ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಇಂದಿನಿಂದ ಅದ್ದೂರಿಯಾಗಿ ಆರಂಭವಾಗಿದೆ. ಭಾರತ ತಂಡವು ಫೆಬ್ರವರಿ 20 ರಂದು ಅಂದರೆ ಗುರುವಾರ ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೂ ಮುನ್ನ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ 5 ಬ್ಯಾಟರ್ಸ್ ಮಿಂಚಲು ಸಜ್ಜಾಗಿದ್ದಾರೆ. ಈ ಐವರು ಸಿಡಿದೆದ್ದರೆ ಬಾಂಗ್ಲಾದೇಶವನ್ನು ಸುಲಭವಾಗಿ ಸೋಲಿಸಬಹುದು. ಆದರೆ ಬಾಂಗ್ಲಾದೇಶ ತಂಡವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ.
ಬಾಂಗ್ಲಾದೇಶ ತಂಡವು ಕೆಲವು ಸಂದರ್ಭಗಳಲ್ಲಿ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡಕ್ಕೆ ಆಘಾತ ನೀಡಿದೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಎಚ್ಚರಿಕೆ ಆಟವನ್ನು ಆಡಬೇಕಿದೆ. ಬಾಂಗ್ಲಾದೇಶ ಬೌಲರ್‌ಗಳಿಗೆ ಬೆವರಿಳಿಸಬಲ್ಲ ಬ್ಯಾಟರ್ಸ್ ಬಗ್ಗೆ ಇಲ್ಲಿದೆ ಮಾಹಿತಿ.

ಶುಭಮನ್ ಗಿಲ್: ಟೀಮ್ ಇಂಡಿಯಾದ ಬಲಗೈ ಆರಂಭಿಕ ಬ್ಯಾಟರ್ ಮತ್ತು ಉಪನಾಯಕ ಶುಭಮನ್ ಗಿಲ್ ಚೊಚ್ಚಲ
ಚಾಂಪಿಯನ್ಸ್ ಟ್ರೋಫಿ ಆಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಬ್ಬರಿಸುವ ಗಿಲ್ ತಮ್ಮ ಲಯ ಕಂಡುಕೊಂಡಿದ್ದಾರೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಅಬ್ಬರಿಸುವ ನಿರೀಕ್ಷೆಯಿದೆ. ಗಿಲ್ ಭಾರತ ಪರ 50 ಏಕದಿನ ಪಂದ್ಯಗಳಲ್ಲಿ 7 ಶತಕ ಮತ್ತು 15 ಅರ್ಧಶತಕಗಳ ನೆರವಿನಿಂದ ಒಟ್ಟು 2587 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ದ್ವಿಶತಕವೂ ಸೇರಿದೆ.
ಶ್ರೇಯಸ್ ಅಯ್ಯರ್: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರಿಗೂ 2025ರ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಮೊದಲ ಆವೃತ್ತಿಯಾಗಿದೆ. ಅಯ್ಯರ್ ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಅಬ್ಬರಿಸಬಹುದು. ಅಯ್ಯರ್ ಭಾರತ ಪರ 65 ಏಕದಿನ ಪಂದ್ಯಗಳಲ್ಲಿ 5 ಶತಕ ಮತ್ತು 20 ಅರ್ಧಶತಕಗಳೊಂದಿಗೆ 2062 ರನ್ ಗಳಿಸಿದ್ದಾರೆ.
ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ದಾಖಲೆ ಸೃಷ್ಟಿಸಲು ತಯಾರಾಗಿದ್ದಾರೆ. ರೋಹಿತ್ 11 ಸಾವಿರ ಏಕದಿನ ರನ್‌ಗಳಿಗೆ 12 ರನ್‌ಗಳ ದೂರದಲ್ಲಿದ್ದಾರೆ. ಇದುವರೆಗೆ ಭಾರತದ ಪರ 268 ಪಂದ್ಯಗಳಲ್ಲಿ ರೋಹಿತ್ 32 ಶತಕ ಮತ್ತು 57 ಅರ್ಧಶತಕಗಳೊಂದಿಗೆ 10988 ರನ್ ಗಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ 10 ಪಂದ್ಯಗಳಲ್ಲಿ 1 ಶತಕ ಮತ್ತು 4 ಅರ್ಧಶತಕಗಳೊಂದಿಗೆ 481 ರನ್ ಕಲೆ ಹಾಕಿದ್ದಾರೆ.
ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ಮತ್ತು 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಬಿರುಗಾಳಿಯನ್ನು ಸೃಷ್ಟಿಸುತ್ತಿರುವ ವಿರಾಟ್ ಕೊಹ್ಲಿ ಕೂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚಬಹುದು. ವಿರಾಟ್ 297 ಏಕದಿನ ಪಂದ್ಯಗಳಲ್ಲಿ 50 ಶತಕ ಮತ್ತು 73 ಅರ್ಧಶತಕಗಳೊಂದಿಗೆ 13963 ರನ್ ಗಳಿಸಿದ್ದಾರೆ. ವಿರಾಟ್ 14000 ರನ್ ಪೂರ್ಣಗೊಳಿಸಲು ಕೇವಲ 37 ರನ್‌ಗಳ ಅಗತ್ಯವಿದೆ. ಇದರೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಅವರು ಮತ್ತಷ್ಟು ಪ್ರಾಬಲ್ಯ ಸಾಧಿಸಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ 13 ಪಂದ್ಯಗಳಲ್ಲಿ 5 ಅರ್ಧಶತಕಗಳೊಂದಿಗೆ 529 ರನ್ ಗಳಿಸಿದ್ದಾರೆ.
ಕೆಎಲ್ ರಾಹುಲ್: ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಸಂಚಲನ ಮೂಡಿಸಬಹುದು. ಟೀಮ್ ಇಂಡಿಯಾ ಪರ ರಾಹುಲ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ರಾಹುಲ್ 80 ಏಕದಿನ ಪಂದ್ಯಗಳಲ್ಲಿ 7 ಶತಕ ಮತ್ತು 18 ಅರ್ಧಶತಕಗಳೊಂದಿಗೆ 2903 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಹೊರತಾಗಿ, ವಿಕೆಟ್ ಹಿಂದೆ ತಮ್ಮ ಗ್ಲೌಸ್‌ಗಳೊಂದಿಗೆ ಅವರು ಅದ್ಭುತಗಳನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ.