ಸೋಮವಾರ, ಸೆಪ್ಟೆಂಬರ್ 4ರಂದು ಕ್ಯಾಂಡಿಯಲ್ಲಿ ನೇಪಾಳ ತಂಡದ ವಿರುದ್ಧ ಗೆಲುವು ದಾಖಲಿಸಿ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದರೂ, ಭಾರತೀಯ ಕ್ರಿಕೆಟ್ ತಂಡದ ಪಾಳಯದಲ್ಲಿ ಸಂತೋಷ ಎದ್ದು ಕಾಣುತ್ತಿಲ್ಲ.
ನೇಪಾಳ ವಿರುದ್ಧ ನಡೆದ ಕೆಲವು ಪ್ರಮಾದಗಳು ತಂಡದ ಮ್ಯಾನೇಜ್‌ಮೆಂಟ್ ಅನ್ನು ಚಿಂತೆಗೀಡು ಮಾಡಿದೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಅಗ್ರಕ್ರಮಾಂಕದ ಬ್ಯಾಟಿಂಗ್ ವಿಫಲವಾದರೆ, ಎರಡನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಕೆಟ್ಟ ಫೀಲ್ಡಿಂಗ್‌ನಿಂದ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಬೇಕಾಯಿತು.

ಭಾರತದ ನಾಯಕ ರೋಹಿತ್ ಶರ್ಮಾ ಅವರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಮೊದಲ ಐದು ಓವರ್‌ಗಳಲ್ಲಿ ಕುಶಾಲ್ ಭುರ್ಟೆಲ್ ಮತ್ತು ಆಸಿಫ್ ಶೇಖ್ ಅವರ ಮೂರು ಕ್ಯಾಚ್‌ಗಳನ್ನು ಭಾರತೀಯ ಫೀಲ್ಡರ್‌ಗಳು ಕೈಬಿಟ್ಟರು. ಹೀಗಾಗಿ ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 65 ರನ್‌ಗಳು ಹರಿದುಬಂದವು.
ಮೊದಲಿಗೆ ಶ್ರೇಯಸ್ ಅಯ್ಯರ್ ಸ್ಲಿಪ್‌ನಲ್ಲಿ ಸುಲಭ ಕ್ಯಾಚ್ ಕೈಬಿಟ್ಟರು. ನಂತರ ವಿರಾಟ್ ಕೊಹ್ಲಿ ಶಾರ್ಟ್ ಕವರ್‌ನಲ್ಲಿ ಕೈಚೆಲ್ಲಿದರು ಮತ್ತು ಬಳಿಕ ವಿಕೆಟ್‌ಕೀಪರ್ ಇಶಾನ್ ಕಿಶನ್ ತಮ್ಮ ಗ್ಲೌಸ್‌ಗಳ ನಡುವೆ ಚೆಂಡನ್ನು ಬಿಟ್ಟರು. ಇದು ಭಾರತ ತಂಡಕ್ಕೆ ಆರಂಭದಲ್ಲಿ ದುಬಾರಿಯಾಯಿತು.

ಇನ್ನು ಬೌಂಡರಿ ಗೆರೆ ಬಳಿ ಶಾರ್ದೂಲ್ ಠಾಕೂರ್ ಅವರ ಒಂದು ನಿಧಾನಗತಿ ಫೀಲ್ಡಿಂಗ್ ಸೇರಿದಂತೆ ಕೆಲವು ಫೀಲ್ಡಿಂಗ್ ದೌರ್ಬಲ್ಯಗಳಿದ್ದವು. ಇದರಿಂದ ನಾಯಕ ರೋಹಿತ್ ಶರ್ಮಾ ಸಂತೋಷದಾಯಿಕವಾಗಿರಲಿಲ್ಲ. ಮುಖದಲ್ಲಿ ಸಿಡಿಮಿಡಿ ಎದ್ದುಕಾಣುತ್ತಿತ್ತು.
ಇನ್ನು ಮಳೆ ಬಂದು ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಿದಾಗ ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್ ಅವರು ಮೈದಾನದಿಂದ ಹೊರನಡೆಯುತ್ತಿದ್ದರು. ಆಗ ನಾಯಕ ರೋಹಿತ್ ಶರ್ಮಾ ಒಬ್ಬಂಟಿಯಾಗಿ ನಿಂತು ಈ ಆಟಗಾರರನ್ನು ಗುರಾಯಿಸಿದರು. ಇದು ಸಿಟ್ಟಿನಿಂದ ಕೂಡಿತ್ತು ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು.
ಎದುರಿಗೆ ಹೋಗುತ್ತಿದ್ದರೂ, ಮಾತನಾಡಿಸುವುದಿರಲಿ, ನಾಯಕನತ್ತ ನೋಡಲೂ ಮುಂದಾಗಲಿಲ್ಲ. ರೋಹಿತ್ ಶರ್ಮಾ ಸ್ವಲ್ಪ ಅಸಹನೆಯಿಂದಲೇ ಸಹ ಆಟಗಾರರತ್ತ ಅಸಹನೆಯ ನೋಟ ಬೀರಿದರು.
ಇನ್ನು ಪಂದ್ಯದ ಕುರಿತು ಮಾತನಾಡುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪೌಡೆಲ್ ನಾಯಕತ್ವದ ನೇಪಾಳ ತಂಡ ಆಸಿಫ್ ಶೇಖ್ ಅವರ ಅರ್ಧಶತಕದ ಸಹಾಯದಿಂದ 48.2 ಓವರ್‌ಗಳಲ್ಲಿ 230 ರನ್ ಗಳಿಸಿ ಆಲೌಟ್ ಆಗಿತ್ತು.
231 ರನ್‌ಗಳ ಗೆಲುವಿನ ಗುರಿ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 2.1 ಓವರ್‌ಗಳಲ್ಲಿ 17 ರನ್ ಗಳಾಗಿದ್ದಾಗ ಮಳೆ ಬಂದು ಮತ್ತೆ ಆಟವನ್ನು ಸ್ಥಗಿತಗೊಳಿಸಲಾಯಿತು.
ನಂತರ, ಡಿಎಲ್ಎಸ್ ವಿಧಾನದಡಿ ಭಾರತಕ್ಕೆ 23 ಓವರ್‌ಗಳಲ್ಲಿ 145 ರನ್ ಗಳಿಸುವ ಹೊಸ ಗುರಿ ನೀಡಲಾಯಿತು. ಆಗ ಭಾರತ ತಂಡ 20.1 ಓವರ್‌ಗಳಲ್ಲಿ ಯಾವುದೇ ನಷ್ಟವಿಲ್ಲದೆ 147 ರನ್ ಗಳಿಸಿ ಸುಲಭವಾಗಿ ಗೆಲುವಿನ ದಡ ಸೇರಿತು.
ಭಾರತ ತಂಡದ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ 147 ರನ್‌ಗಳ ಜೊತೆಯಾಟದ ಮೂಲಕ ಅಜೇಯ ಆಟವಾಡಿ, ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ 10 ವಿಕೆಟ್‌ಗಳ ಗೆಲುವು ತಂದುಕೊಟ್ಟರು.
ರೋಹಿತ್ 59 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಮೂಲಕ 74 ರನ್ ಮತ್ತು ಶುಭ್ಮನ್ ಗಿಲ್ 62 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 67 ರನ್ ಗಳಿಸಿ ಫಾರ್ಮ್‌ಗೆ ಮರಳಿದರು.
ನೇಪಾಳ ತಂಡದ ಪರ ಆಸಿಫ್ ಶೇಖ್ 58 ರನ್ ಗಳಿಸಿದರೆ, ಸೋಂಪಾಲ್ ಕಾಮಿ 48 ರನ್, ಕುಶಾಲ್ ಭುರ್ಟೆಲ್ 38 ರನ್‌ಗಳ ಸಹಾಯದಿಂದ 230 ರನ್ ಗಳಿಸಲು ನೆರವಾದರು.
ಇನ್ನು 50-ಓವರ್‌ಗಳ ಏಷ್ಯಾ ಕಪ್ ಪಂದ್ಯಾವಳಿಯನ್ನು ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ತಯಾರಿ ಎಂದು ನೋಡಲಾಗುತ್ತದೆ. ಆದರೆ ಮಳೆಯಿಂದ ಪ್ರಮುಖ ಪಂದ್ಯಗಳು ಅಪೂರ್ಣವಾಗುತ್ತಿವೆ. ಕೊಲಂಬೊದಲ್ಲಿ ನಡೆಯುವ ಮುಂದಿನ ಪಂದ್ಯಗಳಿಗೆ ಸ್ಥಳ ಬದಲಾವಣೆಯನ್ನು ಚರ್ಚಿಸಲು ಸಂಘಟಕರು ಯೋಜಿಸುತ್ತಿದ್ದಾರೆ.