗುವುದು ಅನುಮಾನ. ಒಂದು ವೇಳೆ ಶುಭಮನ್ ಗಿಲ್ ಫಿಟ್ ಆಗಿದ್ದರೆ, ಧ್ರುವ್ ಜುರೆಲ್ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಆರಂಭಿಕ ಬ್ಯಾಟರ್ ಆಗಿ ಯಶಸ್ಸು ಕಂಡಿದ್ದಾರೆ. ಮೊದಲೆರಡು ಇನ್ನಿಂಗ್ಸ್‌ಗಳಲ್ಲಿ ಕೆಎಲ್ ರಾಹುಲ್ 26 ಮತ್ತು 77 ರನ್‌ಗಳನ್ನು ಕಲೆ ಹಾಕಿದ್ದಾರೆ. ಈಗ ರೋಹಿತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸೇರಿದ್ದು, ಬ್ಯಾಟಿಂಗ್ ಕ್ರಮಾಂಕದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ಓಟವನ್ನು ಕಾಯ್ದುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications